ಬೆಂಗಳೂರು: ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಒಂಟಿಯಾಗಿ ಓಡಾಡುವ ಮಹಿಳೆಯರು ಹಾಗೂ ವೃದ್ಧೆಯರನ್ನೆ ಗುರಿಯಾಗಿಸಿಕೊಂಡಿರುವ ದುಷ್ಕರ್ಮಿಗಳು ಗಮನ ಬೇರೆಡೆ ಸೆಳೆದು ಸರಕಳವು ಮಾಡುತ್ತಿದ್ದಾರೆ.
ಬಸವೇಶ್ವರನಗರ ಠಾಣಾ ವ್ಯಾಪ್ತಿಯ ಶಂಕರಮಠ ವೃತ್ತದಲ್ಲಿ ರಸ್ತೆ ದಾಟಲು ನಿಂತಿದ್ದ ವೃದ್ಧೆಯ ಗಮನ ಬೇರೆಡೆ ಸೆಳೆದ ದುಷ್ಕರ್ಮಿಯೊಬ್ಬ 60 ಗ್ರಾಂನ ಸರ ಕಸಿದು ಪರಾರಿಯಾಗಿದ್ದಾನೆ. ಇಲ್ಲಿನ ಸತ್ಯನಾರಾಯಣ ಲೇಔಟ್‌ನ ನಿವಾಸಿ ಪ್ರಭಾ(65) ಸರ ಕಳೆದುಕೊಂಡವರು. ಶಂಕರಮಠದ ಬಳಿ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದ ಪ್ರಭಾ ಅವರು ಸಿಗ್ನಲ್ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದರು.
ಇದೇ ವೇಳೆ ಆರೋಪಿ ಅವರನ್ನು ವಿನಾಃ ಕಾರಣ ಮಾತಿಗೆಳೆದಿದ್ದಾನೆ. ಈ ಸಂದರ್ಭದಲ್ಲಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಇದಕ್ಕೂ ಮೊದಲು ಆರೋಪಿಯೂ ಇದೇ ವೃತ್ತದ ಬಳಿಯ ಶೌಚಾಲಯದಲ್ಲಿ ಮೂತ್ರವಿಸರ್ಜನೆ ಮಾಡಿ ಹೊರಬಂದಿದ್ದ. ಆಗ ವೃದ್ಧೆ ಒಂಟಿಯಾಗಿ ನಿಂತಿರುವುದನ್ನು ಗಮನಿಸಿ ಕೃತ್ಯವೆಸಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಸುಬ್ರಹ್ಮಣ್ಯನಗರ ಠಾಣಾ ವ್ಯಾಪ್ತಿಯ ಮಿಲ್ಕ್ ಕಾಲೋನಿಯಲ್ಲಿ ಮಹಿಳೆಯೊಬ್ಬರು ಅಂಗಡಿಗೆ ಹೋಗಿ ವಾಪಸ್ ಮನೆಗೆ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಏಕಾಏಕಿ ಸರ ಕಸಿದು ನಾಪತ್ತೆಯಾಗಿದ್ದಾರೆ. ಸುಕನ್ಯಾ ಸರ ಕಳೆದುಕೊಂಡವರು. ಮನೆ ಹತ್ತಿರದ ಅಂಗಡಿಗೆ ಹೋಗಿ ವಾಪಸ್ ಬರುವಾಗ ಬೈಕ್‌ನಲ್ಲಿ ಇವರ ಮುಂದೆಯೇ ಹೋದ ದುಷ್ಕರ್ಮಿಗಳು, ಬಳಿಕ ಹಿಂಬಾಲಿಸಿ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ.
ಆದರೆ, ಈ ಸರ ಚಿನ್ನದಲ್ಲ. ಬದಲಿಗೆ ಚಿನ್ನ ಲೇಪಿತ ಆಭರಣ. ಇದರ ಮೌಲ್ಯ ಒಂದೂವರೆ ಸಾವಿರ ಎಂದು ಅಂದಾಜಿಸಲಾಗಿದೆ ಎಂದು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ತಿಳಿಸಿದರು. ಇತ್ತೀಚೆಗೆ ನಗರದ ಉತ್ತರ ಮತ್ತು ಪಶ್ಚಿಮ ವಿಭಾಗ ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಎರಡು ತಂಡದ ಕಳ್ಳರು ಸುಮಾರು 200ಕ್ಕೂ ಅಧಿಕ ತೂಕದ ನಾಲ್ಕು ಸರಗಳನ್ನು ಕಳವು ಮಾಡಿದ್ದರು.