Advertisement
ವರ್ಷದ ಕೊನೆಗೆ ಇನ್ನು ಕೇವಲ ಎರಡು ತಿಂಗಳುಗಷ್ಟೇ ಬಾಕಿ ಇದೆ. ವರ್ಷದ ಆರಂಭದಲ್ಲಿಯೇ ಭರ್ಜರಿಯಾಗಿ ಓಪನಿಂಗ್ ಪಡೆದುಕೊಂಡ ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆಯಂತೆಯೇ, ಈ ವರ್ಷ ಚಿತ್ರಗಳ ಸಂಖ್ಯೆ ಮತ್ತು ಅವುಗಳ ಬಜೆಟ್ ಎರಡರಲ್ಲೂ ಏರಿಕೆಯಾಗಿದೆ. ಅಂಕಿ-ಅಂಶಗಳನ್ನು ಎದುರಿಗಿಟ್ಟುಕೊಂಡು ನೋಡುವುದಾದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಇಲ್ಲಿಯವರೆಗೆ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಮತ್ತು ಅವುಗಳ ಬಜೆಟ್ ಎರಡೂ ದುಪ್ಪಟ್ಟಾಗಿದೆ.
Related Articles
ಹಾಗಾಗಿ ಗಾಂಧಿನಗರದ ಮಟ್ಟಿಗೆ ಹೇಳುವುದಾದರೆ, ಕಳೆದ ಜನವರಿಯಿಂದ ಇಲ್ಲಿಯವರೆಗೆ ಒಂದು ಲೆಕ್ಕವಾದರೆ, ಇನ್ನು ಮುಂದಿನ ಎರಡು ತಿಂಗಳಲ್ಲಿ ಮತ್ತೂಂದು ಲೆಕ್ಕ ಎನ್ನಬಹುದು. ಈಗಾಗಲೇ ಬಿಡುಗಡೆಯಾಗಿರುವಷ್ಟೇ ದೊಡ್ಡ ಸಂಖ್ಯೆಯಲ್ಲಿ, ಇನ್ನು ಬಾಕಿಯಿರುವ ಎರಡು ತಿಂಗಳಲ್ಲಿ ದಶಕೋಟಿ ಬಜೆಟ್ ದಾಟುವ ಚಿತ್ರಗಳು ತೆರೆಗೆ ಬರುತ್ತಿವೆ ಅನ್ನೋದು ಗಮನಿಸಬೇಕಾದ ಸಂಗತಿ. ಇನ್ನು ವರ್ಷದ ಕೊನೆಗೆ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಾದ ಶಿವರಾಜಕುಮಾರ್ ಅಭಿನಯದ “ಆಯುಷ್ಮಾನ್‌ಭವ’, “ದ್ರೋಣ’, ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ’, ದರ್ಶನ್ ಅಭಿನಯದ “ಒಡೆಯ’, ಧ್ರುವ ಸರ್ಜಾ ಅಭಿನಯದ “ಪೊಗರು’, ಸುದೀಪ್ ಅಭಿನಯದ “ಕೋಟಿಗೊಬ್ಬ-3′, ರಕ್ಷಿತ್ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ’ ಚಿತ್ರಗಳು ಈ ಪಟ್ಟಿಯಲ್ಲಿ ಮೊದಲಿಗೆ ಬರುತ್ತವೆ.
Advertisement
ಇವುಗಳ ನಂತರ ಕೃಷ್ಣ ಅಜೇಯರಾವ್ ಅಭಿನಯದ “ಕೃಷ್ಣ ಟಾಕೀಸ್’, ಮದರಂಗಿ ಕೃಷ್ಣ ಅಭಿನಯದ “ಲವ್ ಮಾಕ್ಟೇಲ್’, ನೀನಾಸಂ ಸತೀಶ್ ಅಭಿನಯದ “ಬ್ರಹ್ಮಚಾರಿ’, ಚಿರಂಜೀವಿ ಸರ್ಜಾ ಅಭಿನಯದ “ಶಿವಾರ್ಜುನ’, ವಸಿಷ್ಟ ಸಿಂಹ ಅಭಿನಯದ “ಕಾಲಚಕ್ರ’ ಧನಂಜಯ್ ಅಭಿನಯದ “ಪಾಪ್‌ಕಾರ್ನ್ ಮಂಕಿ ಟೈಗರ್’, ಪಾರೂಲ್ ಯಾದವ್ ಅಭಿನಯದ “ಬಟರ್‌ಫ್ಲೈ’, “ಭೀಮಸೇನ ನಳಮಹರಾಜ’, ಹೀಗೆ ಹೇಳುತ್ತ ಹೋದ್ರೆ ದೊಡ್ಡ ಪಟ್ಟಿಯೇ ಆಗುತ್ತದೆ. ಅಷ್ಟೇ ಅಲ್ಲದೆ ಈಗಾಗಲೇ ಸುಮಾರು 60ಕ್ಕೂ ಹೆಚ್ಚು ಹೊಸಬರ ಚಿತ್ರಗಳು ಈಗಾಗಲೇ ಸೆನ್ಸಾರ್ ಅನುಮತಿ ಪಡೆದುಕೊಂಡು ಬಿಡುಗಡೆಗೆಗಾಗಿ ಕಾದು ಕುಳಿತಿವೆ. ಇಲ್ಲಿವರೆಗೆ ಬಿಡುಗಡೆಯಾದ ಸಿನಿಮಾಗಳದ್ದು ಒಂದು ಲೆಕ್ಕವಾದರೆ ಇನ್ನೆರಡು ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳ ಬಜೆಟ್ ಲೆಕ್ಕವೇ ಬೇರೆ. ಅದಕ್ಕೆ ಕಾರಣ, ವರ್ಷದ ಕೊನೆಯಲ್ಲಿ ಒಂದಷ್ಟು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾಗುತ್ತಿವೆ. “ಅವನೇ ಶ್ರೀಮನ್ನಾರಾಯಣ’, “ಒಡೆಯ’, “ಪೊಗರು’, “ಕೋಟಿಗೊಬ್ಬ-3′, “ಆಯುಷ್ಮಾನ್ ಭವ’ ಸೇರಿದಂತೆ ಇನ್ನೂ ಹಲವು ಬಿಗ್ ಬಜೆಟ್ ಚಿತ್ರಗಳು ಪಟ್ಟಿಯಲ್ಲಿವೆ. ಇದರ ಜೊತೆಗೆ ಸಾಕಷ್ಟು ಹೊಸಬರು ಕೂಡಾ 2019ರಲ್ಲೇ ಬಿಡುಗಡೆಯಾಗಲು ತುದಿಗಾಲಿನಲ್ಲಿ ನಿಂತಿವೆ. ಇವೆಲ್ಲದರ ಬಜೆಟ್ ಅನ್ನು ಅಂದಾಜಿಸಿ ಹೇಳುವುದಾದರೆ 250 ಕೋಟಿ ದಾಟಲಿದೆ.
– ಜಿ.ಎಸ್.ಕಾರ್ತಿಕ ಸುಧನ್