ಕುಂಬಳೆ: ಭಾರತೀಯರು ನೆಲ, ಜಲ, ಸಸ್ಯ, ಪ್ರಾಣಿಗಳಲ್ಲಿ ದೈವತ್ವ ವನ್ನು ಕಾಣುವವರು. ಇದು ನಮ್ಮ ಜೀವನ ಸಂಸ್ಕೃತಿಯ ಒಂದು ಅಂಗವಾಗಿದೆ. ಇದೇ ರೀತಿ ಪ್ರಾದೇಶಿಕ ಸಂಸ್ಕೃತಿಯನ್ನು ಉಳಿಸಿ ಆಚರಿಸಿಕೊಂಡು ಬರಬೇಕು. ಕುಳಾರಿನ ನೆಲದಲ್ಲಿ ಇಂತಹ ಧರ್ಮ ಕಾರ್ಯ ನಡೆಯುತ್ತಿದೆ. ಈ ಕಾರ್ಯದಲ್ಲಿ ಪಾಲ್ಗೊಂಡವರೆಲ್ಲ ಧನ್ಯರೆಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಪೂಜ್ಯರು ಬಾಯಾರಿನ ಕುಳಾÂರಿನಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಶ್ರೀ ನಾಗದೇವರು, ರಕ್ತೇಶ್ವರಿ, ಗುಳಿಗ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನವಿತ್ತರು.
ಡಾ| ಮುರಳೀಧರ ಶೆಟ್ಟಿ, ಕುರಿಯ ಗುತ್ತು ಇವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಭೆಯಲ್ಲಿ ವೈದಿಕ ವಿದ್ವಾಂಸ ಶ್ರೀ ವೆಂಕಟೇಶ್ವರ ಭಟ್ ಹಿರಣ್ಯ ಇವರು ಧಾರ್ಮಿಕ ಭಾಷಣದಲ್ಲಿ ಆಂಗ್ಲ ಭಾಷೆಯ ರಿಲಿಜನ್ ಎಂಬ ಶಬ್ದಾರ್ಥ ಧರ್ಮ ಎಂಬುದು ಸೂಕ್ತವಲ್ಲ, ಇದು ಸಮಾನ ಚಿಂತಕರ ಒಕ್ಕೂಟ ಎಂಬ ಅರ್ಥವನ್ನಷ್ಟೇ ಹೊಂದಿದೆ. ಧರ್ಮ ಎಂಬುದು ಇದಕ್ಕೂ ಮೀರಿ ನಮ್ಮ ನಡೆ, ನುಡಿ, ಸಂಸ್ಕೃತಿ, ಆಚರಣೆಗಳ ಅಸೀಮ ಅರ್ಥ ಹೊಂದಿದೆ ಎಂದರು.
ಶ್ರೀ ಕ್ಷೇತ್ರದ ತಂತ್ರಿವರ್ಯ ಅನಲತ್ತಾಯ ಶ್ರೀನಿವಾಸ ತಂತ್ರಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಸದಾನಂದ ಆಳ್ವ ಪೆರುವೊಡಿ, ನ್ಯಾಯವಾದಿ ರಾಮಕೃಷ್ಣ ಭಟ್ ಪೆರುವೊಡಿ, ಪೈವಳಿಕೆ ಗ್ರಾಮ ಪಂ. ಸದಸ್ಯ ಶ್ರೀ ಹರೀಶ್ ಬೊಟ್ಟಾರಿ ಮತ್ತು ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ,ಮಂಗಲ್ಪಾಡಿ ಅಂಬಾರು ಸದಾಶಿವ ದೇವಸ್ಥಾನದ ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳ, ವಸಂತ ಪಂಡಿತ್ ಗುಂಪೆ, ಲಕ್ಷ್ಮಣ ದೇವಾಡಿಗ ಉಡುಪಿ ಉಪಸ್ಥಿತರಿದ್ದರು.
ಬೆಳಗ್ಗೆ ಶ್ರೀ ನಾಗ ದೇವರು, ರಕ್ತೇಶ್ವರಿ ಮತ್ತು ಗುಳಿಗ ದೈವಗಳ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ನೆರವೇರಿತು. ಬಳಿಕ ಚಂಡಿಕಾಹೋಮ ನಡೆಯಿತು.ಸಂಜೆ ರಕ್ತೇಶ್ವರಿ, ಗುಳಿಗ ದೈವಗಳ ನೇಮೋತ್ಸವ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವೈಷ್ಣವಿ ನಾಟ್ಯನಿಲಯ ಪುತ್ತೂರು ಇದರ ಬಾಯಾರು ಶಾಖಾ ವಿದ್ಯಾರ್ಥಿಗಳಿಂದ “ನಾಟ್ಯ ನೀರಾಜನಂ’ ಭರತನಾಟ್ಯ, “ಮಹಿಷ ಮರ್ದಿನಿ-ಶಾಂಭವಿ ವಿಲಾಸ’ ಯಕ್ಷಗಾನ ಜರಗಿತು.