ಕೆ.ಆರ್.ನಗರ: ಅಧಿಕಾರಿಗಳು ಪ್ರಚಾರಕ್ಕೋಸ್ಕರ ಕರ್ತವ್ಯ ನಿರ್ವಹಿಸದೆ, ಸಾರ್ವಜನಿಕರ ಹಿತಕ್ಕಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕಿ ಸ್ನೇಹಾ ಹೇಳಿದರು.
ಪಟ್ಟಣದ ವಾಲ್ಮೀಕಿ ನಾಯಕರ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಸಾರ್ವಜನಿಕ ಸಂಪರ್ಕ ಸಭೆ ಮತ್ತು ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ತಿಂಗಳೊಂದರಲ್ಲಿ 107ರಷ್ಟು ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಅತೀ ವೇಗದ ಸಂಚಾರ ಮತ್ತು ಸಂಚಾರಿ ನಿಯಮ ಉಲ್ಲಂಘನೆಯೇ ಕಾರಣ ಎಂದರು.
ರಸ್ತೆ ನಿಮಯ ಪಾಲಿಸಿ: ವಾಹನ ಚಲಾಯಿಸುವವರು ಕಡ್ಡಾಯವಾಗಿ ಇನ್ಸೂರೆನ್ಸ್ ಮತ್ತು ದಾಖಲೆ ಹೊಂದಿರಬೇಕು, ಹೆಲ್ಮೆಟ್ ಧರಿಸಿರಬೇಕು. ಸಂಚಾರಿ ನಿಯಮ ಪಾಲಿಸಬೇಕು. ಇಲ್ಲದಿದ್ದಲ್ಲಿ ಅಂತಹ ವಾಹನವನ್ನು ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸಲಾಗುವುದು. ಇದಕ್ಕೆ ಸಾರ್ವಜನಿಕರು ಅವಕಾಶ ನೀಡದೆ ಕಾನೂನು ಸುವ್ಯವಸ್ಥೆ ಪಾಲಿಸಬೇಕೆಂದು ಕಿವಿಮಾತು ಹೇಳಿದರು.
ಸ್ಥಳದಲ್ಲಿದ್ದ ಪುರಸಭೆಯ ಮುಖ್ಯಾಧಿಕಾರಿ ಮತ್ತು ಜಿಪಂ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ರಸ್ತೆಯ ದುರಸ್ತಿ ಹಾಗೂ ರಸ್ತೆಗಳ ಮಧ್ಯದಲ್ಲಿ ಮ್ಯಾನ್ ಹೋಲ್‌ಗಳನ್ನು ಸರಿಪಡಿಸದೆ ಇರುವುದರಿಂದ ಅಪಘಾತಗಳು ಸಂಭವಿಸಲು ಪ್ರಮುಖ ಕಾರಣವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ವೃತ್ತ ನಿರೀಕ್ಷಕ ಕೆ.ಕೆ.ರಘು, ಸಾಲಿಗ್ರಾಮ ಠಾಣೆಯ ಪಿಎಸ್‌ಐ ಮಹೇಶ್, ಕೆಎಸ್‌ಆರ್‌ಟಿಸಿ ಅಧಿಕಾರಿ ಪಾಪನಾಯಕ್, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಮೋಹನ್ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.