Advertisement
ರ್‍ಯಾಂಕಿಂಗ್ ಲೆಕ್ಕಾಚಾರದಲ್ಲಿ ಅಯರ್‌ಲ್ಯಾಂಡ್ ಭಾರತಕ್ಕಿಂತ ಕೆಳ ಮಟ್ಟದ ತಂಡ. ಭಾರತ 10ನೇ ಸ್ಥಾನದಲ್ಲಿದ್ದರೆ, ಅಯರ್‌ಲ್ಯಾಂಡ್ 16ನೇ ಸ್ಥಾನದಲ್ಲಿದೆ. ಆದರೆ ಈ ಕಾರಣಕ್ಕಾಗಿ ಐರಿಶ್ ಪಡೆಯನ್ನು ಲಘುವಾಗಿ ಪರಿಗಣಿಸಿದರೆ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ. ಅಯರ್‌ಲ್ಯಾಂಡ್ “ಬಿ’ ವಿಭಾಗದ 4 ತಂಡಗಳಲ್ಲಿ ಗೆಲುವು ಸಾಧಿಸಿದ ಏಕೈಕ ತಂಡವೂ ಹೌದು. ಅಮೆರಿಕವನ್ನು 3-1 ಗೋಲುಗಳಿಂದ ಮಣಿಸಿದ ಅಯರ್‌ಲ್ಯಾಂಡ್ 3 ಅಂಕಗಳೊಂದಿಗೆ ಅದು ಅಗ್ರಸ್ಥಾನ ಅಲಂಕರಿಸಿದೆ. ಅಕಸ್ಮಾತ್ ಭಾತವನ್ನೂ ಮಣಿಸಿದರೆ ಅದು ನಾಕೌಟ್ ಸ್ಥಾನ ವನ್ನು ಕಾದಿರಿಸಲಿದೆ. ಹೀಗಾಗಿ ಭಾರತಕ್ಕೆ ಇದು ಹೆಚ್ಚು ಒತ್ತಡದ ಪಂದ್ಯ.
ಇಂಗ್ಲೆಂಡ್ ವಿರುದ್ಧ ಭಾರತ “ಗ್ರೌಂಡ್ ಪ್ಲೇ’ಯಲ್ಲಿ ಉತ್ತಮ ಪ್ರದರ್ಶನವನ್ನೇನೋ ನೀಡಿತ್ತು, ಆದರೆ ಪೆನಾಲ್ಟಿ ಕಾರ್ನರ್ ಸಂಪಾದಿಸುವಲ್ಲಿ ವಿಫಲವಾಗಿತ್ತು. ಸವಿತಾ ಅವರ ಗೋಲ್ ಕೀಪಿಂಗ್ ಬಗ್ಗೆ ಎರಡು ಮಾತಿಲ್ಲ. 53ನೇ ನಿಮಿಷದ ತನಕ 1-0 ಮುನ್ನಡೆ ಕಾಯ್ದುಕೊಂಡಿದ್ದ ಭಾರತ, ಬಳಿಕ 1-1 ಡ್ರಾಗೆ ಸಮಾಧಾನ ಪಡಬೇಕಾಯಿತು.