Advertisement

ನವ ನಗರೋತ್ಥಾನ ಯೋಜನೆಗೆ ಅಸ್ತು

12:48 AM Sep 24, 2019 | Lakshmi GovindaRaju |

ಬೆಂಗಳೂರು: ಸಮ್ಮಿಶ್ರ ಸರ್ಕಾರ ರೂಪಿಸಿದ್ದ ವೈಟ್‌ಟಾಪಿಂಗ್‌ ಯೋಜನೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ವಿವೇಚನಾ ನಿಧಿಯನ್ನು ನೂತನ ಕ್ರಿಯಾಯೋಜನೆಯಿಂದ ಕೈಬಿಡುವ ಮೂಲಕ 8,343 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಮುಖ್ಯಮಂತ್ರಿಗಳ ನವನಗರೋತ್ಥಾನ ಕ್ರಿಯಾಯೋಜನೆಯಡಿ 2018-19, 2019-20 ಹಾಗೂ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಾಮಗಾರಿಗಳ ಕ್ರಿಯಾಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.

Advertisement

ಸರ್ಕಾರದ ಅನುದಾನವನ್ನು ಬಳಸಿಕೊಂಡು ನಗರದ ಮೂಲ ಸೌಕರ್ಯ ಹೆಚ್ಚಿಸುವುದಕ್ಕೆ ಒತ್ತು ನೀಡುವಂತೆಯೂ ಅನುಮೋದನಾ ಪತ್ರದಲ್ಲಿ ಸೂಚನೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ 2018-19ನೇ ಸಾಲಿನಲ್ಲಿ 2500 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು. ಈ ಮೊತ್ತವನ್ನು 2018-19, 2019-20 ಹಾಗೂ 2020-21ನೇ ಸಾಲಿನಲ್ಲಿ ಅನುಷ್ಠಾನಗೊಳಿಸುವುದಕ್ಕೆ ಬಿಬಿಎಂಪಿಯು ಕ್ರಿಯಾಯೋಜನೆ ಸಲ್ಲಿಸಿತ್ತು.

ನಗರಾಭಿವೃದ್ಧಿ ಇಲಾಖೆಯು 2018-19ನೇ ಸಾಲಿನಲ್ಲಿ ಸಲ್ಲಿಸಲಾಗಿದ್ದ ಕ್ರಿಯಾಯೋಜನೆಯ 2500 ಕೋಟಿ ರೂ. ಮೊತ್ತಕ್ಕೆ ಹೆಚ್ಚುವರಿಯಾಗಿ 5515.37 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದ್ದು, 8,343.87 ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಈ ಮೊತ್ತವನ್ನು ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು, 10 ಸಾವಿರ ಕೋಟಿಗಳಿಗೆ ಕಡಿಮೆ ಇರದ ರೀತಿಯಲ್ಲಿ ಪ್ಯಾಕೇಜ್‌ಗಳಿಗೆ ಮುಂದಿನ ಎರಡು ವರ್ಷಗಳಲ್ಲಿ ಪ್ರಾಧಿಕಾರದ ಅನುಮೋದನೆ ಪಡೆದುಕೊಂಡು, ಮುಂದಿನ ಮೂರು ಆರ್ಥಿಕ ವರ್ಷಗಳಲ್ಲಿ ಹಂತ ಹಂತವಾಗಿ ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ ಆದೇಶ ಮಾಡಲಾಗಿದೆ. ಅದೇ ರೀತಿಯಲ್ಲಿ 50 ಕೋಟಿ ರೂ.ಗೆ ಮೀರಿದ ಪ್ಯಾಕೇಜ್‌ ಹಾಗೂ ಟೆಂಡರ್‌ ಕಾಮಗಾರಿಗಳಿಗೆ ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳುಬೇಕು ಎಂದು ಷರತ್ತು ವಿಧಿಸಲಾಗಿದೆ.

ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚು ಹಣ: ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯು ಹೆಚ್ಚಾಗುತ್ತಿದ್ದು, ಇದನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿರುತ್ತದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಅನುದಾನ ಬಳಸಿಕೊಳ್ಳ ಬಹುದಾಗಿರುತ್ತದೆ ಎಂದು ವಿವರಿಸಲಾಗಿದ್ದು, ಇದಕ್ಕೆ ಸರ್ಕಾರ ಆದ್ಯತೆ ನೀಡುವುದಾಗಿ ಪತ್ರದಲ್ಲಿ ವಿವರಿಸಲಾಗಿದೆ. ಹಾಗೇ, ಘನ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.

Advertisement

ಯಾವುದೇ ಕೊರತೆಯನ್ನು ಡೀಮ್ಡ್ ವೆಚ್ಚವೆಂದು ಪರಿಗಣಿಸಬೇಕು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದ ಅನುಸಾರವೇ ಕಾಮಗಾರಿಗಳನ್ನು ನಡೆಸಬೇಕು ಹಾಗೂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದರೂ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಅನುಮೋದನೆ ಪತ್ರದಲ್ಲಿ ಉಲ್ಲೇಖೀಸಲಾಗಿದೆ.

ಕ್ರಿಯಾ ಯೋಜನೆಯಲ್ಲಿ ಹೆಚ್ಚುವರಿಯಾಗಿ ಸೇರಿಸಿದ ಯೋಜನೆಗಳು
-ಓಆರ್‌ಆರ್‌ಸಿಎ ಸಂಸ್ಥೆಯು ರಸ್ತೆಗಳ ಅಭಿವೃದ್ಧಿಗೆ ಸಲ್ಲಿಸಿದ್ದ ಮನವಿಯ ಮೇರೆಗೆ 250 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ.

-ಮೆಕ್ಯಾನಿಕಲ್‌ ಸ್ವೀಪಿಂಗ್‌ ಮೆಷೀನ್‌ಗಳ ಖರೀದಿಗೆ 25 ಕೋಟಿ ರೂ. ಮತ್ತು ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು 35 ಕೋಟಿ ರೂ. ಮೀಸಲು.

-ಆಯ್ದ ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸುವುದಕ್ಕೆ 50 ಕೋಟಿ ರೂ. ಮೀಸಲು.

ವಿವಿಧ ಕಾಮಗಾರಿಗಳ ಅನುದಾನ ಹಂಚಿಕೆ
ಯೋಜನೆ ಉದ್ದೇಶಿತ ಕ್ರಿಯಾಯೋಜನೆ ಅನುಮೋದಿತ ಕ್ರಿಯಾಯೋಜನೆ (ಕೋಟಿಗಳಲ್ಲಿ)
-ವೈಟ್‌ಟಾಪಿಂಗ್‌ 1172 –
-ಕೆರೆಗಳ ಅಭಿವೃದ್ಧಿ 348 317.25
-ರಸ್ತೆಗಳ ಅಭಿವೃದ್ಧಿ 2247.68 4,107.34
-ಗ್ರೇಡ್‌ಸಪರೇಟರ್‌ ನಿರ್ಮಾಣ 534.60 433.14
-ನೀರುಗಾಲುವೆ ಅಭಿವೃದ್ಧಿ 1321.14 1,060.89
-ಪಾದಚಾರಿ ಮಾರ್ಗ ಅಭಿವೃದ್ಧಿ 74 –
-110 ಹಳ್ಳಿಗಳ ರಸ್ತೆ ಅಭಿವೃದ್ಧಿ 275 364.09
-ಐಟಿಪಿಎಲ್‌ಗೆ ಪರ್ಯಾಯ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಮಾಡುವ ಯೋಜನೆ (14) 80 80
-ಎನ್‌ಎಎಲ್‌-ವಿಂಡ್‌ ಟನಲ್‌ ರಸ್ತೆ ನಿರ್ಮಾಣ 65 65
-ಘನತ್ಯಾಜ್ಯ ನಿರ್ವಹಣೆ 753 584.35
-ಕಟ್ಟಡ ಮತ್ತು ಆಸ್ಪತ್ರೆ 247.95 833.97
-ರಕ್ಷಣಾ ಇಲಾಖೆಯಿಂದ ಪಡೆದುಕೊಳ್ಳಬೇಕಾಗಿರುವ ಜಮೀನಿನಲ್ಲಿ 102 74
-ಯೋಜನೆಗಳ ಭೂಸ್ವಾಧೀನ ವೆಚ್ಚ 100 50
-ಬಿಡಿಎಯಿಂದ ಬಿಬಿಎಂಪಿಗೆ ವರ್ಗಾವಣೆಯಾಗಿರುವ ಯೋಜನೆಗಳು 195 45.34
-ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿವೇಚನೆಗೆ ಒಳಪಟ್ಟ ನಿಧಿ 500 –
-ಆಯ್ದ ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ – 50
-ಓಆರ್‌ಆರ್‌ಸಿಎ ಸಂಸ್ಥೆಯ ರಸ್ತೆಗಳ ಅಭಿವೃದ್ಧಿಗೆ – 250
-ಮೆಕ್ಯಾನಿಕಲ್‌ ಸ್ವೀಪಿಂಗ್‌ ಮೆಷೀನ್‌ಗಳ ಖರೀದಿ – 25
-ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ – 3.50
-ಮೊತ್ತ 8,015.37 8,343.87

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next