ಬೆಳ್ತಂಗಡಿ: ಮಿತ್ತಬಾಗಿಲು ಶಾಂತಿಗುಡ್ಡೆ ಸಮೀಪದ ಕಾಡುಮನೆ ನಿವಾಸಿ ಅಣ್ಣು ಪೂಜಾರಿ (82) ಅವರು ಕಳೆದ ಅ. 1ರಂದು ನಾಪತ್ತೆಯಾಗಿದ್ದು, ಅ. 4ರ ಸಂಜೆ ಸಮೀಪದ ಕುದುರೆಮುಖ ಅರಣ್ಯ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ.
ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿತ್ತು. ಸ್ಥಳೀಯರು ಹಾಗೂ ಮನೆಮಂದಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಮಿತ್ತಬಾಗಿಲು ಗ್ರಾ.ಪಂ. ಉಪಾಧ್ಯಕ್ಷ ವಿನಯಚಂದ್ರ, ಮಾಜಿ ಸದಸ್ಯ ವಿಜಯ ಗೌಡ ಸ್ಥಳೀಯರಾದ ಸಂದೀಪ್ ಪೂಜಾರಿ, ಸುರೇಂದ್ರ ಪೂಜಾರಿ, ತಿಮ್ಮಪ್ಪ ಪೂಜಾರಿ, ಸುಧಾಕರ್ ಸೇರಿದಂತೆ 60ಕ್ಕೂ ಅಧಿಕ ಯುವಕರು ಅರಣ್ಯಾಧಿಕಾರಿಗಳ ಅನುಮತಿಯಂತೆ 7 ತಂಡಗಳಾಗಿ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದು, ಮನೆಯಿಂದ 10 ಕಿ.ಮೀ. ದೂರದ ಕಾಡುಮನೆ ಕುಕ್ಕಾಡಿಯಲ್ಲಿ ಕಲ್ಲಿನ ಮೇಲೆ ಕುಳಿತಿದ್ದರು.
ಇದನ್ನೂ ಓದಿ:ಪ್ರವಾಸಿ ತಾಣಗಳಿಗೆ ಮುಗಿಬೀಳುತ್ತಿರುವ ಜನ : ಅಪಾಯದ ಅರಿವಿರಲಿ
ಅವರು ಮೂರು ದಿನಗಳ ಕಾಲ ನೀರು ಕುಡಿದು ದಿನ ಕಳೆದಿದ್ದರು ಎಂದವರ ಪುತ್ರಿ ವನಿತಾ ಉಮೇಶ್ ತಿಳಿಸಿದ್ದಾರೆ.
ಅಣ್ಣು ಪೂಜಾರಿ ಅವರಿಗೆ ನಾಲ್ವರು ಪುತ್ರಿಯರು. ವಯೋ ಸಹಜ ಮರೆವಿನ ಕಾಯಿಲೆ ಹೆಚ್ಚಾಗಿದ್ದರಿಂದ ಕಾಡಿಗೆ ತೆರಳಿದವರಿಗೆ ಮನೆ ರಸ್ತೆ ಸಿಗದೆ ಕಾಡಿನಲ್ಲೆ ಉಳಿದಿದ್ದರು.