Advertisement

ಮನಸೇ ಮನಸೇ ಥ್ಯಾಂಕ್ಯು!

06:00 AM Dec 07, 2018 | |

ಪ್ರೇಮ ನಿವೇದನೆಗಾಗಿ ನಾ ಕಾಯುತಿರುವೆ, ಓ ಮನಸೇ, ರಾಜಾಹುಲಿ, ಐ ಲವ್‌ ಯೂ, ಶ್ವೇತಾ ಗೀತಾ ನೀತಾ, ಮನಸೇ ಮನಸೇ ಥ್ಯಾಂಕ್ಯು, ನನಗೂ ಮನಸಾಗಿದೆ, ಯಾರೆ ನೀ ದೇವತೆಯಾ, ನಾನೂ ಈಗ ಪ್ರೀತಿಯಲ್ಲಿ ತೇಲಬೇಕು- ನನಗೂ ಒಬ್ಬ ಗೆಳೆಯ ಬೇಕು.

Advertisement

ಅಬ್ಬಬ್ಟಾ!  ಏನಪ್ಪಾ ಈ ಹುಡುಗಿ ಸಿನಿಮಾ ಗೀತೆ, ಹೆಸರುಗಳನ್ನು ಹೇಳುತ್ತಿದ್ದಾಳಲ್ಲ, ಅಂತ ಯೋಚನೆ ಬರಬಹುದು. ಖಂಡಿತವಾಗಿಯೂ ನಾನು ಇಲ್ಲಿ ಯಾವುದೇ ಸಿನಿಮಾಗಳಾಗಲಿ-ಹೆಸರುಗಳಾಗಲಿ ಇವುಗಳ ಪಟ್ಟಿ ಮಾಡಲು ಹೊರಟಿಲ್ಲ. ಇವೆಲ್ಲಾ ನಾ ಕಂಡಂತೆ ಕಾಲೇಜು ಡೆಸ್ಕ್ಗಳ ಮೇಲೆ ಅಚ್ಚೊತ್ತಾಗಿರುವ ಶಿಲಾಶಾಸನಗಳು.

ಹೌದು! ಒಂದೊಮ್ಮೆ ಕಾಲೇಜಿನ ತರಗತಿ ಕೋಣೆಯೊಳಗೆ ಪ್ರವೇಶಿಸಿ ಅಲ್ಲಿರುವ ಬೆಂಚು-ಡೆಸ್ಕಾಗಳನ್ನು ಸರ್ವೇ ಮಾಡಿದರೆ ಸಾಮಾನ್ಯವಾಗಿ ಸಾವಿರಕ್ಕೂ ಹೆಚ್ಚು ಮೌನಭಾವನೆಗಳಿಗೆ ಈ ಮೂಲಕ ಬರವಣಿಗೆ ರೂಪವನ್ನು ವಿದ್ಯಾರ್ಥಿಗಳು ನೀಡಿರುತ್ತಾರೆ. ವಿದ್ಯಾರ್ಥಿಗಳು ತಮ್ಮೆಲ್ಲಾ ತುಮುಲಗಳನ್ನು ಇಲ್ಲಿ ಅಕ್ಷರ ರೂಪದಲ್ಲಿ ಭಟ್ಟಿ ಇಳಿಸಿರುತ್ತಾರೆ. ಡೆಸ್ಕ್ ಕಡೆ ಒಂದು ಬಾರಿ ಕಣ್ಣಾಡಿಸಿದಾಗ ಅಲ್ಲಿ ನಾನು ಈಗಾಗಲೇ ತಿಳಿಸಿದಂತೆ ಇನ್ನೂ ಅನೇಕ ರೀತಿಯ ಚಿಹ್ನೆಗಳನ್ನೊಳಗೊಂಡಿರುವ ಪೋಣಿಸಿರುವ ಪದಮಾಲೆಗಳೇ ಕಾಣಸಿಗುತ್ತವೆ. ಕೆಲವೊಂದು ಬರಹಗಳು ಮಂದಹಾಸವ ಬೀರಿಸುವುದು ಸಹಜ.

ಇಂದಿನ ದಿನಗಳಿಗೆ ಹೋಲಿಸಿದರೆ ಹಿಂದೆ ಕಾಲೇಜು ಡೆಸ್ಕ್ ಗಳು ಸಂಪೂರ್ಣ ಬರಹಾಲಂಕೃತವಾಗಿದ್ದವು. ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಮೊದಲ ಪ್ರೀತಿ ಮೊಳಕೆಯೊಡೆದಾಗ, ತಮಗೇನಾದರೂ ಬೇಸರವಾದರೆ, ತರಗತಿಯೊಳಗೆ ಅಧ್ಯಾಪಕರ ಪಾಠ ಬೋರ್‌ ಅನ್ನಿಸಿದರೆ ಮನಸ್ಸಲ್ಲಿ ಗುಣುಗುಡುವ ಸಾಲುಗಳನ್ನು ಯಥಾವತ್ತಾಗಿ ತಮ್ಮ ಕೈಲಿರೋ ಪೆನ್ನು-ಪೆನ್ಸಿಲ್‌ನಿಂದ ಡೆಸ್ಕ್ ಮೇಲೆ ನಮೂದಿಸತೊಡಗುತ್ತಾರೆ.

ನಿದ್ರಾದೇವಿ ಆಗಮಿಸುವ ವೇಳೆಗೆ ಅಧ್ಯಾಪಕರ ಬೈಗುಳದಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಮಾಡುವ ಸಾಹಸಗಳಲ್ಲಿ ಇದೂ ಒಂದು. ವಿದ್ಯಾರ್ಥಿಗಳ ಈ ಕಾಯಕ ಡೆಸ್ಕ್ ಅಂದವನ್ನು ಹೆಚ್ಚಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ,  ಆದರೆ, ನೀಲಾಂಬಿಕೆ ಮಾತ್ರ ನಳನಳಿಸುತ್ತಿರುತ್ತಾಳೆ. “ಕ್ಲಾಸ್‌ ಬೋರಾಗುತ್ತೆ’, “ಹೊಸ ಸಿನಿಮಾ ರಿಲೀಸ್‌ ಆಗಿದೆ’, “ನನಗೊಂದು ಹಾಡು ನೆನಪಾಯಿತು’, “ಪ್ರೀತಿ ಕೋರಿಕೆ ಮಾಡಬೇಕೆಂದೆನಿಸಿತು’- ಹೀಗನಿಸಿದಾಗಲೆಲ್ಲ ಕೈ ನಿಂತಲ್ಲಿ ನಿಲ್ಲಲು ಕೇಳುವುದೇ ಇಲ್ಲ. ಕೈಯಲ್ಲಿ ಹೇಗೋ ಲೇಖನಿ ಇರುತ್ತದೆ. ಅದನ್ನು ಪುಸ್ತಕಕ್ಕಿಂತ ಹೆಚ್ಚು ಡೆಸ್ಕ್ ಮೇಲೆ ಪ್ರಯೋಗಿಸಿದರೇನೆ ಚಿಂತನೆಗೆ ರೂಪ ದೊರೆಯುತ್ತದೆ- ಎಂಬುದು ಹಲವು ವಿದ್ಯಾರ್ಥಿಗಳ ಮಾತು.

Advertisement

ವಿದ್ಯಾರ್ಥಿಗಳ ಪ್ರಕಾರ ಇದೊಂದು ಕೆಲಸ. ಇದರಿಂದ ವಿದ್ಯಾರ್ಥಿಗಳು ಆನಂದಿಸಬಹುದು. ಆದರೂ ಕೂಡ ಡೆಸ್ಕ್ ಎನ್ನುವಂಥದ್ದು ಕೇವಲ ಒಬ್ಬರ ಆಸ್ತಿಯಲ್ಲ. ವಿದ್ಯಾರ್ಥಿಗಳಿಗೆ ಓದಲು-ಬರೆಯಲು ಕಷ್ಟವಾಗಬಾರದು ಎಂಬ ಕಾರಣಕ್ಕಾಗಿ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲೂ ಈ ವ್ಯವಸ್ಥೆ ಮಾಡಲಾಗಿದೆ. ಇವುಗಳ ತಯಾರಿಕೆಯ ಹಿಂದೆಯೂ ಹಲವಾರು ಕೈಗಳ ಅವಿರತ ಶ್ರಮವಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಸದುದ್ದೇಶದಿಂದ ಬಳಕೆಗೆ ಬಂದಿರುವ ಈ ವ್ಯವಸ್ಥೆಯನ್ನು ಅನಗತ್ಯ ಕೆಲಸಕ್ಕೆ ಬಳಸಿಕೊಳ್ಳುವುದು ಉತ್ತಮವಲ್ಲ.

ಹಿಂದೆ ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನೆಲದಲ್ಲೇ ಕುಳಿತು ಪಾಠ ಕೇಳಬೇಕಿತ್ತು. ಆದರೆ, ನಮಗೇನೂ ಸಿಕ್ಕಿದ್ದಲ್ಲಿ ಗೀಚುವ ಗೀಳು ಇರಲಿಲ್ಲ. ಅಭ್ಯಾಸವಿದ್ದರೂ ಡೆಸ್ಕ್ಗಳೇ ಇರಲಿಲ್ಲ. ನಮ್ಮ ಬಳಿ ಇದ್ದ ಪುಸ್ತಕದ ಮೇಲೆಯೇ ನಮ್ಮ ಸಾಹಸ ಪ್ರದರ್ಶನ. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಡೆಸ್ಕ್ ಸೌಲಭ್ಯ ಇದೆ. ವಿಪರ್ಯಾಸವೆಂದರೆ ಇದು ಸದ್ಬಳಕೆ ಆಗುತ್ತಿರುವ ಪ್ರಮಾಣದಲ್ಲಿ ಏರುಪೇರು ಉಂಟಾಗಿದೆ. ಪುಟ್ಟಮಕ್ಕಳು ಕೂಡ ಪುಸ್ತಕದ ಮೇಲೆ ಬರೆಯುವ ಬದಲು ಡೆಸ್ಕ್ಗಳ ಮೇಲೆಯೇ ಬರೆಯುವ ರೂಢಿಯನ್ನು ಮಾಡಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಂತೂ ಇದೇ ಅಭ್ಯಾಸವನ್ನು ಪಾಲಿಸುವಂತಿದೆ. 

ಡೆಸ್ಕ್ ನಮ್ಮ ಶೈಕ್ಷಣಿಕ ಜಗತ್ತಿನ ಒಂದು ಭಾಗವೇ ಆಗಿದೆ. ಕಲಿಕೆಯ ವೇಳೆ ಈ ಡೆಸ್ಕ್ ಎಲ್ಲೋ ಒಂದು ಕಡೆ ತನ್ನ ಪಾತ್ರವನ್ನು ನಿಭಾಯಿಸುತ್ತದೆ ಎನ್ನುವ ವಿಚಾರದಲ್ಲಿ ಸಂಶಯವಿಲ್ಲ. ಆದರೂ ಹರೆಯದ ವಿದ್ಯಾರ್ಥಿಗಳು ಡೆಸ್ಕ್ನ್ನು ಆಟದ ಸಾಮಗ್ರಿಯಂತೆ ಬಳಸಿಕೊಳ್ಳುವ ಬದಲು ತಮ್ಮ ಮನದಲ್ಲಿ ಅದೇನೇ ಯೋಚನೆಗಳಿದ್ದರೂ ಕೂಡ ಪುಸ್ತಕದ ಮೇಲೆ ಗೀಚಿಟ್ಟರೆ ಅಕ್ಷರದ ಜೊತೆಗೆ ಜ್ಞಾನಮಟ್ಟ ಕೂಡ ಅಭಿವೃದ್ಧಿ ಹೊಂದುತ್ತದೆಯಲ್ಲವೆ? ಯೋಚಿಸಿ ನೋಡಿ. 

ಡೆಸ್ಕ್ ಮೇಲೆ ವಿನಾ ಕಾರಣ ಏನೇನೋ ಬರೆದಿಡುವುದು, ಅದನ್ನು ಇನ್ಯಾರೋ ಓದುವುದು, ಒಬ್ಬರನ್ನು ಕಂಡು ಇನ್ನೊಬ್ಬರು ಅದೇ ಚಾಳಿಯನ್ನು ಆರಂಭಿಸಿಕೊಳ್ಳುವುದು, ಅಧ್ಯಾಪಕರು ನೋಡಿ ಬೈಯೋದು, ಯಾವುದಾದರೂ ಸ್ವತ್ಛತಾ ತಂಡ ತರಗತಿಗೆ ಪ್ರವೇಶಿಸಿ ಆ ಅಕ್ಷರಮಾಲೆಗಳ ನೋಡಿ ಛೀಮಾರಿ ಹಾಕುವುದು, ಅದನ್ನು ಅಳಿಸಲು ಒಂದಷ್ಟು ಸಮಯವನ್ನು ವ್ಯರ್ಥ ಕಳೆಯುವುದು- ಈ ಎಲ್ಲಾ ಕೆಲಸಗಳು ಮತ್ತೆ ದೊರೆಯುವುದು ನಮ್ಮಂತಹ ವಿದ್ಯಾರ್ಥಿಗಳ ಕೈಗೇ ಅಲ್ಲವೇ? ಇದರ ಬದಲು ನಮ್ಮ ಭಾವನೆಗಳ ವ್ಯಕ್ತತೆಗೆ ಅಮೂಲ್ಯವಾದ ಪುಸ್ತಕವನ್ನು ಬಳಸಿಕೊಂಡು, ಡೆಸ್ಕ್ಗೂ ಸಮಾನ ಗೌರವವನ್ನೊದಗಿಸೋಣವಲ್ಲವೆ? 

ಯೋಚನೆ-ಆಲೋಚನಾ ಲಹರಿಗೆ ತಡೆ ಬೇಡ. ಯೋಚಿಸಿದ್ದಷ್ಟು ಜ್ಞಾನ ಹೆಚ್ಚಾಗುವುದು. ನಮ್ಮ ಬರವಣಿಗೆಗೂ ತಡೆ ಬೇಡ. ಆದರೆ ಈ ಬರವಣಿಗೆ ಕಲೆ ಪುಸ್ತಕದ ಮೇಲೆಯೋ ಅಥವಾ ಪತ್ರಿಕೆಯ ಮೇಲೆಯೋ ಮೂಡಿ ಬಂದರೆ ಚೆನ್ನ. 

ಪ್ರಜ್ಞಾ ಓಡಿಲ್ನಾಳ
ದ್ವಿತೀಯ ಪತ್ರಿಕೋದ್ಯಮ ವಿಭಾಗ, ಎಸ್‌ಡಿಎಮ್‌ ಕಾಲೇಜು, ಉಜಿರೆ 

Advertisement

Udayavani is now on Telegram. Click here to join our channel and stay updated with the latest news.

Next