ಬಾಗಲಕೋಟೆ: ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕು. ಅದುವೇ ನನ್ನ ದೊಡ್ಡ ಅಭಿಲಾಸೆ. ಇದಕ್ಕೆ ರಾಜ್ಯದ ಜನರು ಒಮ್ಮೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಅವಕಾಶ ನೀಡಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಠ್ಯಪುಸ್ತಕದಲ್ಲಿ ಬಸವಣ್ಣ ಸೇರಿದಂತೆ ಮಹಾನ್ ನಾಯಕರಿಗೆ ಅವಮಾನ ಮಾಡುವಂತ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರ ರೂಪಿಸಿದ ಹೊಸ ಶಿಕ್ಷಣ ನೀತಿಯಲ್ಲಿ ಇಂತಹ ಪಾಲಿಸಿ ಇವೆಯಾ. ಈಗ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕಪಡುವ ಸ್ಥಿತಿ ಬಂದಿದೆ. ಶಿಕ್ಷಕರಿಗೆ ಬಿಜೆಪಿ ಸರ್ಕಾರ ಕೊಟ್ಟಿದ್ದು ಏನು? ಅನುದಾನರಹಿತ ಶಾಲೆಗಳಿಗೆ ದೊಡ್ಡ ಕೊಡುಗೆ ನೀಡಿದ್ದು ಜೆಡಿಎಸ್ ಸರ್ಕಾರ. ಶಿಕ್ಷಣದಲ್ಲಿ ಸುಧಾರಣೆ ತರುವ ಕೆಲಸ ಮಾಡುವ ಬದಲು, ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಾರಿ ಸ್ವತಂತ್ರ ಸರಕಾರ ತರಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ. ಈ ನಾಡಿನ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿಕೊಂಡಿದ್ದೇನೆ. ರಾಜ್ಯದ ಜನರು ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಚಡ್ಡಿ ರಾಜಕಾರಣ ಬಗ್ಗೆ ಎಚ್‌ಡಿಕೆ ಗರಂ ಆದ ಕುಮಾರಸ್ವಾಮಿ, ರಾಜ್ಯದಲ್ಲಿ ಈಗ ಹೊಸದಾಗಿ ಚಡ್ಡಿ ಸುಡೋದು, ಬಿಚ್ಚೋದು ನಡೆಯುತ್ತಿದೆ. ಇದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿನ ಸಂಘರ್ಷ ಉಂಟುಮಾಡುವ ವಿಚಾರಕ್ಕೆ ಬೆಂಕಿ ಇಡಬೇಕು. ಚಡ್ಡಿಗೆ, ಪ್ಯಾಂಟ್‌ಗೆ ಬೆಂಕಿ ಇಡೊದು ಮುಂದೆ ಇಟ್ಟುಕೊಳ್ಳಿ. ನಿಮ್ಮ ಸ್ವಾರ್ಥಕ್ಕಾಗಿ ನಾಡಿನ ಜನತೆಯ ಚಡ್ಡಿ ಬಿಚ್ಚುವ ಕೆಲಸ ಮಾಡಬೇಡಿ ಎಂದರು. ಶಿಕ್ಷಕರೇ ನಾನು ನಿಮಗೆ ಕೈ ಜೋಡಿಸಿ ಮನವಿ ಮಾಡುತ್ತೇನೆ. ನಿಮ್ಮ ಬದುಕಿಗೆ ಯಾರಿಗೆ ಮತ ಕೊಡಬೇಕು ಎಂದು ನೀವು ತೀರ್ಮಾನ ಮಾಡಬೇಕು. ದೇವೇಗೌಡ ಸಿಎಂ ಆಗದೆ ಹೋಗಿದ್ದರೆ ಬಾಗಲಕೋಟೆ ನಗರದ ನವನಗರ ಸೃಷ್ಟಿಯಾಗುತ್ತಿತ್ತಾ. ಜಲಾಶಯಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದ್ದಾರೆ. ಶಿಕ್ಷಕರ ಕ್ಷೇತ್ರ ಚುನಾವಣೆ ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ. ಮುಂದಿನ ಜೀವನದ ಬಗ್ಗೆ ವಿಚಾರ ಮಾಡಿ. ಬಾಗಲಕೋಟೆ ಜನರಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ನಮ್ಮ ಪಂಚರತ್ನ ಕಾರ್ಯಕ್ರಮ ಜಾರಿಗೆ ತರುತ್ತೇವೆ. ಪ್ರತಿ ಗ್ರಾಮ ಪಂ ಮಟ್ಟದಲ್ಲಿ ಪಬ್ಲಿಕ್ ಶಾಲೆ ನಿರ್ಮಾಣ ಮಾಡಿ, ಅಲ್ಲಿ ಎಲ್‌ಕೆಜಿಯಿಂದ 12 ರವರೆಗೆ ಉಚಿತ ಆಂಗ್ಲಮಾದ್ಯಮ ಶಿಕ್ಷಣ ಕೊಡಲಾಗುತ್ತಿದೆ ಎಂದು ಹೇಳಿದರು.
ಬಾಗಲಕೋಟೆ ಆಲಮಟ್ಟಿ ಜಲಾಶಯ ಸಮಸ್ಯೆ ಸರಿಪಡಿಸದೆ ಇದ್ದರೆ, ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡೋದಾಗಿ ಶಪಥ ಮಾಡಿದ್ದೇನೆ. ಆ ಹಿನ್ನೆಲೆ ಶಿಕ್ಷಕರು ನಮ್ಮ ಅಭ್ಯರ್ಥಿ ಯನ್ನು ಆಯ್ಕೆ ಮಾಡಿ ಕಳಿಸಿ. ಚಂದ್ರಶೇಖರ ಲೋಣಿಯನ್ನು ಗೆಲ್ಲಿಸಿ, ಬಿಜೆಪಿಯವರು ನರೇಂದ್ರ ಮೋದಿ ನೋಡಿ ಓಟ್ ಕೊಡಿ ಅಂತಾರೆ. ಪೆಟ್ರೋಲ್, ಡೀಸೆಲ್ ರೇಟ್ ಎಷ್ಟು ಆಯ್ತು. ಒಂದು ಅವಕಾಶ ಕೊಟ್ಟು ಪ್ರಾದೇಶಿಕ ಪಕ್ಷ ಉಳಿಸಿ ಎಂದು ಮನವಿ ಮಾಡಿದರು.
ಜಾತಿ ಹಣದ ವ್ಯಾಮೋಹಕ್ಕೆ ಒಳಗಾಗ ಬೇಡಿ. ನಾನು ಕೇವಲ ಐದು ವರ್ಷ ಸ್ವತಂತ್ರ ಸರಕಾರ ಕೊಡಿ ಅಂತ ಕೇಳ್ತಿದ್ದೇನೆ. ನಮಗೆ ಹತ್ತು ಇಪ್ಪತ್ತು ವರ್ಷ ಬೇಡ. ಐದು ವರ್ಷದಲ್ಲಿ ಸರಿಯಾಗಿ ಕೆಲಸ ಮಾಡದಿ ದ್ದರೆ ನಾನೆ ಪಕ್ಷ ವಿಸರ್ಜನೆ ಮಾಡುತ್ತೇನೆ. ನಾನು ಯಾವುದೇ ಹೇಳಿಕೆಯನ್ನು ನಾಟಕೀಯವಾಗಿ ಹೇಳ್ಳೋದಿಲ್ಲ. ನನ್ನ ಹೃದಯಾಂತರಾಳದಿಂದ ಹೇಳುತ್ತಿದ್ದೇನೆ ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್ ಪಾಟೀಲ ಸಂಪರ್ಕ ಮಾಡಿಲ್ಲ. ಆದ್ರೆ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದಾಗ ಅವರಿಗೆ ಆ ಪಕ್ಷದಲ್ಲಿ ಎಷ್ಟು ಗೌರವ ಸಿಗುತ್ತಿದೆ ಎಂಬುದು ತಿಳಿಯುತ್ತಿದೆ. ಕಾಂಗ್ರೆಸ್‌ನ ಕೆಲವು ತೀರ್ಮಾನಗಳನ್ನು ನೋಡಿದಾಗ, ಎಸ್.ಆರ್ ಪಾಟಿಲ್ ಅವರ ಅವಶ್ಯಕತೆ ಇಲ್ಲವೇನೋ ಎಂಬ ಭಾವನೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಪಾಟೀಲರು ತೀರ್ಮಾನ ಕೈಗೊಂಡಾಗ ಆ ಬಗ್ಗೆ ಚರ್ಚೆ ಮಾಡೋಣ. ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್‌ನಲ್ಲಿ ಹಲವು ವರ್ಷ ಇದ್ದವು. ಹೀಗಾಗಿ ಪಾಟೀಲರು ಜೆಡಿಎಸ್ ಗೆ ಬರಬಹುದು ಎಂದು ಹೇಳಿದ್ದಾರೆ. ಆ ಕುರಿತು ಎಸ್.ಆರ್. ಪಾಟೀಲರೇ ತೀರ್ಮಾನ ಕೈಗೊಂಡಾಗ, ನನ್ನ ಭೇಟಿ ಮಾಡಲು ಬಯಸಿದಾಗ ಮುಂದಿನ ನಿರ್ಧಾರ ಕೈಗೊಳ್ಳೋಣ. ಈಗ ನಾನು ಅವರ ಮನೆಗೆ ಭೋಜನಕ್ಕೂ ಹೋಗಲ್ಲ, ಅವರು ಆಹ್ವಾನವೂ ಕೊಟ್ಟಿಲ್ಲ. –
ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ