Advertisement

ಸವಲತ್ತು ತಲುಪಿಸುವಲ್ಲಿ ಲೋಪ: ಕ್ರಮಕ್ಕೆ ಸೂಚನೆ

09:27 PM Oct 16, 2019 | Lakshmi GovindaRaju |

ಚಾಮರಾಜನಗರ: ಗಿರಿಜನರಿಗೆ ಸಮರ್ಪಕವಾಗಿ ಸವಲತ್ತು ವಿತರಣೆ ಮಾಡಲು ವಿಫ‌ಲವಾಗಿರುವ ಗಿರಿಜನ ಕಲ್ಯಾಣ ಇಲಾಖೆಯ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ರೈತರಿಗೆ ಸವಲತ್ತು ತಲುಪಿಸುವಲ್ಲಿ ಲೋಪ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಸೂಚನೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಸರಿಯಾಗಿ ವಿತರಣೆ ಮಾಡಿಲ್ಲ: ಗಿರಿಜನರಿಗೆ ಹೊದಿಕೆ ಹಾಗೂ ಇನ್ನಿತರ ಸವಲತ್ತಗಳನ್ನು ಆ ಇಲಾಖೆಯ ಅಧಿಕಾರಿ ರಾಮಸ್ವಾಮಿ ಸರಿಯಾಗಿ ವಿತರಣೆ ಮಾಡಿಲ್ಲ ಎಂಬ ದೂರುಗಳಿವೆ. ಜನಪ್ರತಿನಿಧಿಗಳನ್ನು ಆಹ್ವಾನಿಸಿ ಸವಲತ್ತು ವಿತರಣೆ ಮಾಡಿಲ್ಲ. ಈ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿದರು. ಇದಕ್ಕೆ ಅಧಿಕಾರಿ, ಅಸಮರ್ಪಕ ಉತ್ತರ ನೀಡಿದ್ದರಿಮದ ಸಿಡಿಮಿಡಿಗೊಂಡ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.

ರೈತರಿಗೆ ಅನ್ಯಾಯ: ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ನೀಡಿರುವ ಸಲವತ್ತುಗಳು ಸಹ ಸಮರ್ಪಕವಾಗಿ ವಿತರಣೆಯಾಗಿಲ್ಲ. ತೋಟಗಾರಿಕೆ ಇಲಾಖೆಯಿಂದ ತೆಂಗು ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಹರವೆ ಹಾಗೂ ಇತರೇ ಭಾಗದ ರೈತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆ ಮಾಡುವಂತೆ ತಿಳಿಸಿದರು.

ಶಿಸ್ತು ಕ್ರಮ ಕೈಗೊಳ್ಳಬೇಕು: ತಾಲೂಕಿನ ಅಭಿವೃದ್ಧಿ ಕುರಿತು ಮಹತ್ವದ ಸಭೆ ನಡೆಯುತ್ತಿದ್ದರು ಸಹ ಸಂಬಂಧ ಪಟ್ಟ ಇಲಾಖೆಯ ಅನೇಕ ಅಧಿಕಾರಿಗಳು ಸಭೆಗೆ ಅಗಮಿಸಿಲ್ಲ. ಇಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ನೀಡುವಂತೆ ಶಾಸಕರು ಆದೇಶಿಸಿದರು. ಅಲ್ಲದೇ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಸಭೆ ಇದ್ದರು ಸಹ ಕಾಮಗಾರಿಗಳ ಪರಿಶೀಲನೆ ಹೋಗಿದ್ದಾರೆ. ಇಲ್ಲಿ ಸಭೆಗೆ ಉತ್ತರ ನೀಡುವವರು ಯಾರು? ಮೊದಲು ಅವರನ್ನು ಸಭೆಗೆ ಕರೆಸಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿಗೆ ಸೂಚನೆ ನೀಡಿದರು.

ಜಿಪಂ ಸದಸ್ಯ ಆರೋಪ: ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ತರಬೇತಿಗೆ ಕಳುಹಿಸುವ ವಿಚಾರ ಜನಪ್ರತಿನಿಧಿಗಳ ಗಮನಕ್ಕೆ ಬರುವುದಿಲ್ಲ. ಇಲಾಖೆಯ ಅಧಿಕಾರಿಗಳೇ ತಮಗೆ ಇಷ್ಟ ಬಂದವರನ್ನು ತರಬೇತಿ ಕಳುಹಿಸುತ್ತಿದ್ದಾರೆ ಎಂದು ಜಿಪಂ ಸದಸ್ಯ ಕೆರೆಹಳ್ಳಿ ನವೀನ್‌ ಆರೋಪಿಸಿದರು.

Advertisement

ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಇಲ್ಲ: ಅಲ್ಲದೇ ತರಬೇತಿಗೆ ತೆರಳುತ್ತಿರುವ ರೈತರ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಜನಪ್ರತಿನಿಗಳಿಗೆ ಮಾಹಿತಿ ನೀಡಿ, ಅರ್ಹ ರೈತರು ಸಲವತ್ತು ಹಾಗೂ ಪ್ರಯೋಜನ ಪಡೆದು ಕೊಳ್ಳುವಂತೆ ಮಾಡಬೇಕು. ತಮಗೆ ಇಷ್ಟಬಂದಂತೆ ಕಾರ್ಯಕ್ರಮ ರೂಪಿಸಲು ಅಧಿಕಾರ ಕೊಟ್ಟವರು ಯಾರು ಎಂದು ಜಿ.ಪಂ. ಸದಸ್ಯರು ಪ್ರಶ್ನೆ ಮಾಡಿದರು. ಅನೇಕ ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ಎಂಜಿನಿಯರ್‌ಗೆ ಸೂಚನೆ: ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಮೂಡ್ನಾಕೂಡು ರಸ್ತೆ, ಮಲೆಯೂರು ಮಾರ್ಗ ರಸ್ತೆಯನ್ನು ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಳೆದ 2 ವರ್ಷಗಳ ಹಿಂದೆ ಆರಂಭವಾದ ಕಾಮಗಾರಿ ಕೇವಲ ಜಲ್ಲಿ ಕಲ್ಲು ಸುರಿದರು. ಮಣ್ಣು ಹಾಕಿ ಪೂರ್ತಿ ಹಣ ಡ್ರಾ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಶಾಸಕರು ಸೂಚನೆ ನೀಡಿದರು.

ಜಿಪಂ ಸದಸ್ಯರಾದ ಸಿ.ಎನ್‌. ಬಾಲರಾಜು, ಕೆ.ಪಿ. ಸದಾಶಿವಮೂರ್ತಿ, ಶಶಿಕಲಾ, ತಾಪಂ. ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಬಸವಣ್ಣ, ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮಕುಮಾರ್‌, ತಹಶೀಲ್ದಾರ್‌ ಮಹೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next