ಹೊಸದಿಲ್ಲಿ : ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 2 ಡಾಲರ್ ಏರಿರುವ ಹೊರತಾಗಿಯೂ ಭಾರತೀಯ ತೈಲ ಮಾರಾಟ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳ ಪರಿಷ್ಕರಣೆಯನ್ನು ನಿಲ್ಲಿಸಿವೆ. ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಮುನ್ನ ಸೆಮಿಫೈನಲ್ ಎಂಬಂತೆ ಈಗಿನ್ನು ಎರಡು ವಾರಗಳ ಒಳಗೆ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗಳು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
55 ತಿಂಗಳ ಗರಿಷ್ಠ ಮಟ್ಟವಾಗಿ ಪೆಟ್ರೋಲ್ ಲೀಟರ್ ದರ 74.63 ರೂ. ಮತ್ತು ಡೀಸಿಲ್ ಲೀಟರ್ ದರ 65.93 ರೂ.ಗಳಿಗೆ ಏರಿರುವ ಹೊರತಾಗಿಯೂ ಕೇಂದ್ರ ಹಣಕಾಸು ಸಚಿವಾಲಯ ಇಂಧನ ಮೇಲಿನ ಅಬಕಾರಿ ಸುಂಕ ಕಡಿತ ನಿರಾಕರಿಸಿದೆ. ಮಾತ್ರವಲ್ಲದೆ ಪೆಟ್ರೋಲ್ ಮತ್ತು ಡೀಸಿಲ್ ಲೀಟರ್ ದರದ 1ರೂ. ಏರಿಕೆಯನ್ನು ತತ್ಕಾಲದ ಮಟ್ಟಿಗೆ ಅರಗಿಸಿಕೊಳ್ಳುವಂತೆ ಕೇಂದ್ರ ಸರಕಾರ ತೈಲ ಮಾರಾಟ ಕಂಪೆನಿಗಳನ್ನು ಕೇಳಿಕೊಂಡಿದೆ. ಹಾಗಾಗಿ ಕಳೆದ ಎ.24ರಿಂದ ತೈಲ ಮಾರಾಟ ಕಂಪೆನಿಗಳು ಇಂಧನ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ತೈಲ ಮಾರಾಟ ಕಂಪೆನಿಗಳ ದೈನಂದಿನ ಇಂಧನ ದರ ಪರಿಷ್ಕರಣೆ ಪ್ರಕಟನೆಯು ಕಳೆದ ಎ.24ರಿಂದ ನಿಶ್ಚಲವಾಗಿರುವುದನ್ನು ತೋರಿಸುತ್ತದೆ.
ಎಪ್ರಿಲ್ 24ಕ್ಕೆ ಮುನ್ನ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 78.84 ಡಾಲರ್ ಇದ್ದದ್ದು ಇದೀಗ 80.56 ಡಾಲರ್‌ಗೆ ಏರಿದೆ. ಡಾಲರ್ ಎದುರು ರೂಪಾಯಿ ಈಗ 66.14 ರೂ. ಆಗಿದ್ದು ತೈಲ ಆಮದು ತುಟ್ಟಿಯಾಗಿದೆ. ಆದರೂ ದೇಶದಲ್ಲಿನ ಇಂಧನ ಬೆಲೆಯನ್ನು ಕಡಿಮೆ ಮಾಡುವ ದಿಶೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಬಕಾರಿ ಸುಂಕ ಇಳಿಕೆಗೆ ಸುತರಾಂ ಒಪ್ಪುತ್ತಿಲ್ಲ.
ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು ಆ ಬಳಿಕ ಮತ್ತೆ ಇಂಧನ ಬೆಲೆಯ ದೈನಂದಿನ ಪರಿಷ್ಕರಣೆ ಆರಂಭವಾಗುವುದೆಂದು ಈಗ ತಿಳಿಯಲಾಗಿದೆ.