ಹಾವೇರಿ: ಕೋವಿಡ್ ಪಾಸಿಟಿವ್ ಪ್ರಕರಣದ ಹಿನ್ನೆಲೆಯಲ್ಲಿ ಸೀಲ್‌ಡೌನ್ ಮಾಡಲಾದ ಶಿಗ್ಗಾವಿ ತಾಲೂಕಿನ ಅಂದಲಗಿ ಗ್ರಾಮದ ಬಫರ್ ಜೋನ್ ಹಾಗೂ ಕಂಟೇನ್ಮೆಂಟ್ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿತು.
ಅಂದಲಗಿ ಮತ್ತು ಮುದ್ದಿನಕೊಪ್ಪ ಗ್ರಾಮಗಳಲ್ಲಿ ಎರಡು ಚೆಕ್‌ಪೋಸ್ಟ್ ನಿರ್ಮಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೋಂಕು ಕಂಡುಬಂದ ವ್ಯಕ್ತಿಯ ಮನೆಯ ಸುತ್ತಮುತ್ತಲೂ ಪ್ರದೇಶ ಹಾಗೂ ಗ್ರಾಮದ ಸುತ್ತಮುತ್ತ ನಿತ್ಯ ಸ್ವತ್ಛತಾ ಕಾರ್ಯ ನಡೆಸಲಾಗುತ್ತದೆ. ಗಟಾರ ಸ್ವತ್ಛತೆ, ಮೆಲಥಾನ್ ಸಿಂಪರಣೆ, ಐಪೊರೈಡ್ ಸಿಂಪರಣೆ ಕೈಗೊಳ್ಳಲಾಗುತ್ತಿದೆ.
ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿ 161 ಕುಟುಂಬಗಳು ವಾಸವಿವೆ. ಈ ಕುಟುಂಬಗಳ 941 ಜನರ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದೆ. ಇದರಲ್ಲಿ ಐದು ವರ್ಷದೊಳಗಿನ 130 ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರು 75 ಜನ, ಬಾಣಂತಿಯರು ಐದು ಜನ, ಗರ್ಭಿಣಿಯರು ಒಂಭತ್ತು ಜನ ಹಾಗೂ 14 ಜನ ಸಕ್ಕರೆ ಕಾಯಿಲೆ, 19 ಜನ ಬಿಪಿ ಕಾಯಿಲೆ ಹೊಂದಿದ್ದಾರೆ. ಈ ಪೈಕಿ 68 ಜನರ ಗಂಟಲು ದ್ರವ್ಯ ಮಾದರಿ ಪರೀಕ್ಷೆ ಕೈಗೊಳ್ಳಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕದ 17 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ದ್ವಿತೀಯ ಸಂಪರ್ಕದ 31 ಜನರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಿ ವೈದ್ಯಾಧಿಕಾರಿಗಳ ನಿರಂತರ ನಿಗಾ ವಹಿಸಲಾಗಿದೆ.
ಅಂದಲಗಿ ಗ್ರಾಮಸ್ಥರಿಗೆ ಉಚಿತ ಪಡಿತರ ನೀಡಲಾಗಿದೆ. ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಇಲ್ಲಿನ 161 ಕುಟುಂಬಗಳಿಗೆ ಉಚಿತ ಆಹಾರ ಕಿಟ್ ಗಳನ್ನು ಪೂರೈಸಿದ್ದಾರೆ. ಗ್ರಾಮದಲ್ಲಿ 24 ತಾಸು ಕಾರ್ಯನಿರ್ವಹಿಸುವಂತೆ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಇಲ್ಲಿಯ ಜನರು ಸಹಾಯವಾಣಿ ಸಂಪರ್ಕಿಸಿದರೆ ವೈದ್ಯಕೀಯ ನೆರವು ಸೇರಿದಂತೆ ಯಾವುದೇ ತರದ ನೆರವು ಒದಗಿಸಲು ಅಧಿಕಾರಿಗಳು ಸಿಬ್ಬಂದಿ ನಿಯೋಜಿಸಲಾಗಿದೆ. ಈ ಎಲ್ಲ ವ್ಯವಸ್ಥೆಯನ್ನು ಕಂಟೇನ್ಮೆಂಟ್ ಏರಿಯಾ ಘಟನಾ ಕಮಾಂಡರ್ ಆಗಿ ನಿಯೋಜಿತಗೊಂಡಿರುವ ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ನೇತೃತ್ವದ ವಿವಿಧ ಇಲಾಖಾ ಅಧಿಕಾರಿಗಳ ತಂಡ ಪರಿಶೀಲಿಸಿತು.