Advertisement

ತೀವ್ರಗೊಂಡ ಓಲಾ-ಉಬರ್‌ ಚಾಲಕರ ಪ್ರತಿಭಟನೆ

12:19 PM Feb 25, 2017 | Team Udayavani |

ಬೆಂಗಳೂರು: ಆ್ಯಪ್‌ ಆಧಾರಿತ ಟ್ಯಾಕ್ಸಿ ಚಾಲಕರ ಪ್ರತಿಭಟನೆ ಶುಕ್ರವಾರ ತೀವ್ರಗೊಂಡಿದ್ದು, ಪ್ರತಿಭಟನೆ ನಡುವೆಯೂ ರಸ್ತೆಗಿಳಿದಿದ್ದ ಕೆಲವು ಓಲಾ-ಉಬರ್‌ ಟ್ಯಾಕ್ಸಿಗಳನ್ನು ಒತ್ತಾಯಪೂರ್ವಕವಾಗಿ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿದ ಘಟನೆಗಳು ನಡೆದಿವೆ. 

Advertisement

ಎಂ.ಜಿ. ರಸ್ತೆ, ಯಶವಂತಪುರ, ನಾಗವಾರ, ಹೊರವರ್ತುಲ ರಸ್ತೆ ಸೇರಿದಂತೆ ಅಲ್ಲಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿಗಳನ್ನು ತಡೆದ ಕೆಲ ಕಿಡಿಗೇಡಿಗಳು, ಕಾರಿಗೆ ಮೊಟ್ಟೆಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧದ ವೀಡಿಯೊ ತುಣುಕುಗಳು ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ರೀತಿ ವಿವಿಧೆಡೆ ಕಾರ್ಯಾಚರಣೆ ಮಾಡುತ್ತಿದ್ದ ಓಲಾ- ಉಬರ್‌ ವಾಹನಗಳನ್ನು ತಡೆದು, ಪ್ರಯಾಣಿಕರನ್ನು ಕೆಳಗಿಳಿಸಿದ ಘಟನೆಗಳು ವರದಿಯಾಗಿವೆ.  

ಬೆನ್ನಲ್ಲೇ “ಹೋರಾಟ ಬೆಂಬಲಿಸದೆ, ಎಂದಿನಂತೆ ಕಾರ್ಯಾಚರಣೆ ಮಾಡುತ್ತಿರುವವರಿಗೆ ಕೆಲ ಸಣ್ಣ-ಪುಟ್ಟ ಸಂಘಟನೆಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ತಕ್ಷಣ ಇದು ನಿಲ್ಲಬೇಕು. ಈ ರೀತಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಪಟ್ಟ ಅಕಾರಿಗಳು ಕಡಿವಾಣ ಹಾಕಬೇಕು’ ಎಂದು ಉಬರ್‌ ಸಂಸ್ಥೆ ಮನವಿ ಮಾಡಿದೆ. ಈ ಮಧ್ಯೆ ಕಾರ್ಯಾಚರಣೆಗೆ ಅಡ್ಡಿಪಡಿಸುವವರನ್ನು ಪೊಲೀಸರು ಅಲ್ಲಲ್ಲಿ ವಶಕ್ಕೆ ಪಡೆದಿದ್ದಾರೆ. 

ವಾಹನಗಳ ಸಂಖ್ಯೆ ವಿರಳ: ಈ ನಡುವೆ ಶುಕ್ರವಾರ ಓಲಾ ಮತ್ತು ಉಬರ್‌ ಕಂಪೆನಿಗಳಿಗೆ ಸೇರಿದ ಟ್ಯಾಕ್ಸಿಗಳ ಓಡಾಟ ತುಂಬಾ ವಿರಳವಾಗಿತ್ತು. ಆ್ಯಪ್‌ ಒತ್ತಿದ ತಕ್ಷಣ ಯಾವುದೇ ಮಾರ್ಗದಲ್ಲಿ ಮೂರ್‍ನಾಲ್ಕು ವಾಹನಗಳು ಇರುತ್ತಿದ್ದವು. ಈಗ ಒಂದೇ ಒಂದು ವಾಹನ ಲಭ್ಯವಿರುತ್ತದೆ. ಅದೂ ನಿಯಮಿತ ಸಮಯಕ್ಕೆ ಬರುವುದಿಲ್ಲ. ಬಂದರೂ ಆ ವಾಹನಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕಬೇಕಾಗಿದೆ ಎಂದು ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ.  

ಈ ಮೊದಲು ನಿತ್ಯ 10ರಿಂದ 12 ತಾಸು ಓಲಾ-ಉಬರ್‌ ಕಂಪೆನಿಗಳ ಟ್ಯಾಕ್ಸಿಗಳು ಕಾರ್ಯಾಚರಣೆ ಮಾಡಿದರೆ ಸಾಕು, ಚಾಲಕರಿಗೆ ತಿಂಗಳಿಗೆ 70 ಸಾವಿರ ರೂ. ಆದಾಯ ಬರುತ್ತಿತ್ತು. ಆದರೆ, ಈಗ 12ರಿಂದ 14 ತಾಸು ದುಡಿದರೂ 40ರಿಂದ 50 ಸಾವಿರ ರೂ. ಬರುತ್ತಿದೆ. ಇದರಿಂದ ವಿಚಲಿತಗೊಂಡು ಚಾಲಕರು ಈ ರೀತಿ ವರ್ತಿಸುತ್ತಿದ್ದಾರೆ. ಆದರೆ, ವ್ಯಾಪಾರ ಎಂದಾಗ ಸ್ಪರ್ಧೆ ಇರುತ್ತದೆ. ಇದೆಲ್ಲಾ ಮಾಮೂಲು ಎಂದು ಉಬರ್‌ ಮೂಲಗಳ ವಾದ. 

Advertisement

ಹವಾನಿಯಂತ್ರಿತ ರಹಿತ ಕಾರುಗಳಿಗೆ ಕಿ.ಮೀ.ಗೆ 14.5 ರೂ. ಮತ್ತು ಹವಾನಿಯಂತ್ರಿತ ಕಾರುಗಳಿಗೆ ಕಿ.ಮೀ.ಗೆ 19.5 ರೂ. ನಿಗದಿ ಪಡಿಸಬೇಕು. ಕಂಪನಿಗಳು ಚಾಲಕರ ಮೇಲೆ ದಂಡ ವಿಸಬಾರದು. ಈಗಾಗಲೇ ಓಲಾ-ಉಬರ್‌ ಅಡಿ ಲಕ್ಷಕ್ಕೂ ಹೆಚ್ಚು ವಾಹನಗಳು ಕಾರ್ಯಾಚರಣೆ ಮಾಡುತ್ತಿದ್ದು, ಇನ್ಮುಂದೆ ಮತ್ತೆ ಹೊಸದಾಗಿ ವಾಹನಗಳನ್ನು ಜೋಡಣೆ ಮಾಡಿಕೊಳ್ಳಬಾರದು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಚಾಲಕರು ಪ್ರತಿಭಟನೆಗಿಳಿದಿದ್ದಾರೆ. 

ಪ್ರತಿಭಟನೆಗೂ ನಮಗೂ ಸಂಬಂಧ ಇಲ್ಲ: ತನ್ವೀರ್‌ಪಾಷ
ಈ ಅಹಿತಕರ ಘಟನೆಗಳಿಗೂ ಮತ್ತು ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗೂ ಸಂಬಂಧವಿಲ್ಲ. ಹೋರಾಟವನ್ನು ಹತ್ತಿಕ್ಕಲು ಉದ್ದೇಶಪೂರ್ವಕವಾಗಿ ತಪ್ಪುಸಂದೇಶ ರವಾನಿಸಲಾಗುತ್ತಿದೆ. ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿದೆ. ಹಾಗೂ ಬೇಡಿಕೆ ಈಡೇರುವವರೆಗೂ ಇದು ಮುಂದುವರಿಯಲಿದೆ ಎಂದು ಓಲಾ-ಉಬರ್‌ ಚಾಲಕರು ಮತ್ತು ಮಾಲಿಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷ ಸ್ಪಷ್ಟಪಡಿಸಿದ್ದಾರೆ.  

ಗ್ರಾಹಕರನ್ನು ಸೆಳೆಯಲು  ನಿಟ್ಟಿನಲ್ಲಿ ಉತ್ತರ ಭಾರತ ಚಾಲಕರನ್ನು ನೇಮಿಸಲಾಗುತ್ತಿದೆ. ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಗೆ ಸಂಸ್ಥೆಗಳ ವತಿಯಿಂದ ನಿಯೋಜಿಸಿರುವ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸುವಂತೆ ಮಾಡಿ ಚಾಲಕರ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡಲಾಗುತ್ತಿದೆ ಎಂದು ಸಂಘಟನೆ ಮುಖಂಡರು ಆರೋಪಿಸಿದ್ದಾರೆ.

ಇದು ಓಲಾ-ಉಬರ್‌ ಮತ್ತು ಅವರೊಂದಿಗೆ ಜೋಡಣೆ ಮಾಡಿ ಕೊಂಡ ಟ್ಯಾಕ್ಸಿಗಳ ಸಮಸ್ಯೆ. ಹಾಗಾಗಿ, ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿ ಸಲು ಬರುವು ದಿಲ್ಲ. ಅವರಿ ಬ್ಬರೂ ಕುಳಿತು ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು.
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next