ಮನೆಯೆಲ್ಲ ಅಲ್ಲೋಲ ಕಲ್ಲೋಲವಾಗಿದೆ. ಆ ಕಡೆಯಿಂದ ಅಜ್ಜಿಯ ಬುದ್ಧಿಮಾತುಗಳು, ಈ ಕಡೆಯಿಂದ ಅಮ್ಮನ ಬೈಗುಳ. ಇನ್ನು ಐದು ನಿಮಿಷದಲ್ಲಿ ಬಸ್ ಸ್ಟಾಂಡಿನಲ್ಲಿಲ್ಲದಿದ್ದರೆ ಬಸ್ ಮಿಸ್ ಆಗೋದು ಗ್ಯಾರಂಟಿ. ಕಾಲೇಜಿಗೆ ಆಗಲೇ ತಡವಾಗಿದೆ. ಆದರೆ, ಐಡಿ ಕಾರ್ಡಿನ ಪತ್ತೆಯೇ ಇಲ್ಲ.
ಹಿಂದಿನ ದಿನ ನನ್ನ ಐಡಿ ಕಾರ್ಡನ್ನು ಎಲ್ಲಿ ಇಟ್ಟೆನೆಂಬ ನೆನಪೇ ಬರುತ್ತಿಲ್ಲ. ಅಜ್ಜಿ ಹೇಳಿದರು, “”ಒಂದು ವಸ್ತುವನ್ನು ಒಂದೇ ಕಡೇ ಇಡಬೇಕಪ್ಪ . ಎಲ್ಲೆಲ್ಲೋ ಇಟ್ಟರೆ ಇನ್ನೇನಾಗುತ್ತದೆ?” ಎಂದು. ಅಮ್ಮ “”ಈಗೀಗ ಮರೆವು ಜಾಸ್ತಿಯಾಗಿದೆ ನಿನಗೆ” ಎಂದು ಬೈಯುತ್ತಾರೆ. ಆದರೂ ಐಡಿ ಹುಡುಕತೊಡಗಿದರು. ನನಗೂ ಈ ಗಲಭೆಯಲ್ಲಿ ಸಿಟ್ಟು ಬಂತು. ಈ ಕೋಪವನ್ನು ನಾನು ನನ್ನ ಮುದ್ದಿನ ನಾಯಿ “ಬ್ಲಾಕಿ’ಯ ಮೇಲೆ ವ್ಯಕ್ತಪಡಿಸಿದೆ. “ಅತ್ತೆಯ ಮೇಲಿನ ಕೋಪ ಕೊತ್ತಿಯ ಮೇಲೆ’ ಅಂದ ಹಾಗೆ.
ನನ್ನ ರೂಮು, ಅಜ್ಜಿಯ ರೂಮು, ಬ್ಯಾಗು ಹೀಗೆ ಎಲ್ಲ ಕಡೆ ಹುಡುಕಿದೆ. ಕೊನೆಗೆ ಬುಕ್ಕಿನೊಳಗೆ, ಟಿವಿಯ ಬಳಿ ಹೀಗೆ ಎಲ್ಲೆಲ್ಲೊ. ಹೀಗೆ ವಸ್ತು ಕಾಣದಾಗ ಯಾವುದನ್ನು ಎಲ್ಲಿ ಹುಡುಕಬೇಕೆಂಬ ಕಾಮ್‌ಸೆನ್ಸ್‌ನ್ನೇ ಕಳೆದುಕೊಳ್ಳುತ್ತೇವೆ. ಉದಾಹರಣೆಗೆ, ಯಾವುದಾದರೂ ಪುಸ್ತಕ ಕಾಣದಿದ್ದರೆ ಅದನ್ನು ಫ್ರಿಜ್‌ನಲ್ಲಿ ಹುಡುಕುವುದು ಹೀಗೆ. ಎಲ್ಲಿ ಹುಡುಕಿದರೂ ಐಡಿ ಕಾರ್ಡಿನ ಸುಳಿವೇ ಇರಲಿಲ್ಲ. ಒಂದು ಕ್ಷಣ ಮನೆಯಲ್ಲಿ ಯಾರಾದರೂ ಡಿಟೆಕ್ಟಿವ್ ಇದ್ದರೆ ಚೆನ್ನಾಗಿತ್ತು ಅನಿಸಿತು. ಹಿಂದಿನ ದಿನದ ಎಲ್ಲಾ ನೆನಪು ಮರುಕಳಿಸುತ್ತಿತ್ತು. ಆದರೆ, ಐಡಿಕಾರ್ಡನ್ನು ಎಲ್ಲಿ ಇಟ್ಟೆ ಎಂಬುದನ್ನು ಬಿಟ್ಟು . ನಮ್ಮ ಯಾವುದೇ ವಸ್ತು ಕಾಣದಿದ್ದರೆ ಅದರ ಚಿತ್ರ ನಿಮ್ಮ ಕಣ್ಣಮುಂದೆ ಬರುತ್ತ ಇರುತ್ತದೆ- ಅದು ಮೊಬೈಲ್, ವಾಚ್, ಕನ್ನಡಕ, ಸಣ್ಣ ಬಳೆಯೇ ಆಗಿರಲಿ.
ಅಮ್ಮ ಪಕ್ಕದ ಮನೆಯ ಆಂಟಿಯ ಬಳಿ ನನ್ನನ್ನು ಬೈಯ್ಯುವುದನ್ನು ಶುರು ಮಾಡಿದ್ದರು. ಐಡಿ ಇಲ್ಲದೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ಅವರಿಗೂ ತಿಳಿದಿತ್ತು. ಒಂದು ಕಡೆ ಭಯ ಇದ್ದರೆ ಇನ್ನೊಂದು ಕಡೆ ಸಿಟ್ಟು. ಇನ್ನು ಫೈನ್ ಕಟ್ಟದೇ ಬೇರೆ ವಿಧಿಯಿಲ್ಲ ಅನಿಸಿತು. ಆದರೆ ಎಷ್ಟು ದಿನಗಳವರೆಗೆ? ಇದನ್ನು ನೆನೆಸಿಯೇ ಮುಖ ಬೆವತು ಹೋಯಿತು. ದುಃಖ ಒರೆಸಲು ಜೇಬಿನಿಂದ ಕರವಸ್ತ್ರ ತೆಗೆಯಲು ಮುಂದಾದೆ. ಆಗ ಕೈಗೆ ಏನೋ ಸಿಕ್ಕಂತಾಯ್ತು. ಮೇಲಕ್ಕೆಳೆದಾಗ ಐಡಿ ಕಾರ್ಡು. ಯಾವಾಗಲೂ ಐಡಿ ಕಾರ್ಡನ್ನು ಡ್ರಾವರಿನಲ್ಲಿ ಇಡುವ ನಾನು ಅಂದೇಕೋ ಜೇಬಿನಲ್ಲಿ ಇಟ್ಟಿದ್ದೆ. ಅಮ್ಮ ಮತ್ತೆ ಶುರು ಮಾಡಿದರು. “ಈಗೀಗ ನಿನ್ನ ಧ್ಯಾನ ಎಲ್ಲಿರುತ್ತೋ ಏನೋ’ ಎಂದು. ಐಡಿಯನ್ನು ಕತ್ತಿಗೆ ಹಾಕಿ ಮರು ಮಾತನಾಡದೆ ಅಲ್ಲಿಂದ ಹೊರಬಂದು ಬಸ್‌ಸ್ಟಾಂಡಿಗೆ ಧಾವಿಸಿದೆ. ಐದು ನಿಮಿಷದ ಮುಂಚೆ ಇದ್ದ ಪರಿಸ್ಥಿತಿಯನ್ನು ನೆನೆಸಿಕೊಂಡು ನನಗೇ ನಗು ಬಂತು.
ಖುಷಿ
ಪ್ರಥಮ ಪಿಯುಸಿ, ಗೋವಿಂದದಾಸ ಪಿಯು ಕಾಲೇಜು, ಸುರತ್ಕಲ್