Advertisement

ಒಮಿಕ್ರಾನ್‌ ರೋಗಲಕ್ಷಣ ಅಲ್ಪ ಪ್ರಮಾಣದ್ದು

09:25 PM Nov 29, 2021 | Team Udayavani |

ನವದೆಹಲಿ:“ಒಮಿಕ್ರಾನ್‌’ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು “ಕಳವಳಕಾರಿ ರೂಪಾಂತರಿ’ ಎಂದು ಘೋಷಿಸಿದ ಬೆನ್ನವಲ್ಲೇ ಹಲವು ರಾಷ್ಟ್ರಗಳು ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳನ್ನು ಹೇರಿ, ಗಡಿಗಳನ್ನು ಮುಚ್ಚಿವೆ.

Advertisement

ಈ ರೂಪಾಂತರಿ ಕುರಿತ ಅನಿಶ್ಚಿತತೆ ಮುಂದುವರಿದಿರುವಂತೆಯೇ, ದಕ್ಷಿಣ ಆಫ್ರಿಕಾದ ಆರೋಗ್ಯ ತಜ್ಞರೊಬ್ಬರು “ಒಮಿಕ್ರಾನ್‌ನ ರೋಗ ಲಕ್ಷಣಗಳು ಅಪರಿಚಿತವಾಗಿದ್ದರೂ, ಅಲ್ಪ ಪ್ರಮಾಣದ್ದಾಗಿರುತ್ತದೆ’ ಎಂದು ತಿಳಿಸಿದ್ದಾರೆ.

ಒಮಿಕ್ರಾನ್‌ ದೃಢಪಟ್ಟಿರುವ 30 ಸೋಂಕಿತರನ್ನು ಪರಿಶೀಲಿಸಿ ದ. ಆಫ್ರಿಕಾ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥರಾದ ಡಾ. ಏಂಜೆಲಿಕ್‌ ಕೋಟಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಒಮಿಕ್ರಾನ್‌ ಸೋಂಕು ಕಂಡುಬಂದವರಲ್ಲಿ ಅಲ್ಪಪ್ರಮಾಣದ ರೋಗಲಕ್ಷಣಗಳು ಕಂಡುಬರುತ್ತವೆ. ಸ್ನಾಯುಗಳ ನೋವು, ಒಣಕೆಮ್ಮು, ಗಂಟಲು ಕೆರೆತ, ವಿಪರೀತ ಬಳಲಿಕೆ ಕಾಣಿಸಿಕೊಳ್ಳುತ್ತದೆ. ಕೆಲವರಿಗಷ್ಟೇ ಹೆಚ್ಚಿನ ಪ್ರಮಾಣದ ಜ್ವರವಿರುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ.

ಕೊರೊನಾದ ಇತರೆ ರೂಪಾಂತರಿಗಳಿಗೆ ಹೋಲಿಸಿದರೆ, ಒಮಿಕ್ರಾನ್‌ನ ರೋಗಲಕ್ಷಣಗಳು ಭಿನ್ನವಾಗಿವೆ. ಇತರೆ ರೂಪಾಂತರಿಗಳು ತಗುಲಿದರೆ ರೋಗಲಕ್ಷಣಗಳು ಸ್ವಲ್ಪ ಗಂಭೀರವಾಗಿರುತ್ತವೆ. ನಮಗೆ ತಿಳಿದುಬಂದಂತೆ, ಲಸಿಕೆ ಪಡೆದುಕೊಳ್ಳದೇ ಇದ್ದರೂ ಒಮಿಕ್ರಾನ್‌ ತಗುಲಿರುವವರಲ್ಲಿ ಅಲ್ಪಪ್ರಮಾಣದ ರೋಗಲಕ್ಷಣಗಳಷ್ಟೇ ಕಂಡುಬಂದಿವೆ. ಒಮಿಕ್ರಾನ್‌ ಬಗ್ಗೆ ಹೆಚ್ಚು ಮಾಹಿತಿಯಿಲ್ಲದೇ, ಕೆಲವರು ಅದನ್ನು ವೈಭವೀಕರಿಸುತ್ತಿರುವುದು ದುರದೃಷ್ಟಕರ ಎಂದೂ ಏಂಜೆಲಿಕ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬಾಲಿವುಡ್‌ ಹಾಡಿನ ಮೂಲಕ ಮನ ಗೆದ್ದ ಆಫ್ರಿಕನ್‌ ಅಣ್ಣ-ತಂಗಿ

Advertisement

ಹೆಚ್ಚುತ್ತಿವೆ ಪ್ರಕರಣಗಳು:
ಈ ನಡುವೆ 13ಕ್ಕೂ ಹೆಚ್ಚು ದೇಶಗಳನ್ನು ಒಮಿಕ್ರಾನ್‌ ಆಕ್ರಮಿಸಿಕೊಂಡಿದ್ದು, ಆಸ್ಟ್ರೇಲಿಯಾದಲ್ಲಿ ಸೋಮವಾರ 5ನೇ ಪ್ರಕರಣ ದೃಢಪಟ್ಟಿದೆ. ಹೀಗಾಗಿ, ಇನ್ನೂ 2 ವಾರಗಳ ಕಾಲ ಗಡಿಯಲ್ಲಿನ ನಿರ್ಬಂಧವನ್ನು ತೆರವು ಮಾಡದೇ ಇರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಜಪಾನ್‌ ಸರ್ಕಾರವು ದೇಶದೊಳಗೆ ಎಲ್ಲ ವಿದೇಶಿ ಪ್ರಯಾಣಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಸ್ಕಾಟ್ಲೆಂಡ್‌ನಲ್ಲಿ 6 ಒಮಿಕ್ರಾನ್‌ ಕೇಸುಗಳು ಪತ್ತೆಯಾಗಿದ್ದು, ಯುಕೆಯಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆ 9ಕ್ಕೇರಿದೆ.

ಆ ಮಹಿಳೆಗಾಗಿ ಶೋಧ ಕಾರ್ಯ
ಭಾರತದಲ್ಲಿ ಇನ್ನೂ ಒಮಿಕ್ರಾನ್‌ನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಆದರೆ, ನ.18ರಂದು ಮಧ್ಯಪ್ರದೇಶದ ಜಬಲ್ಪುರಕ್ಕೆ ಬೋಟ್ಸ್‌ವಾನಾದಿಂದ ಮಹಿಳೆಯೊಬ್ಬರು ಬಂದಿದ್ದು, ಈಗ ಅವರಿಗಾಗಿ ಆರೋಗ್ಯ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದಾರೆ. ಬೋಟ್ಸ್‌ವಾನಾ ರಾಯಭಾರ ಕಚೇರಿಯನ್ನು ಸಂಪರ್ಕಿಸಿದಾಗ, ಮಹಿಳೆಯು ಜಬಲ್ಪುರದ ಸೇನಾ ಸಂಸ್ಥೆಯಲ್ಲಿ ಐಸೋಲೇಟ್‌ ಆಗಿದ್ದಾರೆ ಎಂಬ ಮಾಹಿತಿ ಬಂದಿದೆ. ಆದರೆ, ಆಕೆ ಪತ್ತೆಯಾಗಿಲ್ಲ. ಹೀಗಾಗಿ, ಮೊಬೈಲ್‌ ಸಂಖ್ಯೆ, ವಿಳಾಸ ಪಡೆದು ಆ ಮಹಿಳೆಯ ಜಾಡು ಹಿಡಿದು ಹೊರಟಿದ್ದಾರೆ ಸಿಬ್ಬಂದಿ. ಇದೇ ವೇಳೆ, ದೇಶಾದ್ಯಂತ ಭಾನುವಾರದಿಂದ ಸೋಮವಾರಕ್ಕೆ 24 ಗಂಟೆಗಳಲ್ಲಿ 8,309 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದ್ದು, 236 ಮಂದಿ ಸಾವಿಗೀಡಾಗಿದ್ದಾರೆ.

ಈಗ ಹೇಗಿದೆ ದ.ಆಫ್ರಿಕಾ ಸ್ಥಿತಿ?
ದ.ಆಫ್ರಿಕಾದ ಅತಿ ಹೆಚ್ಚು ಜನಸಂಖ್ಯೆಯಿರುವ ಪ್ರಾಂತ್ಯವಾದ ಗೌಟೆಂಗ್‌ನಲ್ಲಿ 2 ವಾರಗಳ ಹಿಂದೆ ಪತ್ತೆಯಾದ ಒಮಿಕ್ರಾನ್‌ ರೂಪಾಂತರಿ, ಈಗ ಬಹುತೇಕ ಎಲ್ಲ ಪ್ರಾಂತ್ಯಗಳಿಗೂ ಹಬ್ಬಿದೆ. ಭಾನುವಾರ ದ.ಆಫ್ರಿಕಾದಲ್ಲಿ ಒಟ್ಟಾರೆ 2,800 ಮಂದಿಗೆ ಈ ಸೋಂಕು ದೃಢಪಟ್ಟಿದೆ. ಹಿಂದಿನ ವಾರಗಳಲ್ಲಿ ಸರಾಸರಿ 500ರಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈ ವಾರಾಂತ್ಯದಲ್ಲಿ ಪ್ರಕರಣಗಳ ಸಂಖ್ಯೆ ದಿನಕ್ಕೆ 10 ಸಾವಿರಕ್ಕೇರುವ ಸಾಧ್ಯತೆಯಿದ್ದು, 2-3 ವಾರಗಳಲ್ಲಿ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಒತ್ತಡ ಹೆಚ್ಚಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಆದರೆ, ಆತಂಕ ಪಡಬೇಕಾದ ಯಾವುದೇ ಅಗತ್ಯವಿಲ್ಲ ಎಂದಿದ್ದಾರೆ ಆರೋಗ್ಯ ಸಚಿವ ಜೋ ಪಾಹ್ಲಾ.

ಒಮಿಕ್ರಾನ್‌ ನೋಡಲು ಹೇಗಿದೆ ಗೊತ್ತಾ? 
ಕೊರೊನಾದ ಒಮಿಕ್ರಾನ್‌ ರೂಪಾಂತರಿಯ ಮೊದಲ ಫೋಟೋ ಸೋಮವಾರ ಬಿಡುಗಡೆಯಾಗಿದೆ. ರೋಮ್‌ನ ಬ್ಯಾಂಬಿನೋ ಗೇಸು ಆಸ್ಪತ್ರೆಯು ಈ ಫೋಟೋವನ್ನು ಪ್ರಕಟಿಸಿದೆ. ಮಾನವನ ಕೋಶದೊಂದಿಗೆ ಸಂಪರ್ಕ ಹೊಂದುವಂಥ ಪ್ರೊಟೀನ್‌ನ ಒಂದು ಭಾಗದಲ್ಲಿ ಹಲವು ರೂಪಾಂತರಿಗಳು ಕೇಂದ್ರೀಕೃತಗೊಂಡಿರುವುದು ಈ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಹಾಗಂತ, ಇದು ಎಲ್ಲ ರೂಪಾಂತರಿಗಳಿಗಿಂತಲೂ ಅಪಾಯಕಾರಿ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ತಜ್ಞರು.

ಹೊಸ ರೂಪಾಂತರಿಗೆ ಸಂಬಂಧಿಸಿದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ವಿಮಾನಯಾನ ಪುನಾರಂಭಿಸುವ ವಿಚಾರದಲ್ಲಿ ಇತರೆ ಸಚಿವಾಲಯಗಳೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೇವೆ.
– ಜ್ಯೋತಿರಾದಿತ್ಯ ಸಿಂದಿಯಾ, ವಿಮಾನಯಾನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next