Advertisement

ಹೇಮಾದ್ರಂಬ ಜಾತ್ರೆಗೆ ಅಧಿಕೃತ ಚಾಲನೆ

12:52 PM Jan 29, 2018 | Team Udayavani |

ಬನ್ನೂರು: ಗಂಗ ಅರಸರ ಎರಡನೇ ರಾಜಧಾನಿಯೆಂದೇ ಹೆಸರು ವಾಸಿಯಾಗಿದ್ದ ಬನ್ನೂರಿನ ಹೇಮಾದ್ರಂಬ ದೇವತೆಯ ಜಾತ್ರೆ ಪ್ರಸಿದ್ದಿ ಪಡೆದಿದೆ. ಭಾನುವಾರ ಈ ದೇಗುಲದ ಮುಂಭಾಗ ಹಸಿರು ಚಪ್ಪರವನ್ನು ಹಾಕುವ ಮೂಲಕ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. 

Advertisement

ಹನ್ನೊಂದು ದಿನಗಳ ಜಾತ್ರಾಮಹೋತ್ಸವದಲ್ಲಿ ಪ್ರತಿದಿನ ಒಂದಿಲ್ಲೊಂದು ಪೂಜಾಕಾರ್ಯಗಳು ಜರುಗಲಿದ್ದು, ಆದಿಜಾಂಬವ ಜನಾಂಗದ ಎಲ್ಲ ಯಜಮಾನರು, ಸುಭಾಷ್‌ನಗರದ ಮುಖಂಡರು, ಮಾಕನಹಳ್ಳಿಯ ಜನಾಂಗದ ಮುಖಂಡರು, ಯುವಕರ ಪಡೆಗಳೊಂದಿಗೆ ದೇವಾಲಯದ ಮುಂಭಾಗದಲ್ಲಿ ಸೇರಿ ಹಸಿರು ಚಪ್ಪರ ಹಾಕಿ ಜಾತ್ರೆಗೆ ಶುಭವನ್ನು ಆಹ್ವಾನಿಸುವುದು ಪ್ರತೀತಿ.

ಚಿನ್ನದ ಮೂರ್ತಿ: ಹಿಂದಿನಿಂದಲೂ ಬಂದ ಪ್ರತೀತಿಯಂತೆ ಜಾತ್ರಾಮಹೋತ್ಸವ ಹತ್ತಿರವಾಗುತ್ತಿದ್ದಂತೆ ಊರಿನ ಮುಖಂಡರು ಹಾಗೂ ಹೇಮಾದ್ರಂಬ ಸಮಿತಿಯ ಮುಖಂಡರೆಲ್ಲರೂ ಒಟ್ಟಾಗಿ ಮುಜರಾಯಿ ಇಲಾಖೆಯಿಂದ ದೇವಿಯನ್ನು ತರುವ ಪ್ರತೀತಿ ಇದೆ.

ಹೇಮಾದ್ರಂಭ ದೇವಿಯ ಚಿನ್ನದ ಮೂರ್ತಿಯು ಮುಜರಾಯಿ ಇಲಾಖೆಯ ವಶದಲ್ಲಿದ್ದು, ಅದನ್ನು ಜಾತ್ರಾ ಮಹೋತ್ಸವದ ವೇಳೆಯಲ್ಲಿ ಮಾತ್ರವೇ ತಂದು ಪೂಜಿಸುವ ಪದ್ದತಿ ರೂಢಿಯಲ್ಲಿದೆ. ದೇವಿಯನ್ನು ಅರ್ಚಕರ ಮನೆಯಲ್ಲಿ ಇರಿಸಿ, ಜಾತ್ರಾ ಮಹೋತ್ಸವದ ದಿನ ದೇವಾಲಯಕ್ಕೆ ತೆಗೆದುಕೊಂಡು ಹೋಗುವುದು ಇಲ್ಲಿನ ಪದ್ಧತಿ.

ಅಂಕುರಾರ್ಪಣೆ: ಅಂತೆಯೇ ಭಾನುವಾರ ದೇವಿಯು ದೇವಳ ಪ್ರವೇಶ ಮಾಡುವ ಹಿನ್ನೆಲೆಯಲ್ಲಿ ಮುಂಜಾನೆಯೇ ಹಸಿರು ಚಪ್ಪರವನ್ನು ಹಾಕಲಾಯಿತು. ಸಂಜೆ ದೇವಾಲಯದ ಅರ್ಚಕರು ದೇವಾಲಯಕ್ಕೆ ದೇವಿಯನ್ನು ತಂದರು. ಈ ಮೂಲಕ ದೇವಿಯು ದೇವಾಲಯವನ್ನು ಪ್ರವೇಶಿಸಿದಂತಾಗಿ, ಸಂಜೆಯ ವೇಳೆ ಅಂಕುರಾರ್ಪಣೆಯ ಕಾರ್ಯವೂ ಜರುಗಿತು.

Advertisement

ಮಾಂಸಾಹಾರ ನಿಷೇಧ: ಜಾತ್ರೆಯ ಹಿನ್ನೆಲೆಯಲ್ಲಿ ಇಡೀ ಊರಿನಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು, ಮಾಂಸ ಮಾರಾಟ ಮಾಡುತ್ತಿದ್ದ ಮಾರುಕಟ್ಟೆಯ ಮಾಂಸದ ಅಂಗಡಿಗಳು, ಕೋಳಿ ಅಂಗಡಿಗಳು ಮುಚ್ಚಲಾಗಿದೆ.

ಎಳನೀರಿಗೆ ಬೇಡಿಕೆ: ಹಿಂದೆ ಹೇಮಾದ್ರಂಬ ದೇವಿ ಗ್ರಾಮಕ್ಕೆ ಬರಲು ಪ್ರತಿ ಹೆಜ್ಜೆ ಹೆಜ್ಜೆಗೆ ಎಳನೀರನ್ನು ನೀಡಲಾಗಿತ್ತು ಎನ್ನುವ ಪ್ರತೀತಿ ಇದ್ದು, ಅಂತೆಯೇ ದೇವಿಯ ಜಾತ್ರಾಮಹೋತ್ಸವದಲ್ಲಿ ದೇವಿಯ ಪೂಜೆ ಎಳನೀರನ್ನು ಬಳಸುವುದು ರೂಢಿಯಲ್ಲಿದ್ದು, ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next