Advertisement

Odisha train tragedy: ನಿದ್ದೆ ಇಲ್ಲದ ಆ ಮೂರು ರಾತ್ರಿಗಳು!

09:47 PM Jun 05, 2023 | Team Udayavani |

ಬಾಲಸೋರ್‌ ರೈಲು ದುರಂತ ನಡೆದಾಗಿನಿಂದ ರಕ್ಷಣಾ ಕಾರ್ಯಾಚರಣೆ ಮತ್ತು ಅಪಘಾತದ ತನಿಖೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದ ರಕ್ಷಣಾ ಸಚಿವ ಅಶ್ವಿ‌ನಿ ವೈಷ್ಣವ್‌ ಘಟನೆ ನಡೆದಾಗಿನಿಂದ ನಿದ್ದೆಯನ್ನು ಮಾಡದೇ ಸಂಪುರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಶನಿವಾರ ಮುಂಜಾನೆಯಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

Advertisement

ಸಂಪೂರ್ಣ ಉಸ್ತುವಾರಿ
ರೈಲುಗಳ ದುರಂತ ಸಂಭವಿಸಿದ ಒಡಿಶಾದ ಬಾಲಸೋರ್‌ ಜಿಲ್ಲೆಯ ಬಹನಾಗದಲ್ಲಿ ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಅವರು ಕಳೆದ ಮೂರು ದಿನಗಳಿಂದ ಘಟನಾ ಸ್ಥಳದಲ್ಲೇ ಇದ್ದರು. ಗಾಯಗೊಂಡ ಪ್ರಯಾಣಿಕರ ರಕ್ಷಣೆ ಮತ್ತು ಸಂಪುರ್ಣ ಕಾರ್ಯಾಚರಣೆಯನ್ನು ಅವರು ಹತ್ತಿರದಲ್ಲೇ ಇದ್ದು ನಿರ್ವಹಿಸಿದ್ದಾರೆ. ಯಶವಂತಪುರ-ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌, ಶಾಲಿಮಾರ್‌-ಚೆನ್ನೈ ಸೆಂಟ್ರಲ್‌ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಗೂಡ್ಸ್‌ ರೈಲು ಡಿಕ್ಕಿಯಾಗಿ ಕನಿಷ್ಠ 275 ಮಂದಿ ನಾಗರಿಕರು ಮೃತಪಟ್ಟು, 1,100ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಈ ಪ್ರಕರಣದಲ್ಲಿ ರೈಲ್ವೆ ಸಚಿವರ ಕಾರ್ಯದಕ್ಷತೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಗೋವಾದಿಂದ ದೆಹಲಿ ರಾತ್ರೋರಾತ್ರಿ ಯಾನ
ಶುಕ್ರವಾರ ಸಂಜೆ ಈ ಘಟನೆ ನಡೆದಾಗ ಅಶ್ವಿ‌ನಿ ವೈಷ್ಣವ್‌ ಅವರು ಗೋವಾದಲ್ಲಿ ಇದ್ದರು. ಪಣಜಿ-ಮುಂಬೈ ವಂದೇ ಭಾರತ್‌ ರೈಲು ಉದ್ಘಾಟನೆಗಾಗಿ ಅವರು ಅಲ್ಲಿಗೆ ಹೋಗಿದ್ದರು. ಅಪಘಾತದ ಬಗ್ಗೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಅವರ ಮೊಬೈಲ್‌ಗೆ ಅಧಿಕಾರಿಗಳು ಕರೆ ಮಾಡಿ ವಿಷಯ ತಿಳಿಸಿದರು. ಸಚಿವರು ಮತ್ತು ಅವರ ತಂಡ ಕೂಡಲೇ ದೆಹಲಿಗೆ ವಿಮಾನದಲ್ಲಿ ತಲುಪಿತು.

ದೆಹಲಿ ನಿಲ್ದಾಣದಲ್ಲೇ ಕಾದು ವಿಮಾನವೇರಿದರು
ಶನಿವಾರ ಮುಂಜಾನೆ 4 ಗಂಟೆಗೆ ಒಡಿಶಾಗೆ ದೆಹಲಿಯಿಂದ ಮೊದಲ ವಿಮಾನ ಇತ್ತು. ಅವರು ತಮ್ಮ ನಿವಾಸಕ್ಕೆ ತೆರಳದೆ ದೆಹಲಿ ವಿಮಾನ ನಿಲ್ದಾಣದಲ್ಲೇ ಕಾದರು. ಬೆಳಗ್ಗೆ 3 ಗಂಟೆಗೆ ಅವರು ವಿಶೇಷ ವಿಮಾನ ಹತ್ತಿದರು. ಮೊದಲು ಬಾಲಸೋರ್‌ ತಲುಪಿ, ಅಲ್ಲಿಂದ ಘಟನಾ ಸ್ಥಳವನ್ನು ತಲುಪಿದರು. ಅಲ್ಲಿಯವರೆಗೂ ಘಟನೆ ಕುರಿತು ಕ್ಷಣಕ್ಷಣದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು, ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಫೋನಿನಲ್ಲೇ ಸೂಚಿಸುತ್ತಿದ್ದರು.

ಗಾಯಾಳುಗಳ ಪರಿಸ್ಥಿತಿ ಅವಲೋಕನ
ನಂತರ ಸ್ಥಳದಲ್ಲೇ ಖುದ್ದು ಇದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಅಲ್ಲದೇ ಆಗ್ನೇಯ ವಿಭಾಗದ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದರು. ಇದೇ ವೇಳೆ ರಕ್ಷಣಾ ಸಚಿವರ ತಂಡವು, ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರದ ಉನ್ನತ ಸಚಿವರಿಗೆ ಕ್ಷಣ ಕ್ಷಣದ ಮಾಹಿತಿ ಹಂಚಿಕೊಂಡರು. ಪ್ರಧಾನಿ ಮೋದಿ ಅವರು ಖುದ್ಧು ಸ್ಥಳಕ್ಕೆ ಭೇಟಿ ನೀಡಿದಾಗ, ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಪರಿಸ್ಥಿತಿಯನ್ನು ಅವಲೋಕಿಸಿದರು.

Advertisement

ನಿದ್ದೆ ಮಾಡದ ಸಚಿವರು
ಜತೆಗೆ ರೈಲು ದುರಂತಕ್ಕೆ ನಿಜವಾದ ಕಾರಣ ಕುರಿತು ತಿಳಿಯಲು ಸ್ಥಳದಲ್ಲೇ ಇದ್ದು ಪರಿಶೀಲನೆ ನಡೆಸಿದರು. ಮೂರು ರಾತ್ರಿಗಳು, ಎರಡು ಬೆಳಗಿನ ಜಾವನ್ನು ನಿದ್ದೆ ಇಲ್ಲದೇ ಕಳೆದಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮತ್ತು ತನಿಖೆ ಸೂಕ್ತವಾಗಿ ನಡೆಯ ಬೇಕೆನ್ನುವ ನಿಟ್ಟಿನಲ್ಲಿ ಅವರು ಸಂಪೂರ್ಣ ಶ್ರಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next