ಬೆಂಗಳೂರು: ಗ್ರಾಮೀಣ ಭಾಗಗಳಲ್ಲಿ ಎಕರೆಗಟ್ಟಲೆ ಜಾಗದಲ್ಲಿ ಬೆಳೆಯುವ ಬೆಳೆಗಳನ್ನು ಬೆಂಗಳೂರಿನಂತಹ ನಗರದಲ್ಲಿ ಕೇವಲ 30×40 ನಿವೇಶನದಲ್ಲೇ ಬೆಳೆದು, ಹೆಚ್ಚು ಲಾಭ ಗಳಿಸಬಹುದು! ಇದು ಏರೋಫೋನಿಕ್ ತಂತ್ರಜ್ಞಾನದ ಚಮತ್ಕಾರ.
ಸೆನ್ಸರ್ ಆಧಾರಿತ ಸಂಪೂರ್ಣ ಅಟೋಮೆಟಿಕ್ ಆಗಿರುವ ಈ ಏರೋಫೋನಿಕ್ ವ್ಯವಸ್ಥೆ ಅಡಿ ಸಣ್ಣ ನಿವೇಶನದಲ್ಲಿ ತರಕಾರಿ, ಹೂವು, ಹಣ್ಣು ಸೇರಿದಂತೆ 30ರಿಂದ 40 ಪ್ರಕಾರದ ಬೆಳೆಗಳನ್ನು ಬೆಳೆಯುವಂತಹ ತಂತ್ರಜ್ಞಾನವನ್ನು ಹೈಡ್ರೋಪೊರ್ ಸ್ಟಾರ್ಟ್‌ಅಪ್ ಕಂಪನಿ ಅಭಿವೃದ್ಧಿಪಡಿಸುತ್ತಿದೆ.
“ಈಗಾಗಲೇ ಕೃಷಿಯಲ್ಲಿ ಏರೋಫೋನಿಕ್ ಚಾಲ್ತಿಯಲ್ಲಿದೆ. ಆದರೆ, ಕೆಲವೇ ಕೆಲವು ಬೆಳೆಗಳಿಗೆ ಸೀಮಿತವಾಗಿದೆ. ಈಗ ಅದರ ಮುಂದುವರಿದ ಭಾಗವಾಗಿ ವಿವಿಧ ಬೆಳೆಗಳ ಜತೆ ಟೊಮೆಟೊ ಬೆಳೆಸುವ ಪ್ರಯೋಗ ಕೂಡ ನಡೆಯುತ್ತಿದೆ. ಒಂದು ಚದರ ಮೀಟರ್ ಯೂನಿಟ್ (ಕಂಬದ ಆಕಾರದಲ್ಲಿರುತ್ತದೆ)ನಲ್ಲಿ 120 ಗಿಡಗಳನ್ನು ಬೆಳೆಸಬಹುದು.
ಇದರಲ್ಲಿ 350 ಲೀ. ಸಾಮರ್ಥ್ಯದ ಟ್ಯಾಂಕರ್ ಇರುತ್ತದೆ. ಈ ನೀರು ಮೂರು ತಿಂಗಳಾಗುತ್ತದೆ. ಇಲ್ಲಿ ನಿರ್ವಹಣೆಗೆ ಯಾವೊಬ್ಬ ವ್ಯಕ್ತಿಯ ಅವಶ್ಯಕತೆ ಇರುವುದಿಲ್ಲ. ಯೂನಿಟ್‌ನಲ್ಲಿ ಅಳವಡಿಸಿರುವ ಸೆನ್ಸರ್ ಸ್ವತಃ ನೀರಿನ ಅವಶ್ಯಕತೆಯನ್ನು ನಿರ್ಧರಿಸುತ್ತದೆ’ ಎಂದು ಸ್ಮಾರ್ಟ್ ಅಟೋಮಸ್ ಫಾರ್ಮಿಂಗ್ ಸಲ್ಯುಷನ್ಸ್‌ನ, ಬಿ.ಮಥಿ ತುಮಿಲನ್ ಮಾಹಿತಿ ನೀಡಿದರು.
“ನಾವು ಇದೇ ಬೆಳೆಯನ್ನು ಪಾಲಿಹೌಸ್‌ನಲ್ಲಿ ಎಕರೆಗಟ್ಟಲೆ ಬೆಳೆಸಲು ಕನಿಷ್ಠ 35 ಲಕ್ಷ ರೂ. ಖರ್ಚಾಗುತ್ತದೆ. ಹೆಚ್ಚು ನೀರು ಕೂಡ ಬೇಕಾಗುತ್ತದೆ. ಏರೋಫೋನಿಕ್ ವ್ಯವಸ್ಥೆಯಲ್ಲಿ ಪ್ರತಿ ಯೂನಿಟ್‌ಗೆ 12 ಸಾವಿರ ರೂ. ಖರ್ಚಾಗುತ್ತದೆ.
ಯೂನಿಟ್ ಒಳಗೇ ಗಿಡಗಳ ಬೇರುಗಳಿಗೆ ಅಗತ್ಯ ಜಾಗ ಬಿಡಲಾಗಿರುತ್ತದೆ. ಈ ವಿಧಾನದಿಂದ ಪಾಲಿಹೌಸ್‌ಗೆ ಹೋಲಿಸಿದರೆ, ಇಳುವರಿ ಒಂದೂವರೆಪಟ್ಟು ಹೆಚ್ಚು ಬರುತ್ತದೆ. ಇದು ಇನ್ನೂ ಪ್ರಯೋಗ ಹಂತದಲ್ಲಿದ್ದು, ಅನುದಾನಕ್ಕಾಗಿ ಸರ್ಕಾರದ ಮೊರೆಹೋಗುತ್ತಿದ್ದೇವೆ’ ಎಂದು ಅವರು ಹೇಳಿದರು.