Advertisement

ಲಕ್ಷ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಬಾಕಿ

12:39 AM Dec 25, 2019 | Team Udayavani |

ಬೆಂಗಳೂರು: ನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಲ್ಲ ಎಂದು ಗೋವಾ ಮೂಲದ “ವರ್ಲ್ಡ್ವೈಡ್‌ ವೆಟನರಿ ಸರ್ವೀಸ್‌ ಸೆಂಟರ್‌’ ಸಂಸ್ಥೆ ಬಿಬಿಎಂಪಿಗೆ ವರದಿ ನೀಡಿದೆ. ನಗರದಲ್ಲಿ 2012ರಲ್ಲಿ ನಾಯಿಗಳ ಸಮೀಕ್ಷೆ ನಡೆಸಲಾಗಿತ್ತು. ಏಳು ವರ್ಷಗಳ ನಂತರ ನಗರದ ಬೀದಿ ನಾಯಿಗಳ ಗಣತಿ ನಡೆಸಲಾಗಿದ್ದು, ಈ ಸಮೀಕ್ಷೆಯ ಪ್ರಕಾರ ಬಿಬಿಎಂಪಿ ಎಂಟು ವಲಯದಲ್ಲಿ ಬರೋಬ್ಬರಿ 3.09 ಲಕ್ಷ ಬೀದಿ ನಾಯಿಗಳಿವೆ.

Advertisement

ಅದರಲ್ಲಿ ಶೇ.54 ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2012ರ ಬಳಿಕ 2019ರ ಆಗಸ್ಟ್‌ ಮತ್ತು ಸೆಪ್ಟಂಬರ್‌ನಲ್ಲಿ ಗೋವಾದ “ವರ್ಲ್ಡ್ವೈಡ್‌ ವೆಟನರಿ ಸರ್ವೀಸ್‌ ಸೆಂಟರ್‌’ ಸಹಯೋಗದಲ್ಲಿ ಬಿಬಿಎಂಪಿ ಆ್ಯಪ್‌ ಆಧರಿಸಿ 198 ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಿದೆ. ನಗರದ 1,86,119 ಬೀದಿ ನಾಯಿಗಳಿಗೆ ಈಗಾಗಲೇ ಸಂತಾನಹರಣ ಚಿಕಿತ್ಸೆ ಮಾಡಲಾಗಿದ್ದು, 1,23,853 (ಶೇ 46)ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಬೇಕಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಿದೆ.

ಪಾಲಿಕೆಯ ಎಂಟು ವಲಯದಲ್ಲಿ ಒಟ್ಟು 3,09,972 ಬೀದಿ ನಾಯಿಗಳಿವೆ. ಅದರಲ್ಲಿ 2,06,213 ಗಂಡು, 1,03,759ಹೆಣ್ಣು ನಾಯಿ ಗಳಿವೆ. ನಗರದ ಕೇಂದ್ರ ಮೂರು ವಲಯದಲ್ಲಿ ಒಟ್ಟು 1,12,350 ಬೀದಿ ನಾಯಿಗಳಿದ್ದರೆ, ಐದು ಹೊರವಲಯದಲ್ಲಿ 1,97,622 ಬೀದಿ ನಾಯಿಗಳಿವೆ ಎಂದು ವರದಿ ತಿಳಿಸಿದೆ.

ಸಮೀಕ್ಷೆಯಲ್ಲಿ ಪರಿಗಣಿತ ಅಂಶಗಳು: ಬಿಬಿಎಂಪಿ ಪಶುಪಾಲನೆ ವಿಭಾಗದ ಅಧಿಕಾರಿ, ಸಿಬ್ಬಂದಿ ಆ್ಯಪ್‌ ಆಧಾರಿತವಾಗಿ ಪ್ರತಿ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ನಾಯಿ ಕಂಡು ಬರುವ ನಿರ್ದಿಷ್ಟ ಸ್ಥಳ, ನಾಯಿಯ ಬಣ್ಣ, ಲಿಂಗ ಹಾಗೂ ನಾಯಿಗೆ ಈಗಾಗಲೇ ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿದೆಯೇ ಅಥವಾ ಇಲ್ಲವೇ ಎಂಬ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿದೆ.

ಎಲ್ಲಿ ಎಷ್ಟು ಬೀದಿನಾಯಿ?
ವಲಯ ಗಂಡು ಹೆಣ್ಣು ಒಟ್ಟು
ದಕ್ಷಿಣ 25,857 13,709 39,566
ಪೂರ್ವ 26,214 18,089 44,303
ಪಶ್ಚಿಮ 14,614 11,867 28,481
ಯಲಹಂಕ 28,267 7,950 36,217
ಮಹದೇವಪುರ 30,060 16,274 46,334
ಬೊಮ್ಮನಹಳ್ಳಿ 26,273 12,667 38,940
ದಾಸರಹಳ್ಳಿ 17,403 5,767 23,170
ಆರ್‌ಆರ್‌ನಗರ 35,525 17,436 52,961
ಒಟ್ಟು 2,06,213 1,03,759 3,09,972

Advertisement

ಗೋವಾದ ವರ್ಲ್ಡ್ವೈಡ್‌ ವೆಟರ್ನರಿ ಸರ್ವೀಸ್‌ ಸೆಂಟರ್‌ ತಂತ್ರಜ್ಞಾನ ಆಧಾರಿತ ವಾಗಿ ಉಚಿತವಾಗಿ ಸಮೀಕ್ಷಾ ವರದಿ ನೀಡಿದೆ. ಇನ್ನು ಮುಂದೆ ಪ್ರತಿವರ್ಷ ಬೀದಿನಾಯಿ ಸಮೀಕ್ಷೆ ನಡೆಸಲಾಗುವುದು. ಉಳಿದ ಶೇ.46 ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಡಿ.ರಂದೀಪ್‌, ಬಿಬಿಎಂಪಿ ವಿಶೇಷ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next