ಹೊಸದಿಲ್ಲಿ: ಒಡಿಶಾದಲ್ಲಿ ಆಡಳಿತಾರೂಢ ಬಿಜೆಡಿ ಮತ್ತು ವಿರೋಧ ಪಕ್ಷ ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡಲಿದ್ದು, ಯಾವ ಪಕ್ಷ ಮುಂದಿನ ಸರ್ಕಾರ ರಚಿಸಲಿದೆ ಎನ್ನುವ ಕುತೂಹಲ ತೀವ್ರವಾಗಿದೆ. ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು. ಬಹುತೇಕ ಸಮೀಕ್ಷೆಗಳು ಬಿಜೆಪಿ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ.
ಭಾನುವಾರ ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ 147 ಸದಸ್ಯರ ವಿಧಾನಸಭೆಯಲ್ಲಿ ಎರಡೂ ಪಕ್ಷಗಳು 62-80 ಸ್ಥಾನಗಳನ್ನು ಗೆಲ್ಲುವ ಭವಿಷ್ಯ ನುಡಿದಿದೆ.
ಅಂದಾಜಿನ ಪ್ರಕಾರ, 2019 ರಲ್ಲಿ 32.49% ಮತಗಳನ್ನು ಹೊಂದಿದ್ದ ಬಿಜೆಪಿ ಈಗ 42% ಮತಗಳನ್ನು ಗಳಿಸುವ ಸಾಧ್ಯತೆಯಿದೆ, ಇದು ಸುಮಾರು 10% ರಷ್ಟು ಹೆಚ್ಚಳವಾಗಿದೆ. ಐದರಿಂದ ಎಂಟು ಸ್ಥಾನಗಳು ಮತ್ತು 12% ಮತಗಳೊಂದಿಗೆ ಕಾಂಗ್ರೆಸ್ ದೂರದ ಮೂರನೇ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ ಎಂದು ಅಂಕಿಅಂಶಗಳು ಭವಿಷ್ಯ ಹೇಳಿವೆ.
ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಲಾಭ ಗಳಿಸುವ ಸಾಧ್ಯತೆಯಿದೆ, ಎಕ್ಸಿಟ್ ಪೋಲ್ ಬಿಜೆಪಿಗೆ 62-80 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.ಸಿಎಂ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ (ಬಿಜೆಡಿ) ಭಾರಿ ನಷ್ಟವನ್ನು ಅನುಭವಿಸಿ ಕೇವಲ 62-80 ಸ್ಥಾನಗಳಿಗೆ ಸೀಮಿತವಾಗಬಹುದು ಎಂದು ಹೇಳಿದೆ.
2019 ರಲ್ಲಿ ಬಿಜೆಡಿ 112 ಸ್ಥಾನ ಗೆದ್ದು ಮತ್ತೆ ಅಧಿಕಾರ ಹಿಡಿದಿತ್ತು. ಬಿಜೆಪಿ 23 ಮತ್ತು ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಗೆದ್ದಿತ್ತು. 77 ರ ಹರೆಯದ ನವೀನ್ ಪಟ್ನಾಯಕ್ 2000 ದಿಂದ ನಿರಂತರ ಐದು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ವಿಶೇಷ.