Advertisement
ರಾಜ್ಯದಲ್ಲಿ ನೂತನ ಬಿಜೆಪಿ ಸರ್ಕಾರ ರಚನೆಯಾಗಿ ಕೇವಲ ಎರಡು ತಿಂಗಳ ಅಂತರದಲ್ಲಿ “ಚುನಾವಣೆ ಗುಂಗು’ ಶುರುವಾಗಿದೆ. ಒಂದೆಡೆ ಅನರ್ಹಗೊಂಡ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಹಾಗೂ ಮತ್ತೂಂದೆಡೆ ರಾಜ್ಯದಲ್ಲಿ ಮರುಚುನಾವಣೆ ಮಾತುಗಳೂ ಕೇಳಿಬರುತ್ತಿವೆ. ಇವೆರಡರಲ್ಲಿ ಯಾವುದನ್ನು ಎದುರಿಸಬೇಕಾದರೂ ಆಡಳಿತ ಪಕ್ಷಕ್ಕೆ ತನ್ನ ಅಲ್ಪಾವಧಿಯಲ್ಲಿ ಎದ್ದು ಕಾಣುವ ಸಾಧನೆಯೊಂದನ್ನು ಜನರ ಮುಂದಿಡುವ ಸವಾಲು ಇದೆ.
Related Articles
Advertisement
ಇದೆಲ್ಲ ಕಾರಣಗಳ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಆದ್ಯತೆ ಮೇರೆಗೆ ಕೈಗೆತ್ತಿ ಕೊಳ್ಳಲಾಗುತ್ತಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇದೇ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿತ್ತು. ಆಗ, ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದಡಿ 30 ಸಾವಿರ ಕೋಟಿ ವೆಚ್ಚದಲ್ಲಿ ಪಿಆರ್‌ಆರ್‌ಯೋಜನೆ ಕೈಗೆತ್ತಿಕೊಳ್ಳಲು ಆಸಕ್ತಿ ತೋರಿಸಿತ್ತು. ಆದರೆ, ರಾಜ್ಯ ಸರ್ಕಾರದಿಂದ ಇದಕ್ಕೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗಲಿಲ್ಲ ಎಂದೂ ಮೂಲಗಳು ತಿಳಿಸುತ್ತವೆ.
ಭೂಮಿಗೆ ಭಾರೀ ಬೇಡಿಕೆ: ಉದ್ದೇಶಿತ ಯೋಜನೆಯಿಂದ ಆ ಭಾಗದ ಭೂಮಿಗೆ ಈಗ ಭಾರೀ ಬೇಡಿಕೆ ಬರಲಿದೆ. ಇದಕ್ಕೆ ಪೂರಕವಾಗಿ ಎರಡು ಎಕರೆಗಿಂತ ಹೆಚ್ಚು ಭೂಮಿ ಕಳೆದುಕೊಳ್ಳಲಿರುವವರಿಗೆ ಶೇ.50ರಷ್ಟು ನಗದು ಮತ್ತು ಉಳಿದ ಶೇ.50ರಷ್ಟು “ಅಭಿವೃದ್ಧಿ ಹಕ್ಕು ವರ್ಗಾವಣೆ’ (ಟಿಡಿಆರ್) ನೀಡಲು ಸರ್ಕಾರ ನಿರ್ಧರಿಸಿದೆ. ಪರಿಣಾಮ ಬಹುತೇಕ ಫಲಾನುಭವಿಗಳು ಸ್ವಾಧೀನದ ನಂತರ ಉಳಿದ ಭೂಮಿಯಲ್ಲಿ ಬಹು ಮಹಡಿ ಕಟ್ಟಡಗಳ ನಿರ್ಮಾಣ ಮಾಡುವತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ.
ಟಿಡಿಆರ್ ನಿರಾಕರಿಸುವವರಿಗೆ ಪೂರ್ಣ ಪ್ರಮಾಣದ ಪರಿಹಾರ ದೊರೆಯಲಿದೆ. 2013ರ ಭೂಸ್ವಾಧೀನ ಕಾಯ್ದೆ ಅಡಿ ಈ ಯೋಜನೆಯಲ್ಲಿ ಪರಿಹಾರ ನೀಡಲಾಗುತ್ತಿದೆ. ಹಾಗಾಗಿ, ಮಾರುಕಟ್ಟೆ ಮೌಲ್ಯ ಮತ್ತು ಮಾರ್ಗಸೂಚಿ ದರ ಎರಡೂ ಹೆಚ್ಚಳ ಆಗಲಿದ್ದು, ಭೂಮಿ ನೀಡಿದವರಿಗೆ ಅನುಕೂಲ ಆಗಲಿದೆ. ಭೂ ಸ್ವಾಧೀನ ಪ್ರಕ್ರಿಯೆ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, ಶೇ.80ರಷ್ಟು ಸ್ವಾಧೀನ ಪೂರ್ಣಗೊಳ್ಳುತ್ತಿದ್ದಂತೆ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
10 ಹೆದ್ದಾರಿಗಳಿಗೆ ಸಂಪರ್ಕ: ಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆಯು ಹೆಸರಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು-ಬಾಗಲೂರು ರಸ್ತೆ, ಹೊಸಕೋಟೆ-ಆನೇಕಲ್ ರಸ್ತೆ, ಸರ್ಜಾಪುರ ರಸ್ತೆ ಸೇರಿದಂತೆ ಒಟ್ಟು 10 ಪ್ರಮುಖ ಹೆದ್ದಾರಿಗಳನ್ನು ಸಂಪರ್ಕಿಸಲಿದೆ. 4 ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಕನಕಪುರ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ ಸೇರಿ 3 ಪ್ರಮುಖ ಮಾರ್ಗಗಳನ್ನು ಇದು ಸಂಪರ್ಕಿಸಲಿದೆ.
ನೈಸ್ ರಸ್ತೆಗೆ ಕೌಂಟರ್!: ನಗರದ ಒಂದು ಭಾಗ ಅಂದರೆ ದಕ್ಷಿಣದಲ್ಲಿ ಈಗಾಗಲೇ ನೈಸ್ ರಸ್ತೆ ನಿರ್ಮಿಸಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಉತ್ತರ ಭಾಗವನ್ನು ಪೆರಿಫೆರಲ್ ರಿಂಗ್ ರೋಡ್ ಆವರಿಸಲಿದೆ. ರಾಜಕೀಯ ಲೆಕ್ಕಾಚಾರ ಏನೇ ಇರಲಿ, ಸರ್ಕಾರದ ಕಲ್ಪನೆಯಂತೆ ಇದು ವ್ಯವಸ್ಥಿತವಾಗಿ ತಲೆಯೆತ್ತಿದರೆ, ಈ ಭಾಗ ಭವಿಷ್ಯದಲ್ಲಿ ವಿಶೇಷ ಆರ್ಥಿಕ ವಲಯವಾಗಿ ಹೊರಹೊಮ್ಮಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.
ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಅನ್ನು ಖಾಸಗಿ ಕಂಪನಿ ನಿರ್ಮಿಸಿದೆ. ಹಾಗಾಗಿ, ಅಲ್ಲಿನ ಮಾರ್ಗದುದ್ದಕ್ಕೂ ಅಭಿವೃದ್ಧಿಗೆ ಹಲವಾರು ತೊಡಕುಗಳು ಬಂದವು. ಆದರೆ, ಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆಯನ್ನು ಸ್ವತಃ ಸರ್ಕಾರ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಸಮಸ್ಯೆ ಆಗದು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದನ್ನು ನಿರ್ಮಿಸಲಿದ್ದು, ಜೈಕಾ ದೀರ್ಘಾವಧಿ ಸಾಲ ನೀಡಲಿದೆ.
ಮೂಲತಃ 100 ಮೀ. ಅಗಲ ಇತ್ತು: “ನಾನು ಬಿಡಿಎ ಆಯುಕ್ತನಾಗಿದ್ದಾಗಲೇ ಈ ಯೋಜನೆಗೆ ಅನುಮೋದನೆ ದೊರಕಿತ್ತು. ಆಗ ರಸ್ತೆಯ ವಿಸ್ತೀರ್ಣ 100 ಮೀ. ಇತ್ತು. ನಂತರದ ದಿನಗಳಲ್ಲಿ ಅದನ್ನು ಕಡಿಮೆ ಮಾಡುವ ಪ್ರಸ್ತಾವನೆ ಬಂದಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಈ ರಸ್ತೆ ನಿರ್ಮಾಣಕ್ಕೆ ಆಸಕ್ತಿ ತೋರಿಸಿತ್ತು. ಈಗ ಮತ್ತೆ 100 ಮೀ. ವಿಸ್ತೀರ್ಣದಲ್ಲಿ ನಿರ್ಮಿಸಲು ಮುಂದಾಗಿರುವುದು ಒಳ್ಳೆಯ ನಿರ್ಧಾರ’ ಎಂದು ಎಂ.ಕೆ.ಶಂಕರಲಿಂಗೇ ಗೌಡ ಹೇಳಿದರು.
“ರಸ್ತೆ ನಿರ್ಮಾಣದ ಜತೆಗೆ ಆ ಮಾರ್ಗದುದ್ದಕ್ಕೂ ಬರುವ ಪ್ರದೇಶವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ದೇಶೀ ಹಾಗೂ ವಿದೇಶಿ ವಿನ್ಯಾಸ ತಜ್ಞರನ್ನು ಬಳಸಿಕೊಳ್ಳಬೇಕು. ಕೆರೆಗಳು, ಉತ್ತಮ ಲ್ಯಾಂಡ್‌ಸ್ಕೇಪ್, ಉದ್ಯಾನ ನಿರ್ಮಿಸಬೇಕು. ಎಂಟು ಪಥದ ರಸ್ತೆ ಇದಾಗುವುದರಿಂದ ಮಧ್ಯದಲ್ಲಿ ಮುಂದಿನ ದಿನಗಳಲ್ಲಿ ಎತ್ತರಿಸಿದ ಮಾರ್ಗವನ್ನೂ ನಿರ್ಮಿಸಲು ಇಲ್ಲಿ ಅವಕಾಶ ಇದೆ’ ಎಂದು ಬಿಡಿಎ ಆಯುಕ್ತರಾಗಿದ್ದ ಮತ್ತೂಬ್ಬ ಐಎಎಸ್ ಅಧಿಕಾರಿ ಎಚ್.ಸಿದ್ದಯ್ಯ ತಿಳಿಸುತ್ತಾರೆ.
ತೆರಿಗೆ ವಿನಾಯ್ತಿ ನೀಡಲಿ ಸರ್ಕಾರ: ಕೂಡ ಹಲವು ಪೂರಕ ಕ್ರಮಗಳನ್ನು ಕೈಗೊಳ್ಳಬೇ ಕಾಗುತ್ತದೆ. ಈ ಮಾರ್ಗದಲ್ಲಿ ಹೂಡಿಕೆಗೆ ತೆರಿಗೆ ವಿನಾಯ್ತಿ, ವಿಶೇಷ ಸವಲತ್ತು ಸೇರಿದಂತೆ ಹಲವು ಕೊಡುಗೆಗಳನ್ನು ನೀಡಬೇಕು. ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಪ್ರೋತ್ಸಾಹ ನೀಡಬೇಕು. ಆಗ, ಹೂಡಿಕೆ ಜತೆಗೆ ನಿರ್ಮಾಣ ಮತ್ತಿತರ ವಲಯಗಳ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್.ಮೋಹನ್‌ದಾಸ ಹೆಗ್ಗಡೆ ತಿಳಿಸುತ್ತಾರೆ.
“ಪೆರಿಫೆರಲ್ ರಿಂಗ್ ರೋಡ್ ಯೋಜನೆ ಈಗಾಗಲೇ ಇರುವ ನೈಸ್ ರಸ್ತೆಗೆ ಕೌಂಟರ್ ಆಗಿದೆ. ಇದು ಪೂರ್ಣಗೊಂಡರೆ, ಬೆಂಗಳೂರು ಸಂಪೂರ್ಣ ಪೆರಿಫರಲ್ ವರ್ತುಲ ರಸ್ತೆಯಿಂದ ಆವೃತವಾಗುತ್ತದೆ. ಆಗ, ಎಲ್ಲ ಭಾರೀ ವಾಹನಗಳು ಹೊರಗಡೆಯಿಂದಲೇ ನಿರ್ಗಮಿಸುತ್ತವೆ. ನಗರದ ಹೃದಯಭಾಗಕ್ಕೆ ವಾಹನದಟ್ಟಣೆ ಹೊರೆ ಬಹುತೇಕ ಕಡಿಮೆ ಆಗಲಿದೆ. ಆ ಮೂಲಕ ವಾಯು ಮಾಲಿನ್ಯದ ಪ್ರಮಾಣ ಕೂಡ ತಗ್ಗಲಿದೆ’ ಎಂದು ಬಿಡಿಎ ಆಯುಕ್ತರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇ ಗೌಡ ತಿಳಿಸುತ್ತಾರೆ.
ಹಿಗ್ಗುತ್ತಾ-ಕುಗ್ಗುತ್ತಾ: ಪೆರಿಫೆರಲ್ ರಿಂಗ್ ರಸ್ತೆ ಆರಂಭದಿಂದಲೂ ಆಗಾಗ್ಗೆ ಹಿಗ್ಗುವುದು ಮತ್ತು ಕುಗ್ಗುವುದು ಆಗುತ್ತಲೇ ಇದೆ. ಮೊದಲು ಈ ಯೋಜನೆಯಡಿ ರಸ್ತೆಯ ಅಗಲ 100 ಮೀ. ಇತ್ತು. ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 60 ಮೀ. ಪಿಆರ್‌ಆರ್ ನಿರ್ಮಿಸುವುದಾಗಿ ಹೇಳಿತು. ಬಳಿಕ ಬಂದ ಸರ್ಕಾರ 75 ಮೀ. ಅಗಲದ ರಸ್ತೆ ನಿರ್ಮಿಸಲು ನಿರ್ಧರಿಸಿತು. ಈಗ ಪುನಃ ರಸ್ತೆ ಅಗಲ 100 ಮೀ.ಗೆ ಬಂದು ನಿಂತಿದೆ. ಸೈಕಲ್ ಪಥ, ಸರ್ವಿಸ್ ರಸ್ತೆ ಸೇರಿದಂತೆ ಎಂಟು ಪಥದ ರಸ್ತೆ ಇದರಲ್ಲಿ ಬರಲಿದೆ.
66.2 ಕಿ.ಮೀ.: ಪೆರಿಫೆರಲ್ ರಿಂಗ್ ರಸ್ತೆ ಉದ್ದ (ತುಮಕೂರು ರಸ್ತೆಯಿಂದ ಹೊಸೂರು ರಸ್ತೆ)
48 ಕಿ.ಮೀ.: ಈಗಿರುವ ನೈಸ್ ರಸ್ತೆ ಉದ್ದ
1,810 ಎಕರೆ: ಯೋಜನೆ ನಿರ್ಮಾಣಕ್ಕಾಗಿ ಆಗಲಿರುವ ಭೂಸ್ವಾಧೀನ
8,100 ಕೋಟಿ ರೂ.: ಸ್ವಾಧೀನಕ್ಕಾಗಿ ಮೀಸಲಿಟ್ಟ ಪರಿಹಾರ ಮೊತ್ತ
4,000 ಕೋಟಿ ರೂ.: ನಿರ್ಮಾಣಕ್ಕಾಗಿ ಮೀಸಲಿಟ್ಟ ಅಂದಾಜು ವೆಚ್ಚ
11,950 ಕೋಟಿ ರೂ.: ಯೋಜನಾ ವೆಚ್ಚ
ಪೆರಿಫೆರಲ್ ಪಯಣ…-2007ರಲ್ಲಿ ಯೋಜನೆ ಪ್ರಸ್ತಾಪ.
-2010ರಲ್ಲಿ ಕೈಬಿಡಲಾಯಿತು.
-2016ರಲ್ಲಿ ಮತ್ತೆ ಅನುಮೋದನೆ.
-2017ರಲ್ಲಿ ಬೆಂಗಳೂರು ಪಿಆರ್‌ಆರ್ ಡೆವಲಪ್‌ಮೆಂಟ್ -ಕಾರ್ಪೊರೇಷನ್ ಅಸ್ತಿತ್ವಕ್ಕೆ ಕ್ರಮ.
-2019ರಲ್ಲಿ ಸಚಿವ ಸಂಪುಟ ಅನುಮೋದನೆ.
-ಈ ಮಧ್ಯೆ ಕೇಂದ್ರ ಸರ್ಕಾರ ಯೋಜನೆಯನ್ನು ತಾನು ಕೈಗೆತ್ತಿಕೊಳ್ಳಲು ಮುಂದೆಬಂದಿತ್ತು. ಜಪಾನ್ ಇಂಟರ್‌ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ (ಜೈಕಾ) ಕೂಡ ಆಸಕ್ತಿ ತೋರಿಸಿತ್ತು. * ವಿಜಯಕುಮಾರ್ ಚಂದರಗಿ