ಬೆಂಗಳೂರು: 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಚಂದ್ರಶೇಖರ ಕಂಬಾರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಭಾನುವಾರ ಅಧಿಕೃತವಾಗಿ ಆಹ್ವಾನ ನೀಡಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ನೇತೃತ್ವದ ನಿಯೋಗ ಬನಶಂಕರಿಯ 3ನೇ ಹಂತದಲ್ಲಿರುವ ಕಂಬಾರರ ನಿವಾಸಕ್ಕೆ ಭೇಟಿ ನೀಡಿ, ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಆಹ್ವಾನಿಸಿತು.
ಈ ಸಂದರ್ಭ ಮಾತನಾಡಿದ ಚಂದ್ರಶೇಖರ ಕಂಬಾರ, ಧಾರವಾಡದಲ್ಲಿ ನಡೆಯಲಿರುವ 84ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಆಹ್ವಾನವನ್ನು ಸಂತೋಷದಿಂದ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದರು.
ರಾಜ್ಯಭಾಷೆಗಳ ಬಗ್ಗೆ ಕೇಂದ್ರ ಸರ್ಕಾರದ ಧೋರಣೆ ಬದಲಾಗಬೇಕು.ಇಲ್ಲದಿದ್ದರೆ ಈ ದೇಶದಲ್ಲಿರುವ ಯಾವ ಭಾಷೆಗಳಿಗೂ ಉಳಿಗಾಲಿಲ್ಲ . ಆಂಗ್ಲ ಭಾಷೆಯಿಂದಾಗಿ ಸ್ಥಳೀಯ ಭಾಷೆಗಳು ಅಪಾಯಕ್ಕೆ ಸಿಲುಕಿದ್ದು, ಇದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. ಈ ಹಿಂದೆ ನಾನು ಬಗ್ಗೆ ಪತ್ರ ಚಳವಳಿಯನ್ನು ಆರಂಭಿಸಿ ರಾಷ್ಟ್ರಪತಿಗಳಿಗೆ ಇದನ್ನು ಕಳುಹಿಸಿಕೊಟ್ಟಿದೆ. ಹಿಂದಿ ಭಾಷೆಯ ಹಲವು ಮಂದಿ ಇಂಗ್ಲಿಷ್ ಹೇರಿಕೆ ವಿರೋಧಿ ವ್ಯಕ್ತಪಡಿಸಿ ಈ ಪತ್ರ ಚಳುವಳಿಯಲ್ಲಿ ಭಾಗಿಯಾಗಿದ್ದರು ಎಂದು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು