Advertisement
ಮೈಸೂರಿನ ರಾಜೀವ್‌ನಗರ 2ನೇ ಹಂತದ ದೇವನೂರು ಟ್ಯಾಂಕ್ ಬಳಿ ಅಕ್ರಮವಾಗಿ ನಿರ್ಮಿಸಿದ್ದ ಶಾದಿ ಮಹಲ್ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳು ಉದಯಗಿರಿ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಈ ಕಾರ್ಯಾಚರಣೆಗಾಗಿ 10 ಜೆಸಿಬಿ, 4 ಗ್ಯಾಸ್ ಕಟರ್‌ಗಳು, ಟಿಪ್ಪರ್‌ಗಳು, 30 ಗನ್‌ಮ್ಯಾನ್‌ಗಳ ತಂಡದ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Related Articles
Advertisement
ಈ ವೇಳೆ ಕಟ್ಟಡದ ಮೇಲೇರಿದ ಮುಶೀರ್ ಆಹಮದ್ ಶಾದಿ ಮಹಲ್ ಕೆಡವಲು ಮುಂದಾದರೆ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಇದರಿಂದ ಆತಂಕಕ್ಕೊಳಗಾದ ಅಧಿಕಾರಿಗಳು ಕೆಳಗಿಳಿಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಅಲ್ಲದೆ ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಮನಗಂಡ ಅಧಿಕಾರಿಗಳು ಕಟ್ಟಡ ತೆರವು ಮಾಡುವ ಕಾರ್ಯವನ್ನು ಕೈಬಿಟ್ಟು ಸ್ಥಳದಿಂದ ತೆರಳಿದರು.
ಸ್ಥಳೀಯರ ಆಕ್ರೋಶ: ಅಧಿಕಾರಿಗಳ ಕಾರ್ಯಾಚರಣೆ ವಿಷಯ ತಿಳಿದು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಅಲ್ಲದೇ ಕಟ್ಟಡ ತೆರವುಗೊಳಿಸುವ ವೇಳೆ ಮಹಾನಗರ ಪಾಲಿಕೆ ಹಾಗೂ ಮುಡಾ ಆಯುಕ್ತರು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಯಾವುದೇ ಅನಾಹುತ ಸಂಭವಿಸಬಹುದಾದ ಈ ರೀತಿಯ ಸನ್ನಿವೇಶಗಳಲ್ಲಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಬೇಕು. ಆದರೆ ಯಾರೊಬ್ಬರು ಸ್ಥಳಕ್ಕೆ ಆಗಮಿಸಿಲ್ಲ ಎಂದು ಕಿಡಿಕಾರಿದರು.
ಈ ವೇಳೆ ಕಟ್ಟಡದ ಮಾಲಿಕರು ಕಟ್ಟಡ ತೆರವುಗೊಳಿಸದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತರಲು ನಿರ್ಧರಿಸಿದ್ದಾರೆ. ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮುಡಾ ಕಾರ್ಯದರ್ಶಿ ಎಂ.ಕೆ.ಸವಿತಾ, ಕಾರ್ಯಕಾರಿ ಅಭಿಯಂತರರಾದ ಪ್ರಭಾಕರ್, ಸುವರ್ಣ, ವಿಶೇಷ ಭೂ ಸ್ವಾಧೀನ ಅಧಿಕಾರಿ ಚಂದ್ರಮ್ಮ, ಮುಡಾ ಸಹಾಯಕ ಕಾರ್ಯಕಾರಿ ಅಭಿಯಂತರ ಮೋಹನ್ ಮತ್ತಿತರರು ಹಾಜರಿದ್ದರು.