ಬೆಂಗಳೂರು: ಮುಂಬರುವ ದಿನಗಳಲ್ಲಿ ಕನ್ನಡಿಗರು ಮತ್ತು ಮಲಯಾಳಿಗರ ನಡುವೆ ಬಾಂಧವ್ಯ ಬೆಸೆಯಲು ಕೇರಳ ಗಡಿಭಾಗದಲ್ಲಿ “ಕನ್ನಡ-ಮಲಯಾಳ ಸಾಹಿತ್ಯ ಸಮ್ಮೇಳನ’ ಆಯೋಜಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ವಿಕಾಸಸೌಧದಲ್ಲಿ ಗುರುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಮಲಯಾಳ ಭಾಷಿಕರಿಗೆ ಕನ್ನಡ ಕಲಿಕಾ ತರಗತಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ಕನ್ನಡ ಮತ್ತು ಮಲಯಾಳಿ ಭಾಷೆಗಳ ನಡುವೆ ಉತ್ತಮ ಬಾಂಧವ್ಯವಿದೆ. ಕೇರಳದ ಮಹಾತ್ಮರೆನಿಸಿದ ನಾರಾಯಣ ಗುರುಗಳ ಜಯಂತಿ ಯನ್ನು ಕರ್ನಾಟಕ ಆಚರಿಸುತ್ತಿದೆ. ಅನೇಕ ಮಲಯಾಳಿ ಸಾಹಿತ್ಯ ಕೃತಿಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾಗಿವೆ.
ನಾರಾಯಣಗುರುಗಳ ಸಾಹಿತ್ಯವನ್ನು ಸಹ ಕನ್ನಡ ಭಾಷೆಯಲ್ಲಿ ಅನುವಾದ ಮಾಡಿ ಪ್ರಕಟಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಕನ್ನಡ- ಮಲಯಾಳ ಸಾಹಿತ್ಯ ಸಮ್ಮೇಳನ ಆಯೋಜನೆ ಅವಶ್ಯವಾಗಿದೆ. ಆ ಮೂಲಕ ಮಲಯಾಳಿಗಳು ಹಾಗೂ ಕನ್ನಡಿಗರು ತಮ್ಮ ಭಾಷಾ ಪ್ರೇಮದ ಜತೆಗೆ ಸಾಹಿತ್ಯದ ಸೊಬಗನ್ನು ಸವಿಯಲು ಸಾಧ್ಯವಾಗುತ್ತದೆ ಎಂದರು.
ನೀವು ಎಷ್ಟು ಹೆಚ್ಚು ಭಾಷೆಗಳನ್ನು ಕಲಿಯುತ್ತೀರೋ ಅಷ್ಟು ಆತ್ಮವಿಶ್ವಾಸ ಹೆಚ್ಚುತ್ತದೆ. ಕೇರಳಿಗರು ಮಲಯಾಳ ವನ್ನು ಪ್ರೀತಿಸುವಷ್ಟೇ, ಕರ್ನಾಟಕದ ಕನ್ನಡಿಗರು ಕನ್ನಡವನ್ನು ಪ್ರೀತಿಸಿ, ಕಲಿಯುವ ಮೂಲಕ ಸೌಹಾರ್ದವನ್ನು ಬೆಳೆಸಿ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ,ಕನ್ನಡ-ಮಲೆಯಾಳ ಲೇಖಕ ಸುಧಾಕರನ್ ರಾಮಂತಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಸಂತೋಷ್ ಹಾನಗಲ್ಲ ಮೊದಲಾದ ವರು ಉಪಸ್ಥಿರಿದ್ದರು.