ಭುವನೇಶ್ವರ್: ಬಸ್ ಚಲಾಯಿಸುವಾಗಲೇ ಚಾಲಕನಿಗೆ ಹೃದಯ ಸ್ತಂಭನ ಆಗಿ ಮೃತಪಟ್ಟಿರುವ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯ ಪಬುರಿಯಾ ಗ್ರಾಮದ ಬಳಿ ಶುಕ್ರವಾರ ರಾತ್ರಿ(27 ರಂದು) ನಡೆದಿದೆ.
48 ಪ್ರಯಾಣಿಕರನ್ನು ಹೊತ್ತುಕೊಂಡು ಹೋಗುತ್ತಿದ್ದ ಖಾಸಗಿ ಬಸ್ ನ್ನು ಸನಾ ಪ್ರಧಾನ್ ಅವರು ಚಲಾಯಿಸುತ್ತಿದ್ದರು. ಈ ಬಸ್ ಪ್ರತಿ ರಾತ್ರಿ ಕಂಧಮಾಲ್‌ನ ಸಾರಂಗರ್‌ನಿಂದ ಜಿ ಉದಯಗಿರಿ ಮೂಲಕ ರಾಜ್ಯದ ರಾಜಧಾನಿ ಭುವನೇಶ್ವರಕ್ಕೆ ತಲುಪುತ್ತದೆ. ಶುಕ್ರವಾರ ರಾತ್ರಿ ಚಾಲಕನಿಗೆ ಡ್ರೈವಿಂಗ್ ವೇಳೆ ಎದೆನೋವು ಕಾಣಿಸಿಕೊಂಡಿದೆ.
ಎದೆನೋವು ಕಾಣಿಸಿಕೊಂಡ ತಕ್ಷಣ ಸ್ಟೀರಿಂಗ್ ಮೇಲಿನ ನಿಯಂತ್ರಣವನ್ನು ಚಾಲಕ ಕಳೆದುಕೊಂಡಿದ್ದಾರೆ. ಪ್ರಾಣ ಹೋಗುವ ಸಮಯದಲ್ಲೂ ಚಾಲಕ ಬಸ್ಸಿನಲ್ಲಿದ್ದ ಪ್ರಯಾಣಿಕರ ಬಗ್ಗೆ ಯೋಚಿಸಿದ್ದು, ಈ ಕಾರಣದಿಂದ ಬಸ್ಸನ್ನು ರಸ್ತೆಬದಿಯ ಗೋಡೆಗೆ ಹೋಗಿ ಗುದ್ದಿಸಿದ್ದಾರೆ. ಇದರಿಂದ ಬಸ್ಸಿನ ಹಾನಿಯಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಇನ್ಸ್ ಪೆಕ್ಟರ್ ಕಲ್ಯಾಣಮಯಿ ಸೆಂಧಾ ಅವರು ಹೇಳಿದ್ದಾರೆ.
ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆದಾಗಲೇ ಅವರು ಕಾರ್ಡಿಯಾಕ್ ಅರೆಸ್ಟ್ ಆಗಿ ಮೃತಪಟ್ಟಿರುವುದಾಗಿ ವೈದ್ಯರು ಪರೀಕ್ಷಿಸಿ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಪ್ರಧಾನ್ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು.ಈ ಬಗ್ಗೆ ತನಿಖೆಯನ್ನೂ ಆರಂಭಿಸಲಾಗಿದೆ ಎಂದು ಸೆಂಧಾ ತಿಳಿಸಿದ್ದಾರೆ.