ಚಿತ್ರರಂಗ ಸ್ತಬ್ಧವಾಗಿದೆ. ಸಿನಿಮಾ ಬಿಡುಗಡೆಯಿಂದ ಹಿಡಿದು ಸಿನಿಮಾದ ಬಹುತೇಕ ಚಟುವಟಿಕೆಗಳು, ಪ್ರಚಾರದ ಭರಾಟೆ ಎಲ್ಲವೂ ನಿಂತು ಹೋಗಿದೆ. ಬಿಡುಗಡೆಗೆ ಸಿದ್ಧವಾಗಿದ್ದ ಸ್ಟಾರ್ ಸಿನಿಮಾಗಳೆಲ್ಲವೂ ಅನಿರ್ಧಿಷ್ಟಾವಧಿ ಮುಂದೆ ಹೋಗಿದೆ. ಆ ಸಿನಿಮಾಗಳು ಮತ್ತೆ ಯಾವಾಗ ಬೇಕಾದರೂ ಡೇಟ್ ಅನೌನ್ಸ್ ಮಾಡಬಹುದು, ಮತ್ತೆ ಅದೇ ಕ್ರೇಜ್ ಹುಟ್ಟಿಸಬಹುದು… ಈಗ ಸಮಸ್ಯೆ ಇರೋದು ಹೊಸಬರ ಸಿನಿಮಾಗಳಿಗೆ.
ಅದು ಹೇಗೆ ಎಂದು ನೀವು ಕೇಳಬಹುದು. ಒಮಿಕ್ರಾನ್ ಸಂಕಟ ತಿಳಿಯಾದ ಬಳಿಕ ಮತ್ತೆ ಬಿಗ್‌ಬಜೆಟ್, ಸ್ಟಾರ್ ಸಿನಿಮಾಗಳೇ ಡೇಟ್ ಅನೌನ್ಸ್ ಮಾಡುವ ಮೂಲಕ ಮತ್ತೂಮ್ಮೆ ಹೊಸಬರು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಬೇಕಾಗುತ್ತದೆ. ಸರತಿಯಲ್ಲಿರುವ ಸ್ಟಾರ್ ಸಿನಿಮಾಗಳು ಬರುತ್ತಿದ್ದಂತೆ ಹೊಸಬರು ಅನಿವಾರ್ಯವಾಗಿ ಬದಿಗೆ ನಿಲ್ಲಬೇಕಾಗುತ್ತದೆ. ಒಂದು ಸ್ಟಾರ್ ಸಿನಿಮಾ ಬಂದರೂ ಅದು 300ರಿಂದ 400 ಚಿತ್ರಮಂದಿರಗಳನ್ನು ಆವರಿಸಿಕೊಳ್ಳುತ್ತದೆ. ಹೀಗೆ ಬಿಡುಗಡೆಯಾಗುವ ಸಿನಿಮಾಗಳು ಏನಿಲ್ಲವೆಂದರೂ ಎರಡರಿಂದ ಮೂರು ವಾರಗಳ ಕಾಲ ಚಿತ್ರಮಂದಿರವನ್ನು ಆಕ್ರಮಿಸಿಕೊಂಡಿರುತ್ತವೆ. ಒಂದು ಸ್ಟಾರ್ ಸಿನಿಮಾ ಬಂದು ಅದರ ಹವಾ ಕಡಿಮೆಯಾಗುತ್ತಿದ್ದಂತೆ ಮತ್ತೂಂದು ಸ್ಟಾರ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿರುತ್ತವೆ. ಹೀಗಾಗಿ, ಈಗಾಗಲೇ ರಿಲೀಸ್ ಡೇಟ್ ಪ್ಲ್ರಾನ್ ಮಾಡಿಕೊಂಡಿದ್ದ ಹೊಸಬರ ಸಿನಿಮಾಗಳು ನಿಜಕ್ಕೂ ಮುಂದಿನ ದಿನಗಳಲ್ಲಿ ಬಿಡುಗಡೆಗೆ ಕಷ್ಟಪಡಬೇಕಾತ್ತದೆ.
ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿಯೇ ಬರೋಬ್ಬರಿ ಇಪ್ಪತ್ತೈದಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಈಗಾಗಲೇ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿದ್ದ ಹೊಸಬರ ಸಿನಿಮಾಗಳು ಮುಂದೇನು ಎಂಬ ಆತಂಕದಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿವೆ.
ಇದನ್ನೂ ಓದಿ:ಈ ವಾಹನಕ್ಕೆ ಮೀನೇ ಚಾಲಕ! ಮೀನಿಗೆ ನೆಲದ ಮೇಲೂ ಸಂಚರಿಸುವುದು ಕಲಿಸಿದ ವಿಜ್ಞಾನಿಗಳು
ಇನ್ನು ಬಿಗ್ ಬಜೆಟ್‌ನ ಸ್ಟಾರ್ ಸಿನಿಮಾಗಳು ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಪ್ರಚಾರ ಪಡೆದುಕೊಳ್ಳುತ್ತಿರುವುದರಿಂದ, ಅಂಥ ಸಿನಿಮಾಗಳಿಗೆ ಅದರದ್ದೇ ಆದ ಸ್ಟಾರ್ ಮತ್ತು ಫ್ಯಾನ್ಸ್ ಇರುವುದರಿಂದ, ಅಂಥ ಸಿನಿಮಾಗಳಿಗೆ ಥಿಯೇಟರ್ ಮಾತ್ರವಲ್ಲದೆ ಬೇರೆ ಬೇರೆ ವ್ಯಾಪಾರ ಮಾರ್ಗಗಳು ದಟ್ಟವಾಗಿರುತ್ತವೆ. ಡಿಜಿಟಲ್, ಸ್ಯಾಟಲೈಟ್, ಒಟಿಟಿ ಹೀಗೆ ಸಿನಿಮಾದ ಬೇರೆ ಬೇರೆ ರೈಟ್ಸ್‌ಗಳಿಗೆ ಸಾಕಷ್ಟು ಡಿಮ್ಯಾಂಡ್ ಇದ್ದೇ ಇರುತ್ತದೆ. ಆ ಮೂಲಕ ಬಿಗ್ ಬಜೆಟ್‌ನ ಸ್ಟಾರ್ ಸಿನಿಮಾಗಳು, ಥಿಯೇಟರ್‌ನಲ್ಲಿ ಬಿಡುಗಡೆಯಾಗದ ಹೊರತಾಗಿಯೂ ಹಾಕಿದ ಬಂಡವಾಳವನ್ನು ಜೊತೆಗೆ ಲಾಭವನ್ನೂ ತಂದುಕೊಡಬಲ್ಲವು. ಆದರೆ ಮಧ್ಯಮ ಮತ್ತು ಸಣ್ಣ ಬಜೆಟ್‌ನ ಸಿನಿಮಾಗಳಿಗೆ ಅಂಥ ಯಾವುದೇ ದೊಡ್ಡ ಮಾರ್ಗಗಳಿಲ್ಲ. ಮಧ್ಯಮ ಮತ್ತು ಸಣ್ಣ ಬಜೆಟ್‌ನ ಬಹುತೇಕ ಸಿನಿಮಾಗಳು ತಮ್ಮ ಗಳಿಕೆಯ ಮುಕ್ಕಾಲು ಭಾಗ ಥಿಯೇಟರ್‌ಗಳ ಗಳಿಕೆಯ ಮೇಲೆಯೇ ಅವಲಂಭಿಸಿರುವುದರಿಂದ, ಬಿಡುಗಡೆಗೆ ತಯಾರಾಗಿರುವ ಮಧ್ಯಮ, ಸಣ್ಣ ಬಜೆಟ್ ಸಿನಿಮಾಗಳಿಗೆ ದಾರಿ ಕಾಣದಂತಾಗಿದೆ