ಕೆಜೆಪಿಯತ್ತ ಹೋಗಿದ್ದರು. ಯಡಿಯೂರಪ್ಪ ಮತ್ತೆ ಬಿಜೆಪಿ ಸೇರಿದ್ದರಿಂದ ಅವರು ದೂರವಾಗಿದ್ದರು. ಅಂತವರನ್ನು ಗುರುತಿಸಿ ಪಕ್ಷಕ್ಕೆ ಸೆಳೆದು ಕೊಳ್ಳಲು ಇದೀಗ ಬಿಜೆಪಿ ಮುಂದಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಬುಧವಾರ ನಡೆದ ಆರ್‌ಎಸ್‌ಎಸ್-ಬಿಜೆಪಿ ಮುಖಂಡರ ಸಭೆಯಲ್ಲೂ ಚರ್ಚೆ ನಡೆಸಲಾಗಿದ್ದು, ಯಡಿಯೂರಪ್ಪ ಅವರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
Advertisement
ಆರ್‌ಎಸ್‌ಎಸ್ ಮುಖಂಡರೊಂದಿಗೆ ಸಭೆ ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಆ ಪಕ್ಷದ ನಾಯಕರ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಬಿಜೆಪಿ ನಾಯಕರು, ಸೊಕ್ಕು ಮತ್ತು ಧಿಮಾಕಿನಿಂದ ವರ್ತಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಚಾಮರಾಜಪೇಟೆಯ ಕೇಶವಕೃಪಾದಲ್ಲಿ ಬುಧವಾರ ಆರ್‌ಎಸ್‌ಎಸ್ ಮುಖಂಡರೊಂದಿಗಿನ ಬಿಜೆಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಆರ್.ಅಶೋಕ್ ಮತ್ತು ಸಿ.ಟಿ.ರವಿ, ಹಿಂದೂ ಕಾರ್ಯಕರ್ತರ ಹತ್ಯೆ ಮತ್ತು ಅದರ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ, ದಲಿತ ಕುಟುಂಬದೊಂದಿಗೆ ಬಿಜೆಪಿಯವರು ಸಂಬಂಧ ಬೆಳೆಸಬೇಕು
ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಮುಂದಿಟ್ಟುಕೊಂಡು ವಾಗ್ಧಾಳಿ ನಡೆಸಿದರು. ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸೆ.6 ಮತ್ತು 7ರಂದು ಮಂಗಳೂರು ಚಲೋ ಹಮ್ಮಿಕೊಂಡಿದ್ದೇವೆ. ಈ ಮೂಲಕ ಕರ್ನಾಟಕದಲ್ಲೂ ಕಾಂಗ್ರೆಸ್‌ನ ವಿಳಾಸ ಇಲ್ಲದಂತೆ ಮಾಡುತ್ತೇವೆ ಎಂದರು.
ಬೆಂಗಳೂರು: ಸಿನಿಮಾ ಮತ್ತು ಸಂಗೀತ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಲಹರಿ ರೆಕಾರ್ಡಿಂಗ್ ಕಂಪೆನಿಯ ಮಾಲೀಕ ತುಳಸೀರಾಮ ನಾಯ್ಡು (ಲಹರಿ ವೇಲು) ಮತ್ತು ಕಂಪೆನಿಯ ವ್ಯವಸ್ಥಾಪಕ ಪಾಲುದಾರ ಜಿ.ಮನೋಹರ್ ಬುಧವಾರ ಬಿಜೆಪಿ ಸೇರಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಧ್ವಜ ಹಸ್ತಾಂತರಿಸುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಇವರೊಂದಿಗೆ ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಮಾಜಿ ಕಾರ್ಪೋರೇಟರ್ ಕೆ.ಎಸ್.ದುಷ್ಯಂತ್, ರಾಮನಗರದ ಸಾಮಾಜಿಕ ಕಾರ್ಯಕರ್ತ ಜಗದೀಶ್ ಗೌಡ ಹಾಗೂ ಕೇಶವರೆಡ್ಡಿ ಎಂಬುವರೂ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಲಹರಿ ವೇಲು ಮತ್ತು ಮನೋಹರ್ ಅವರು ಮೋದಿ ಜನಪರ ಆಡಳಿತ ಮೆಚ್ಚಿ ಪಕ್ಷ ಸೇರಿದ್ದಾರೆ. ಇದುವರೆಗೆ ಸಂಗೀತವನ್ನು ಎಲ್ಲೆಡೆ ಪಸರಿಸಿದ ವೇಲು, ಮುಂದೆ ಬಿಜೆಪಿಯ ಸಿದ್ಧಾಂತದ ಸಂಗೀತವನ್ನೂ ಎಲ್ಲೆಡೆ ಪಸರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು. ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಸಂಗೀತ ಮತ್ತು ಸುದ್ದಿ ಪ್ರಪಂಚದ ಉದ್ದಿಮೆದಾರರಾಗಿರುವ ಲಹರಿ ವೇಲು ಮತ್ತು ಮನೋಹರ್ ಅವರು ಬಿಜೆಪಿ ಸಂಗೀತ, ಬಿಜೆಪಿ ಸುದ್ದಿಗಳನ್ನು ಹಳ್ಳಿ ಹಳ್ಳಿಗಳಿಗೆ ಮುಟ್ಟಿಸಲು ದೊಡ್ಡ ಮಾಧ್ಯಮವಾಗಲಿದ್ದಾರೆ ಎಂದರು. ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಉಪನಾಯಕ ಆರ್. ಅಶೋಕ್, ರಾಜ್ಯ ಬಿಜೆಪಿ ಪ್ರದಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಶಾಸಕ ಎಲ್.ಎಂ.ರವಿಸುಬ್ರಮಣ್ಯ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮತ್ತಿತರರು ಹಾಜರಿದ್ದರು.