ಬೆಂಗಳೂರು: ಕೋವಿಡ್-19 ಸಂಬಂಧಿತ ಸೇವೆಗೆ ಸಂಸ್ಥೆಯ 500 ವಾಹನಗಳನ್ನು ನೀಡಲು ಓಲಾ ಸಂಸ್ಥೆ ಮುಂದಾಗಿದ್ದು, ಸರಕಾರ ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎಂದು ಓಲಾ ಮುಖ್ಯಸ್ಥರು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರಿಗೆ ಮಾಹಿತಿ ನೀಡಿದ್ದಾರೆ.
ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರಿಗೆ ಭಾನುವಾರ ಕರೆ ಮಾಡಿದ್ದ ಓಲಾ ಸಂಸ್ಥಾಪಕ ಭವಿಶ್ ಅರ್ಗವಾಲ್, ನಮ್ಮ ಸಂಸ್ಥೆಯ 500 ಕ್ಯಾಬ್‌ಗಳನ್ನು ಸರ್ಕಾರ ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಸದ್ಯ ಓಲಾ ಕ್ಯಾಬ್‌ಗಳು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಯಾವ ಜಿಲ್ಲೆಗಳಿಗೆ ಎಷ್ಟು ಕ್ಯಾಬ್‌ಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆ.
ಓಲಾ ಕ್ಯಾಬ್ ಸೇವೆ ಬಳಸಿಕೊಳ್ಳುವ ಕುರಿತಂತೆ ಆಯಾ ಜಿಲ್ಲೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿರುವ ಡಾ. ಅಶ್ವತ್ಥನಾರಾಯಣ ಅವರು, ಕೋವಿಡ್19 ಸಂಬಂಧಿತ ಸೇವೆಗಳಿಗೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಓಲಾ ಕ್ಯಾಬ್ ಬಳಸಿಕೊಳ್ಳಬಹುದು ಎಂದು ಸೂಚಿಸಿದ್ದಾರೆ.
ವೈದ್ಯ ಸಿಬ್ಬಂದಿ ಸೇರಿದಂತೆ ಅಗತ್ಯ ಸೇವೆ ಸಲ್ಲಿಸುತ್ತಿರುವ ಓಡಾಟಕ್ಕೆ ಈ ಕ್ಯಾಬ್‌ಗಳನ್ನು ಬಳಸಿಕೊಳ್ಳಲು ಅವಕಾಶವಿದೆ. ಔಷಧ, ಇನ್ನತರ ಅಗತ್ಯ ವಸ್ತುಗಳ ಪೂರೈಕೆ ಹಾಗೂ ತುರ್ತು ಸಂದರ್ಭದಲ್ಲಿ ಕ್ಯಾಬ್‌ಗಳನ್ನು ಬಳಸಿಕೊಳ್ಳಬಹುದು.