ಕೃಷಿಕರು, ಕೃಷಿ ಕಾರ್ಮಿಕರು ಬಿಸಿ ತಡೆಯಲಾರದ ಸ್ಥಿತಿ ಒಂದೆಡೆಯಾದರೆ ಬೆಳೆಗಳ ಇಳುವರಿ ಕಡಿಮೆಯಾಗುವ ಬಿಸಿ ಇನ್ನೊಂದೆಡೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಉತ್ತರ ಒಳನಾಡಿನ ಆರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಬಿಸಿ ಗಾಳಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಕಲಬುರಗಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಸಂಭವವಿದೆ.
Advertisement
ಪೂರ್ವ ಕರಾವಳಿಯಲ್ಲಿ ಬಿಸಿಗಾಳಿ ದಾಖಲಾಗಿದ್ದರೂ ಪಶ್ಚಿಮ ಕರಾವಳಿಯಲ್ಲಿ ದಾಖಲಾದ ಉದಾಹರಣೆಯಿಲ್ಲ, ಇಲ್ಲಿ ದಿನದಿಂದ ದಿನಕ್ಕೆ 2-3 ಡಿಗ್ರಿ ತಾಪಮಾನ ಬದಲಾವಣೆಯಾಗುವ ಪ್ರಕ್ರಿಯೆ ಈಚಿನ ವರ್ಷಗಳಲ್ಲಿ ಆರಂಭವಾದುದು ಎನ್ನುತ್ತಾರೆ ಕೃಷಿ ಸಂಶೋಧನ ಕೇಂದ್ರದ ವಿಜ್ಞಾನಿಗಳು.
ಮಳೆ ಸಕಾಲದಲ್ಲಿ ಬೀಳದ ಕಾರಣ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿ ಮಣ್ಣಿನಿಂದ ಹೊರ ಹೊಮ್ಮುವ ಬಿಸಿಗಾಳಿಯೇ ಇಲ್ಲಿ ಕೃಷಿ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ ಮಾಡುತ್ತಿದೆ. ದಿನವೂ ಬದಲಾಗುತ್ತಿರುವ ತಾಪಮಾನ, ವಿಪರೀತ ಸೆಕೆಯ ಪರಿಣಾಮ ಮನುಷ್ಯರ ಮೇಲಷ್ಟೇ ಅಲ್ಲ ಸಸ್ಯಗಳ ಮೇಲೂ ಆಗುತ್ತವೆ. ಮಣ್ಣಿನಿಂದ ಮೇಲೇಳುವ ಬಿಸಿಗಾಳಿಯಿಂದಾಗಿ ಬೆಳೆ ಒಣಗುತ್ತದೆ. ನೀರಿನ ಆವಿ ಪ್ರಮಾಣ ಹೆಚ್ಚಾಗುತ್ತದೆ. ಗಿಡಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸಸ್ಯ ಶಾರೀರಿಕ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಉಸಿರಾಟದಂತಹ ಚಟುವಟಿಕೆಗಳು ಹೆಚ್ಚಾದಾಗ ಸಹಜವಾಗಿ ಫಸಲು ಕಡಿಮೆಯಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
Related Articles
ಮಳೆಮಾಪನ ಪ್ರಕಾರ ವಾರ್ಷಿಕ ಸರಾಸರಿ ಮಳೆ ಸಾಧಾರಣವಾಗಿ ಸ್ವಲ್ಪ ಮಾತ್ರ ಹೆಚ್ಚುಕಡಿಮೆ ಇದೆ. ವಿಪರೀತ ಬದಲಾವಣೆ ಇಲ್ಲ. ಆದರೆ ಬರುವ ಕಾಲಮಾನ ಬೆಳೆಗೆ ಹೊಂದಾಣಿಕೆ ಆಗುತ್ತಿಲ್ಲ. ಪ್ರತೀ ತಿಂಗಳೂ ಒಂದೆರಡಾದರೂ ಮಳೆ, ಮೇಯಿಂದ ಸೆಪ್ಟಂಬರ್ ವರೆಗೆ ಉತ್ತಮ ಮಳೆ, ಅಕ್ಟೋಬರ್ ನವಂಬರ್‌ನಿಂದ ಚಳಿ ಇಂತಹ ಹವಾಮಾನ ಈಗ ಬದಲಾಗಿದೆ.
Advertisement
ಗೇರುಬೀಜ ಮಾತ್ರಕರಾವಳಿಯ ಸಾಂಪ್ರದಾಯಿಕ ಬೆಳೆಗಳಾದ ಅಡಿಕೆ, ತೆಂಗು ಮೊದಲಾದವುಗಳಿಗೆ ಬದಲಾದ ಹವಾಮಾನಕ್ಕೆ ಒಗ್ಗಿಕೊಳ್ಳಲಾಗುತ್ತಿಲ್ಲ. ಮಳೆ ಬರದೇ ಇರುವುದು, ಒಮ್ಮೆಲೇ ಮಳೆ ಬರುವುದು ಎರಡೂ ಸಮಸ್ಯೆಗಳಿಗೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಿಂದ 20-25 ಶೇ. ಇಳುವರಿ ಮೇಲೆ ಹವಾಮಾನದ ಬದಲಾವಣೆ ಪರಿಣಾಮ ಬೀರಿದೆ. ಗೇರು ಮಾತ್ರ ಕರಾವಳಿಯ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ ಬೆಳೆ ಎಂದು ಅಧ್ಯಯನದಿಂದ ಸಾಬೀತಾಗಿದೆ. ಇತರ ಬೆಳೆಗಳ ಮೇಲೆ ಈ ರೀತಿಯ ಹವಾಮಾನ ವೈಪರೀತ್ಯದ ಪರಿಣಾಮ ಏನು ಎನ್ನುವ ಕುರಿತು ಅಧ್ಯಯನಗಳು ನಡೆಯಬೇಕಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. 2017-18: ಬರಗಾಲ, ಬೆಳೆ ನಾಶ
2018-19: ಅತಿವೃಷ್ಟಿ, ಬೆಳೆ ನಾಶ
2019-20: ಸಾಧಾರಣ
2020-21: ಕೊರೊನಾ,
ಬೆಳೆಗೆ ಸಮಸ್ಯೆ ಇಲ್ಲ
2021-22: ಕೊರೊನಾ, ಸಹಜ ಬೆಳೆ
2022-23: ಜೂನ್ ಮಳೆಯೇ ಇಲ್ಲ,
ಜುಲೈ ಒಮ್ಮೆಲೇ 3 ತಿಂಗಳ ಮಳೆ ಪರಿಹಾರ
ವೈವಿಧ್ಯಮಯ ಕೃಷಿ, ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳುವ ಕೃಷಿಯನ್ನು ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಕೃಷಿಕರು ಪಾರಾಗಬಹುದು. ಸರ್ವಋತು ಬೆಳೆ, ಸಾಂಬಾರ ಬೆಳೆಗಳನ್ನು ಬೆಳೆಯಬಹುದು. ಬಿಸಿಲು ತಡೆಗೆ ಗಿಡಗಳಿಗೆ ಹಾಗೂ ಮಣ್ಣಿಗೆ ಆ್ಯಂಟಿ ಟ್ರಾನ್ಸ್‌ಪರೆಂಟ್ ಬಳಸಬಹುದು. ಇದು ಗಿಡಗಳ ಒತ್ತಡ ಕಡಿಮೆ ಮಾಡುತ್ತದೆ. ಕೃಷಿಕರಿಗೆ ಬಿಸಿ
ಹವಾಮಾನ ವೈಪರೀತ್ಯ, ಹೆಚ್ಚಿದ ಬಿಸಿಯಿಂದ ಇಳುವರಿ ಕಡಿಮೆಯಾಗುವ ಬಿಸಿ ಕೃಷಿಕರಿಗೆ ಒಂದೆಡೆಯಾದರೆ ಕೃಷಿಭೂಮಿಯಲ್ಲಿ ಬಿಸಿಲಿಗೆ ಕೆಲಸ ಮಾಡಲಾಗುವುದಿಲ್ಲ ಎನ್ನುವ ತಲೆಬಿಸಿಯೂ ಇದೆ. ಕೃಷಿಕಾರ್ಮಿಕರಿಗೆ ಬೆಳಗ್ಗೆ 10 ಗಂಟೆಯಿಂದಲೇ ಅಪರಾಹ್ನ 3ರವರೆಗೆ ಉರಿಬಿಸಿಲು ಇರುವ ಕಾರಣ ಕೆಲಸ ಮಾಡುವುದು, ಬೆವರು ಹರಿಸುವುದು, ಮೈಯಲ್ಲಿ ಬಿಸಿಲಿನ ಝಳದ ಅಲರ್ಜಿ
ಉಂಟಾಗುವುದು ಸಾಮಾನ್ಯವಾಗಿದೆ. ಇದರಿಂದ ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಕೆಲಸದ ಅವಧಿಯಲ್ಲಿ ಬದಲಾವಣೆ ಮಾಡಿದರೆ ಅನುಕೂಲ ಎನ್ನುತ್ತಾರೆ ಕೃಷಿ ಕೂಲಿ ಕಾರ್ಮಿಕ ತಿಮ್ಮಪ್ಪ ಪೂಜಾರಿ ಬಸ್ರೂರು. ಕಾರ್ಮಿಕ ವರ್ಗ ತತ್ತರ
ರಸ್ತೆ, ಚರಂಡಿ, ಕಟ್ಟಡ ನಿರ್ಮಾಣ ವಲಯದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಬಿಸಿಲಿನಿಂದ ತತ್ತರಿಸುತ್ತಿದ್ದಾರೆ. ಕೆಲವು ಸಮಯವಷ್ಟೇ ಅವರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಈ ಮಧ್ಯೆ ಸುಡು ಬಿಸಿಲಿನ್ನೇ ಲೆಕ್ಕಿಸದೇ ನಿರ್ಮಾಣ ವಲಯದಲ್ಲಿ ಕಾರ್ಮಿಕರ ಕೆಲಸ ಸಾಗುತ್ತಿದೆ. ಅದೇ ರೀತಿ ಚರಂಡಿ ಸ್ವತ್ಛಗೊಳಿಸುವ ಪೌರಕಾರ್ಮಿಕರು, ರಸ್ತೆ ನಿರ್ಮಾಣದ ಕಾರ್ಮಿಕರು ಬೆವರಿನ ಸ್ನಾನದಲ್ಲಿಯೇ ಕಾಯಕ ಮುಂದುವರಿಸಿದ್ದಾರೆ. ಕಾರ್ಮಿಕರು ಬಿಸಿಲಿನ ತಾಪ ತಾಳಲಾರದೆ ಸಮೀಪದ ನೆರಳಿನ ಆಶ್ರಯ ಪಡೆಯುವಂತಾಗಿದೆ. ಬಾಯಾರಿಕೆ ಹೆಚ್ಚಳ
ಬಿಸಿಲಿನ ತಾಪಕ್ಕೆ ಬಾಯಾರಿಕೆ ಹೆಚ್ಚಾಗುತ್ತಿದ್ದು, ನೀರು ಕುಡಿಯುವ ಜತೆಗೆ ಎಳನೀರು, ವಿವಿಧ ತಂಪು ಪಾನಿಯಗಳ ಮೊರೆ ಹೋಗುತ್ತಿದ್ದಾರೆ ಜನರು. ಸ್ವಲ್ಪ ದೂರ ಬಿಸಿಲಿನಲ್ಲಿ ಸಾಗಿದರೆ ನೀರು ಕುಡಿಯಲೇಬೇಕು ಎಂಬಂತಾಗಿದೆ. ದೇಹದ ಉಷ್ಣಾಂಶ ಹೆಚ್ಚಾಗಿ ಸೆಕೆ, ಬೆವರಿನಿಂದ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಕಲ್ಲಂಗಡಿ, ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಅಂಗಡಿಗಳಲ್ಲಿ ನೀರಿನ ಬಾಟಲ್ ಮೊದಲಿಗಿಂತಲೂ ಹೆಚ್ಚು ಮಾರಾಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು. ಹೆಚ್ಚು ನೀರು ಕುಡಿಯಿರಿ
ಬೇಸಗೆ ತಾಪಮಾನ ಹೆಚ್ಚಿರುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆ ಇರುತ್ತದೆ. ದಿನಕ್ಕೆ ಕನಿಷ್ಠ 3-4 ಲೀ. ನೀರು ಸೇವನೆ
ಉತ್ತಮ. ಈಗಾಗಲೇ ಮೂತ್ರಪಿಂಡ, ನಿರ್ಜಲೀಕರಣ ಸಮಸ್ಯೆಗಳಿಂದ ಜನರು ಚಿಕಿತ್ಸೆಗೆ ಬರುತ್ತಿದ್ದಾರೆ. ಬೇಸಗೆ ಬಿಸಿಲಲ್ಲಿ
ಹೊರಗೆ ತಿರುಗಾಡುವುದು ಸಾಧ್ಯವಾದಷ್ಟು ಕಡಿಮೆ ಮಾಡುವುದು ಉತ್ತಮ. ಹೊರಗಡೆ ಕೆಲಸ ಮಾಡುವ ಕಾರ್ಮಿಕ ವರ್ಗ
ಸುರಕ್ಷತೆಯಿಂದ ಕೆಲಸ ಮಾಡಬೇಕು. ವಿಶ್ರಾಂತಿ ಜತೆಗೆ ಹೆಚ್ಚು ನೀರು ಸೇವಿಸಬೇಕು. ನೀರಿನಾಂಶ ಹೆಚ್ಚಿರುವ ಊಟ, ಉಪಾಹಾರಕ್ಕೆ ಒತ್ತು ನೀಡಬೇಕು. ಹೊರಗಡೆ ನಡೆದಾಡುವಾಗ ಕೊಡೆ ಅಥವಾ ಟೊಪ್ಪಿ ಬಳಕೆ ಮಾಡಬೇಕು. ಬರಿಗಾಲಿನಲ್ಲಿ ನಡೆಯಕೂಡದು ಎಂದು ತಜ್ಞ ವೈದ್ಯ ಡಾ| ಜಿ. ಎಸ್. ಚಂದ್ರಶೇಖರ್ ಸಲಹೆ ನೀಡಿದ್ದಾರೆ. ಶೀತಲಗುಣ ಆಹಾರ ಸೇವಿಸಿ
ಶೀತಲಗುಣವಿರುವ ಆಹಾರ ಹೆಚ್ಚು ಸೇವಿಸಬೇಕು. ರಾಗಿ, ಎಳ್ಳು, ಮೆಂತೆ, ಹಣ್ಣಿನಲ್ಲಿ ಜಂಬು ನೇರಳೆ, ಕಲ್ಲಂಗಡಿ, ಬಾಳೆಹಣ್ಣು, ದ್ರಾಕ್ಷಿ, ಪಪ್ಪಾಯ, ತರಕಾರಿಯಲ್ಲಿ ಕುಂಬಳಕಾಯಿ, ಮುಳ್ಳುಸೌತೆ ಹೆಚ್ಚು ಉಪಯುಕ್ತ. ತಲೆ, ಹೊಕ್ಕುಳು, ಪಾದಕ್ಕೆ ಎಳ್ಳೆಣ್ಣೆ ಹಚ್ಚಿ ಕೆಲವು ನಿಮಿಷಗಳ ಅನಂತರ ಸ್ನಾನ ಮಾಡಬೇಕು. ಹೆಚ್ಚು ವ್ಯಾಯಾಮ ಮಾಡಬಾರದು, ಪ್ರಾಣಾಯಾಮ ಮಾಡಬೇಕು. ಉಪ್ಪು,
ಹುಳಿ, ಖಾರ, ಮಸಾಲೆ ಹೆಚ್ಚಿರುವ ಆಹಾರದಿಂದ ದೂರ ಇರಬೇಕು. ಎಣ್ಣೆಯಲ್ಲಿ ಕರಿದ ತಿಂಡಿ, ಆಹಾರ ಸೂಕ್ತವಲ್ಲ. ಚಂದನ ಅಥವಾ ಶ್ರೀಗಂಧ ಲೇಪ, ಅಕ್ಕಿ ತೊಳೆದ ನೀರು ದೇಹಕ್ಕೆ ಹಾಕಿ ಅನಂತರ ಸ್ನಾನ ಮಾಡಿದಲ್ಲಿ ಬೆವರುಸಾಲೆ ಹತೋಟಿಗೆ ಬರುತ್ತದೆ ಎಂದು ಆಯುರ್ವೇದ ವೈದ್ಯ ಡಾ| ಜಯರಾಮ್ ಭಟ್ ಸಲಹೆ ನೀಡಿದ್ದಾರೆ. ನೀರಿನ ಲೆಕ್ಕಾಚಾರ ಇರಲಿ
ರೈತರು ತಮ್ಮಲ್ಲಿರುವ ನೀರು ಹಾಗೂ ತಮ್ಮ ಬೆಳೆಗೆ ಬೇಕಾಗುವ ನೀರಿನ ಕುರಿತು ಲೆಕ್ಕಾಚಾರ ಇಟ್ಟುಕೊಂಡು ಅದನ್ನು
ಹೊಂದಾಣಿಕೆ ಮಾಡಬೇಕು. ಕರಾವಳಿಯ ವಾತಾವರಣಕ್ಕೆ ಆಗುವ ಸರ್ವಋತು ಬೆಳೆ, ಸಾಂಬಾರ ಬೆಳೆ, ವೈವಿಧ್ಯಮಯ ಕೃಷಿ
ಕುರಿತು ಗಮನ ಹರಿಸಬೇಕು.
ನಿಧೀಶ್ ಕೆ.ಜೆ., ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ, ಕುಂದಾಪುರ ತಾತ್ಕಾಲಿಕ ಶಮನ
ಆ್ಯಂಟಿ ಟ್ರಾನ್ಸ್‌ಪರೆಂಟ್ಸ್ ಬಳಕೆ ಮಾಡುವ ಮೂಲಕ ಸಸ್ಯ ಶಾರೀರಿಕ ಬೆಳವಣಿಗೆಗೆ ತೊಂದರೆಯಾಗದಂತೆ ಗಿಡಗಳ ಒತ್ತಡ ಕಡಿಮೆ
ಮಾಡಿದರೆ ತಾತ್ಕಾಲಿಕವಾಗಿ ಬೆಳೆ ನಾಶ ಕಡಿಮೆ ಮಾಡಬಹುದು. ಡಾ| ನವೀನ್, ವಿಜ್ಞಾನಿ, ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರ, ಬ್ರಹ್ಮಾವರ