Advertisement

ನಾಲ್ವರಲ್ಲಿ ಒಬ್ಬರಿಗೆ ಪಾರ್ಶ್ವವಾಯು ಸಾಧ್ಯತೆ

12:33 AM Oct 30, 2019 | Lakshmi GovindaRaju |

ಬೆಂಗಳೂರು: ಬದಲಾದ ಜೀವನ ಶೈಲಿಯಿಂದ ಪಾರ್ಶ್ವವಾಯು (ಸ್ಟ್ರೋಕ್‌) ಸಮಸ್ಯೆ ಹೆಚ್ಚಾಗುತ್ತಿದ್ದು, ವಿಶ್ವ ಪಾರ್ಶ್ವವಾಯು ಸಂಸ್ಥೆಯ ಅಧ್ಯಯನಗಳ ಪ್ರಕಾರ ನಾಲ್ಕು ಮಂದಿಯಲ್ಲಿ ಒಬ್ಬರಿಗೆ ಪಾರ್ಶ್ವವಾಯು ಉಂಟಾಗುವ ಸಾಧ್ಯತೆಗಳಿವೆ. ಹೃದಯಾಘಾತ , ಕ್ಯಾನ್ಸರ್‌ ಬಳಿಕ ಜನರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಹಾಗೂ ಹೆಚ್ಚು ಪ್ರಾಣ ತೆಗೆದುಕೊಳ್ಳುತ್ತಿರುವ ರೋಗ ಪಾರ್ಶ್ವವಾಯು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಿಶ್ವಾದ್ಯಂತ ವಾರ್ಷಿಕ ಒಂದೂವರೆ ಕೋಟಿಯಷ್ಟು ಮಂದಿ ಈ ಪಾರ್ಶ್ವವಾಯು ಸಮಸ್ಯೆಗೊಳಗಾಗುತ್ತಾರೆ.

Advertisement

ಆ ಪೈಕಿ 50 ಲಕ್ಷ ಮಂದಿ ಸಾವಿಗೀಡಾದರೆ, 50 ಲಕ್ಷ ಮಂದಿ ಶಾಶ್ವತವಾಗಿ ಅಂಗವಿಕಲರಾಗುತ್ತಾರೆ. ಇನ್ನು ಇದು ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಸದ್ಯ ವಿಶ್ವ ಪಾರ್ಶ್ವವಾಯು ಸಂಸ್ಥೆಯ ವಿಶ್ವದೆಲ್ಲೆಡೆ ನಡೆಸಿದ ಸಮೀಕ್ಷೆ ಪ್ರಕಾರ ನಾಲ್ಕು ಮಂದಿಯಲ್ಲಿ ಒಬ್ಬರಿಗೆ ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿಯೇ ಈ ಬಾರಿ ಅ.29ರಂದು ನಡೆಯುವ ವಿಶ್ವ ಪಾರ್ಶ್ವವಾಯು ದಿನದ ಘೋಷವಾಕ್ಯವು “ನಾಲ್ವರಲ್ಲಿ ಒಬ್ಬರಿಗೆ ಪಾರ್ಶ್ವವಾಯು. ನೀವು ಒಬ್ಬರಾಗಬೇಡಿ” ಎಂಬುದಾಗಿದೆ.

ಏನಿದು ಪಾರ್ಶ್ವವಾಯು?: ಪಾರ್ಶ್ವವಾಯು (ಸ್ಟ್ರೋಕ್‌) ಎಂಬುದು ಒಂದು ನರವ್ಯೂಹ ಸಂಬಂಧಿ ಕಾಯಿಲೆ. ಮೆದುಳಿಗೆ ಸದಾ ರಕ್ತದ ಮೂಲಕ ಆಮ್ಲಜನಕ ಪೂರೈಕೆಯಾಗಬೇಕು. ಇದ್ದಕ್ಕಿದ್ದಂತೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದರೆ ಅಥವಾ ರಕ್ತಸ್ರಾವಾದಾಗ ದೈಹಿಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ರಕ್ತ ಪರಿಚಲನೆ ಕಡಿಮೆಯಾದ ಮೆದುಳಿನ ಭಾಗವು ನಿಯಂತ್ರಿಸುವ ದೇಹದ ಅಂಗಾಂಗವು ಶಕ್ತಿ ಕಳೆದುಕೊಳ್ಳುತ್ತದೆ.

ಪಾರ್ಶ್ವವಾಯು ಪ್ರಮುಖ ಕಾರಣಗಳು: ಒತ್ತಡದ ಜೀವನಶೈಲಿ. ರಕ್ತದೊತ್ತಡ. ಮಧುಮೇಹ, ರಕ್ತದಲ್ಲಿ ಕೊಬ್ಬಿನಾಂಶ ಹೆಚ್ಚಳ, ಹೃದಯ ಸಂಬಂಧಪಟ್ಟ ಕಾಯಿಲೆಗಳು, ಧೂಮಪಾನ, ಮದ್ಯಪಾನ.

ಪಾರ್ಶ್ವವಾಯು ಲಕ್ಷಣವೇನು?: ಪಾರ್ಶ್ವವಾಯು ಎಂದರೆ ದೇಹದ ಒಂದು ಭಾಗ ಶಕ್ತಿಗುಂದಬೇಕು ಅಥವಾ ನಿಷ್ಕ್ರಿಯೆಗೊಳ್ಳಬೇಕು ಎಂಬುದು ತಪ್ಪು ನಂಬಿಕೆ ಇದೆ. ಏಕಾಏಕಿ ಮುಖ, ಕೈಕಾಲು ಶಕ್ತಿಗುಂದುವುದು ಅಥವಾ ಸೊಟ್ಟಾಗುವುದು.ಮಾತನಾಡಲು ಕಷ್ಟವಾಗುವುದು, ಮಾತಿನ ಅಸ್ಪಷ್ಟತೆ, ನಡೆದಾಟಲು ಸಾಧ್ಯವಾಗದಿರುವುದು. ಶೀಘ್ರ ಚಿಕಿತ್ಸೆ ಪಡೆಯುವುದರಿಂದ ಮೆದುಳಿನ ಇತರೆ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ಅಥವಾ ರಕ್ತಸ್ರಾವವಾಗುವುದು ತಪ್ಪಿಸಬಹುದು. ಜತೆಗೆ ನಿಯಂತ್ರಣ ಕಳೆದುಕೊಂಡ ದೇಹದ ಭಾಗವು ಶೀಘ್ರ ಚೇತರಿಸಿಕೊಳ್ಳುವಂತೆ ಮಾಡಬಹುದು ಎನ್ನುತ್ತಾರೆ ವೈದ್ಯರು.

Advertisement

ಏನು ಕ್ರಮ ಕೈಗೊಳ್ಳಬೇಕು?: ಪಾರ್ಶ್ವವಾಯು ಕಂಡು ಬಂದರೆ ಆ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಆಸ್ಪತ್ರೆಯಲ್ಲಿ ನರತಜ್ಞರ ಸಲಹೆ ಪಡೆಯಬೇಕು. ರೋಗಿಗೆ ಸಿಟಿ ಸ್ಕ್ಯಾನ್‌ ಹಾಗೂ ಎಂಆರ್‌ಐ ಸ್ಕ್ಯಾನ್‌ ಮಾಡಬೇಕಾದ ಅಗತ್ಯವಿರುವುದರಿಂದ ಹೈಟೆಕ್‌ ಆಸ್ಪತ್ರೆ ಆದರೆ ಉತ್ತಮ. ಪಾಶ್ವವಾಯುವಲ್ಲಿ ರಕ್ತಸ್ರಾವ ಹಾಗೂ ರಕ್ತಹೆಪ್ಪುಗಟ್ಟುವಿಕೆ ಎರಡು ವಿಧಗಳಿದ್ದು, ರೋಗಿಗೆ ಉತ್ತಮ ಚಿಕಿತ್ಸೆಯು 3 ಗಂಟೆ ಒಳಗೆ ದೊರತರೆ ಗುಣಮುಖವಾಗುವ ಸಾಧ್ಯತೆ ಹೆಚ್ಚಿರುತ್ತದೆ. ತಡವಾಗಿ ಬಂದ ರೋಗಿಗಳಿಗೆ ಪಾರ್ಶ್ವವಾಯು ಚಿಕಿತ್ಸೆ ಮಾಡುವುದು ಬಹಳ ಕಷ್ಟ ಎನ್ನುತ್ತಾರೆ ತಜ್ಞ ವೈದ್ಯರು.

ನಾಟಿ ವೈದ್ಯ ಬೇಡ: ಪಾರ್ಶ್ವವಾಯುವಾದಾಗ ಆಗ ನಾಟಿವೈದ್ಯರ ಬಳಿ ಪ್ರಾಣಿ, ಪಕ್ಷಿಗಳ ರಕ್ತಲೇಪನ/ ಮಸಾಜ್‌ ಮುಂತಾದ ಅವೈಜ್ಞಾನಿಕ ವಿಧಾನಗಳಿಗಾಗಿ ಮುಂದಾಗಬಾರದು. ತಕ್ಷಣ ಹತ್ತಿರದ ನರರೋಗಕ್ಕೆ ಚಿಕಿತ್ಸೆ ನೀಡುವ ತಜ್ಞವೈದ್ಯರ ಬಳಿ ಕರೆತರಬೇಕು. ಇಲ್ಲಿ ವೈದ್ಯರು ಚಿಕಿತ್ಸೆಗೆಂದು ಬಂದ ಸಮಯ, ರೋಗಿಯ ಇತರೆ ವೈದ್ಯಕೀಯ ಸಮಸ್ಯೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಔಷಧ ವಿಧಾನವೊ ಅಥವಾ ಶಸ್ತ್ರಚಿಕಿತ್ಸೆ ಮಾಡಬೇಕೊ ಎಂದು ನಿರ್ಧರಿಸಲಾಗುತ್ತದೆ ಎನ್ನುತಾರೆ ನಿಮ್ಹಾನ್ಸ್‌ ವೈದ್ಯರು.

ಇಂದಿನ ಒತ್ತಡ ಜೀವನ ಶೈಲಿಯಿಂದ ರಕ್ತದೊತ್ತಡ, ಮಧುಮೇಹವು ಚಿಕ್ಕ ವಯಸ್ಸಿನವರಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಇವುಗಳಿಂದ ಪಾರ್ಶ್ವವಾಯು ಹೆಚ್ಚಾಗುತ್ತಿದೆ. ಈ ಕುರಿತು ನಗರವಾಸಿಗಳು, ಒತ್ತಡ ಜೀವನ ಸಾಗಿಸುವವರು ಎಚ್ಚರಿಕೆವಹಿಸಬೇಕಿದೆ. ಪಾರ್ಶ್ವವಾಯುಗೆ ಒಳಗಾದವರಿಗೆ ಶೀಘ್ರ ಚಿಕಿತ್ಸೆ ಅಗತ್ಯವಾಗಿರುತ್ತದೆ. ಜತೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯೂ ಅಗತ್ಯ. ಹೀಗಾಗಿ, ನಾಟಿ ವೈದ್ಯರ ಮೊರೆಹೋಗದೆ ಶೀಘ್ರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆತರಬೇಕು.
-ಡಾ.ಪಿ.ಆರ್‌.ಶ್ರೀಜಿತೇಶ್‌. ನಿಮ್ಹಾನ್ಸ್‌ ನರರೋಗ ವಿಭಾಗದ ಪ್ರಾಧ್ಯಾಪಕ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next