Advertisement

ಕರ್ನಾಟಕದಲ್ಲೂ ಹಳೇ ಪಿಂಚಣಿ ಅನುಷ್ಠಾನ?

12:17 AM Dec 19, 2022 | Team Udayavani |

ಬೆಂಗಳೂರು: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ “ಹೊಸ ಪಿಂಚಣಿ ಯೋಜನೆ’ (ಎನ್‌ಪಿಎಸ್‌) ಕುರಿತು ರಾಷ್ಟ್ರವ್ಯಾಪಿ ಚರ್ಚೆಯಾಗುತ್ತಿದ್ದು ರಾಜ್ಯದಲ್ಲೂ ಈ ವಿಚಾರ ಚುನಾವಣೆ ಸಂದರ್ಭದಲ್ಲಿ ಮುನ್ನಲೆಗೆ ಬರುವ ಸಾಧ್ಯತೆಯಿದೆ.

Advertisement

ಅಧಿಕಾರಕ್ಕೆ ಬಂದರೆ ಎನ್‌ಪಿಎಸ್‌ ರದ್ದುಪಡಿಸಲಾಗುವುದು ಎಂದು ಹಿಮಾಚಲ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅಲ್ಲಿ ಕಾಂಗ್ರೆಸ್‌ನ ಗೆಲುವಿಗೆ ಇದೇ ವಿಚಾರ ಸಹಕಾರಿಯಾಗಿದೆ. ಇದನ್ನು ಮನಗಂಡಿರುವ ಕಾಂಗ್ರೆಸ್‌ ರಾಜ್ಯದಲ್ಲೂ ಪ್ರಣಾಳಿಕೆಯಲ್ಲಿ ಎನ್‌ಪಿಎಸ್‌ ವಿಷಯ ಸೇರ್ಪಡೆಗೆ ತೀರ್ಮಾನಿಸಿದೆ.

ಇದರ ನಡು ವೆಯೇ ರಾಜ್ಯ ಸರ್ಕಾರಿ ನೌಕರರ ಸಂಘ ಎನ್‌ಪಿಎಸ್‌ ರದ್ದತಿಗೆ ಆಗ್ರಹಿಸಿ ಚುನಾವಣೆ ಹೊಸ್ತಿಲಲ್ಲಿ ಅಂದರೆ, ಮಾರ್ಚ್‌ ಬಳಿಕ ನಿರ್ಣಾಯಕ ಹೋರಾಟ ಕೈಗೊಳ್ಳಲು ನಿರ್ಧರಿಸಿದೆ. ಜೊತೆಗೆ, ಕರ್ನಾಟಕ ರಾಜ್ಯ ಎನ್‌ಪಿಎಸ್‌ ನೌಕರರ ಸಂಘ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಮಾಡು ಇಲ್ಲವೇ ಮಡಿ ಹೋರಾಟ ಕೈಗೊಂಡಿದ್ದು, ಡಿ.19ರಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದೆ. ಹೀಗಾಗಿ, ಸದನದಲ್ಲಿಯೂ ಈ ಬಗ್ಗೆ ಪ್ರಸ್ತಾಪವಾಗುವ ಸಾಧ್ಯತೆ ಇದೆ.

ಕುತೂಹಲದ ವಿಚಾರವೆಂದರೆ, ಯಾವುದೇ ಕಾರಣಕ್ಕೂ ಹಳೆ ಪಿಂಚಣಿ ಯೋಜನೆ ಮರು ಜಾರಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಇತ್ತೀಚಿಗೆ ಸಂಸತ್ತಿನಲ್ಲಿ ಹೇಳಿದೆ. ಹೀಗಾಗಿ, ರಾಜ್ಯ ಬಿಜೆಪಿ ಈ ಬಗ್ಗೆ ಏನೂ ಮಾಡುವಂತಿಲ್ಲ. ಆದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಾಗೂ ಆಮ್‌ಆದ್ಮಿ ಪಕ್ಷ ಇದನ್ನು ಚುನಾವಣಾ ವಿಷಯವನ್ನಾಗಿ ಅಸ್ತ್ರವನ್ನಾಗಿಸಿಕೊಳ್ಳುವ ಸಾಧ್ಯತೆಯಿದೆ.

ರಾಜ್ಯಗಳಿಂದ ರದ್ದು ಸಾಧ್ಯವೆ?
ರಾಜ್ಯ ಸರ್ಕಾರಗಳು ಹೊಸ ಪಿಂಚಣಿ ವ್ಯವಸ್ಥೆ ರದ್ದು ಮಾಡುವ ನಿರ್ಧಾರ ಕೈಗೊಂಡರೂ, ಅದು ಅನುಷ್ಠಾನಕ್ಕೆ ತರುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಸಂಸತ್ತಿನಲ್ಲಿ ಕಾಯ್ದೆ ಮೂಲಕ ಎನ್‌ಪಿಎಸ್‌ ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರದ “ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ (ಪಿಎಫ್‌ಆರ್‌ಡಿಎ) ಕಾಯ್ದೆ ಅದಕ್ಕೆ ಅವಕಾಶ ನೀಡುವುದಿಲ್ಲ.

Advertisement

ಇಡೀ ದೇಶದಲ್ಲಿ ಸದ್ಯ ಎನ್‌ಪಿಎಸ್‌ ಜಾರಿಯಲ್ಲಿದೆ. ಪಶ್ಚಿಮ ಬಂಗಾಳ, ತೆಲಂಗಾಣ, ರಾಜಸ್ಥಾನ, ಛತ್ತೀಸಗಢ, ಜಾರ್ಖಂಡ್‌, ಪಂಜಾಬ್‌ ರಾಜ್ಯಗಳಲ್ಲಿ ಎನ್‌ಪಿಎಸ್‌ ಜಾರಿಗೆ ತರುವುದಿಲ್ಲ ಎಂದು ಹೇಳಲಾಗಿದೆ. ಆದರೆ, ಈವರೆಗೆ ಅದು ಅನುಷ್ಠಾನಕ್ಕೆ ಬಂದಿಲ್ಲ. ಗುಜರಾತಿನಲ್ಲಿ ಅಧಿಕಾರಕ್ಕೆ ಬಂದರೆ ಎನ್‌ಪಿಎಸ್‌ ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಇದೇ ಭರವಸೆಯನ್ನು ಪಂಜಾಬ್‌ನಲ್ಲಿ ಆಮ್‌ ಆದ್ಮಿ ಕೊಟ್ಟಿತ್ತು. ಎನ್‌ಪಿಎಸ್‌ ರದ್ದಾಗಬೇಕಾದರೆ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು.

ಎನ್‌ಪಿಎಸ್‌ ವಿಚಾರದಲ್ಲಿ ಹಿಮಾಚಲ ಪ್ರದೇಶದಲ್ಲಿ ನಮಗೆ ಪೆಟ್ಟಾಗಿರಬಹುದು. ಆದರೆ, ಕರ್ನಾಟಕದ ಮಟ್ಟಿಗೆ ಈ ಬಗ್ಗೆ ಪಕ್ಷದಲ್ಲಿ ಇನ್ನೂ ಯಾವುದೇ ಚರ್ಚೆ ಆಗಿಲ್ಲ.
– ಎನ್‌. ರವಿಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಷಿ.

ನೂತನ ಪಿಂಚಣಿ ಯೋಜನೆ ರದ್ದತಿ ಮುಂದಿನ ಚುನಾವಣೆಯಲ್ಲಿ ನಮಗೆ ಆದ್ಯತೆಯ ವಿಷಯವಾಗಿದೆ. ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಇದನ್ನು ಸೇರಿಸುತ್ತೇವೆ.
– ಮಧು ಬಂಗಾರಪ್ಪ, ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ.

ಹೊಸ ಪಿಂಚಣಿ ಯೋಜನೆಯ ಆರ್ಥಿಕ ಸಾಧಕ-ಬಾಧಕಗಳ ಬಗ್ಗೆ ಜೆಡಿಎಸ್‌ ಪಕ್ಷಕ್ಕೆ ಇನ್ನೊಂದಿಷ್ಟು ಸ್ಪಷ್ಟತೆ ಬೇಕಿದೆ. ಈವರೆಗೆ ಗಂಭೀರ ಚರ್ಚೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಭೆಗಳನ್ನು ನಡೆಸಲಾಗುವುದು.
-ಕೆ.ಎ. ತಿಪ್ಪೇಸ್ವಾಮಿ, ವಿಧಾನಪರಿಷತ್‌ ಸದಸ್ಯ.

Advertisement

Udayavani is now on Telegram. Click here to join our channel and stay updated with the latest news.

Next