Advertisement

ಮನ ಗೆಲ್ಲಲು ಸಿದ್ಧತೆ: ಅಲ್ಪಸಂಖ್ಯಾಕರ ಮನ ಸೆಳೆಯಲು ಬಿಜೆಪಿ ಹೊಸ ಕಾರ್ಯ ನೀತಿ

12:48 AM Mar 09, 2023 | Team Udayavani |

ಲಕ್ನೋ/ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಅಲ್ಪಸಂಖ್ಯಾತ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಉತ್ತರ ಪ್ರದೇಶದ ಮುಜಾಫ‌ರ್‌ನಗರದಿಂದ ಮುಂದಿನ ತಿಂಗಳು ಈ ಕಾರ್ಯಕ್ರಮ ಶುರುವಾಗಲಿದೆ.

Advertisement

2014ರಲ್ಲಿ ಪಶ್ಚಿಮ ಉತ್ತರ ಪ್ರದೇಶದ ಎಲ್ಲಾ 18 ಲೋಕಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಆದರೆ, ಹಿಂದಿನ ಚುನಾವಣೆಯಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಮೈತ್ರಿ ಕೂಟ ಏರ್ಪಟ್ಟಿದ್ದರಿಂದ ಬಿಎಸ್‌ಪಿ ನಗಿನಾ, ಅನ್ರೋಹಾ, ಬಿಜೂ°ರ್‌ ಮತ್ತು ಸಹರಾನ್ಪುರಗಳಲ್ಲಿ ಗೆದ್ದರೆ, ಮೊರಾದಾಬಾದ್‌ ಮತ್ತು ಸಂಭಾಲ್‌ನಲ್ಲಿ ಎಸ್‌ಪಿ ಜಯ ಸಾಧಿಸಿತ್ತು.

ಉತ್ತರ ಪ್ರದೇಶ ಬಿಜೆಪಿ ಘಟಕದ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಕುನ್ವರ್‌ ಬಸಿಲ್‌ ಅಲಿ ಮಾತನಾಡಿ ಪಶ್ಚಿಮ ಉತ್ತರ ಪ್ರದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ 2.5 ಲಕ್ಷದಿಂದ 3 ಲಕ್ಷ ವರೆಗೆ ಅಲ್ಪಸಂಖ್ಯಾತ ಸಮುದಾಯದವರು ಇದ್ದಾರೆ. ಅವರು, ಕೃಷಿ ಚಟುವಟಿಕೆ ಮತ್ತು ಇತರ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸಹರಾನ್ಪುರದಲ್ಲಿ 1.8 ಲಕ್ಷ ರಜಪೂತ್‌ ಮುಸ್ಲಿಮರು, 2013ರಲ್ಲಿ ಭೀಕರ ಹಿಂಸಾಚಾರಕ್ಕೆ ತುತ್ತಾಗಿದ್ದ ಮುಜಾಫ‌ರ್‌ನಗರದಲ್ಲಿ 80 ಸಾವಿರ ಮಂದಿ ಇದ್ದಾರೆ ಎಂದರು. ಶಾಮ್ಲಿಯಲ್ಲಿ ಒಂದು ಲಕ್ಷ ಮಂದಿ ಮುಸ್ಲಿಂ ಗುಜ್ಜರ್‌ ಸಮುದಾಯದವರು, ಮುಜಾಫ‌ರ್‌ನಗರದಲ್ಲಿ ಒಂದು ಲಕ್ಷ ಮುಸ್ಲಿಂ ಜಾಟರು ಇದ್ದಾರೆ ಎಂದಿದ್ದಾರೆ.

ಸಮುದಾಯದ ಬೆಂಬಲ ಗಳಿಸುವ ನಿಟ್ಟಿನಲ್ಲಿ “ಸ್ನೇಹ ಮಿಲನ: ಒಂದು ದೇಶ; ಒಂದು ಡಿಎನ್‌ಎ ಸಮ್ಮೇಳನ’ ಆಯೋಜನೆ ಮಾಡಲಿದೆ. ಆದರೆ, ಈ ಬಗ್ಗೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ ಹಾಗೂ ಮುಜಾಫ‌ರ್‌ನಗರ ಕ್ಷೇತ್ರದ ಸಂಸದ ಸಂಜೀವ್‌ ಬಾಲ್ಯಾನ್‌, ಉತ್ತರ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಭೂಪೇಂದ್ರ ಚೌಧರಿ, ಉತ್ತರ ಪ್ರದೇಶ ಸಚಿವ ಸೋಮೇಂದ್ರ ತೋಮರ್‌ ಭಾಗವಹಿಸಲಿದ್ದಾರೆ.

ಮನವರಿಕೆ ಉದ್ದೇಶ:
ರಜಪೂತ್‌ ಮುಸ್ಲಿಮರು ಸಚಿವ ರಾಜನಾಥ್‌ ಸಿಂಗ್‌, ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್‌, ಜಾಟ್‌ ಮುಸ್ಲಿಮರು ಸಂಜೀವ್‌ ಬಾಲ್ಯಾನ್‌, ಬಿಜೆಪಿ ನಾಯಕ ಭೂಪೇಂದ್ರ ಸಿಂಗ್‌ ಚೌಧರಿ ಅವರನ್ನು ತಮ್ಮ ನಾಯಕರೆಂದು ಪರಿಗಣಿಸುವಂತೆ ಮನವರಿಕೆ ಮಾಡಿಸುವುದೇ ಈ ಕಾರ್ಯಕ್ರಮದ ಉದ್ದೇಶ. ಈ ಪ್ರದೇಶದಲ್ಲಿ ತ್ಯಾಗಿಗಳು, ಗುಜ್ಜರ್‌ಗಳೂ ಇದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ಅಲ್ಪಸಂಖ್ಯಾತ ಸಮುದಾಯದವರ ಮನ ಗೆಲ್ಲುವ ಬಗ್ಗೆ ಪ್ರಧಾನಿ ಮೋದಿ ಒತ್ತು ನೀಡಿದ್ದರು.

Advertisement

ಕ್ಷೇತ್ರ ಅಲ್ಪಸಂಖ್ಯಾತರು (ಶೇಕಡಾವಾರು)
ಬಿಜೂರ್‌ 38.33
ಅನ್ರೋಹಾ 37.5
ಕೈರಾನಾ 38.53
ನಗಿನಾ 42
ಸಂಭಾಲ್‌ 46
ಮುಜಾಫ‌ರ್‌ನಗರ 37
ರಾಮಪುರ 49.14

ಪ್ರಧಾನಿ ನಡೆಸಲಿದ್ದಾರೆ 100 ರ‍್ಯಾಲಿ
ಪಶ್ಚಿಮ ಬಂಗಾಳ, ಒಡಿಶಾ ಮತ್ತು ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 100 ರ‍್ಯಾಲಿ ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಒಟ್ಟು 160 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸೆಪ್ಟೆಂಬರ್‌ನಿಂದ ರ್ಯಾಲಿಗಳು ಶುರುವಾಗಲಿವೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖೀಸಿ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಇದರ ಜತೆಗೆ ಕೇಂದ್ರ ಸರ್ಕಾರದ ವತಿಯಿಂದ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಬಿಜೆಪಿಯತ್ತ ಹೆಚ್ಚು ಜನರನ್ನು ಆಕರ್ಷಿಸಿ ಮತ ಗೆಲ್ಲುವ ಯೋಜನೆಯನ್ನೂ ಬಿಜೆಪಿ ಹಾಕಿಕೊಂಡಿದೆ. ಈಗಾಗಲೇ ಮಹಿಳೆಯರನ್ನು ಪಕ್ಷದತ್ತ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಈ ಬಾಗದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ತೆಲಂಗಾಣ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾಗಳಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಪ್ರವರ್ಧಮಾನಕ್ಕೆ ತಂದು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದೇ ಇದರ ಉದ್ದೇಶ. ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರು ಇದ್ದಾರೆ. ಆದರೆ, ಅವರ ಸಂಖ್ಯೆ ಕಡಿಮೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next