Advertisement

ಹೆಂಡ್ರಿಕ್ಸ್‌ ಶತಕ; ಹರಿಣಗಳಿಗೆ ಸರಣಿ

06:20 AM Aug 06, 2018 | Team Udayavani |

ಕ್ಯಾಂಡಿ: ಆತಿಥೇಯ ಶ್ರೀಲಂಕಾ ವಿರುದ್ಧ ಎರಡೂ ಟೆಸ್ಟ್‌ ಪಂದ್ಯಗಳನ್ನು ಸೋತ ಸಂಕಟದಲ್ಲಿದ್ದ ದಕ್ಷಿಣ ಆಫ್ರಿಕಾ, ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವ ಮೂಲಕ ಸೇಡು ತೀರಿಸಿಕೊಂಡಿದೆ. ರವಿವಾರ ಕ್ಯಾಂಡಿಯಲ್ಲಿ ನಡೆದ 3ನೇ ಪಂದ್ಯವನ್ನು ಡು ಪ್ಲೆಸಿಸ್‌ ಬಳಗ 78 ರನ್ನುಗಳಿಂದ ಜಯಿಸಿ ಈ ಸಾಧನೆ ಮಾಡಿದೆ.

Advertisement

ಇದು ದಕ್ಷಿಣ ಆಫ್ರಿಕಾ ಸಾಧಿಸಿದ ಸತತ 3ನೇ ಜಯವಾಗಿದ್ದು, ಸರಣಿಯಲ್ಲಿ ಇನ್ನೂ 2 ಪಂದ್ಯಗಳಿವೆ.

ಮೊದಲ ಪಂದ್ಯದಲ್ಲೇ ಶತಕ
ಬ್ಯಾಟಿಂಗಿಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 7 ವಿಕೆಟಿಗೆ 363 ರನ್ನುಗಳ ಬೃಹತ್‌ ಮೊತ್ತ ಪೇರಿಸಿ ಸವಾಲೊಡ್ಡಿತು. ಇಷ್ಟು ದೊಡ್ಡ ಸ್ಕೋರನ್ನು ಹಿಂದಿಕ್ಕುವಷ್ಟು ಬ್ಯಾಟಿಂಗ್‌ ಸಾಮರ್ಥ್ಯ ಹೊಂದಿಲ್ಲದ ಶ್ರೀಲಂಕಾ 45.2 ಓವರ್‌ಗಳಲ್ಲಿ 285ಕ್ಕೆ ಆಲೌಟ್‌ ಆಯಿತು.

ವನ್‌ಡೌನ್‌ ಬ್ಯಾಟ್ಸ್‌ಮನ್‌ ರೀಝ ರಫೆಲ್‌ ಹೆಂಡ್ರಿಕ್ಸ್‌ ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ ಬಾರಿಸಿ ಮೆರೆದದ್ದು ಆಫ್ರಿಕಾ ಸರದಿಯ ಆಕರ್ಷಣೆ ಎನಿಸಿತು. ಆರಂಭಕಾರ ಹಾಶಿಮ್‌ ಆಮ್ಲ 59, ಮಧ್ಯಮ ಸರದಿಯಲ್ಲಿ ಜೆಪಿ ಡ್ಯುಮಿನಿ 92, ಡೇವಿಡ್‌ ಮಿಲ್ಲರ್‌ 51 ರನ್‌ ಬಾರಿಸಿ ಆಫ್ರಿಕಾದ ದೊಡ್ಡ ಮೊತ್ತಕ್ಕೆ ಕಾರಣರಾದರು.

ಕ್ವಿಂಟನ್‌ ಡಿ ಕಾಕ್‌ ಕೇವಲ 2 ರನ್‌ ಮಾಡಿ ಔಟಾದ ಬಳಿಕ ಕ್ರೀಸಿಗೆ ಬಂದ ಹೆಂಡ್ರಿಕ್ಸ್‌ 89 ಎಸೆತಗಳಿಗೆ ಜವಾಬಿತ್ತು 102 ರನ್‌ ಹೊಡೆದರು. ಈ ಮನಮೋಹಕ ಆಟದಲ್ಲಿ 8 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಬಿರುಸಿನ ಆಟವಾಡಿದ ಡ್ಯುಮಿನಿ ಎಂಟೇ ರನ್ನಿನಿಂದ ಶತಕ ವಂಚಿತತರಾದರು (70 ಎಸೆತ, 8 ಬೌಂಡರಿ, 4 ಸಿಕ್ಸರ್‌). ಮಿಲ್ಲರ್‌-ಡ್ಯುಮಿನಿ 68 ಎಸೆತಗಳಲ್ಲಿ ಶತಕದ ಜತೆಯಾಟ ಪೂರೈಸಿದರು. ಇವರ ಸಾಹಸದಿಂದ ಅಂತಿಮ 10 ಓವರ್‌ಗಳಲ್ಲಿ 114 ರನ್‌ ಹರಿದು ಬಂತು.

Advertisement

ಶ್ರೀಲಂಕಾ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದ್ದು ಧನಂಜಯದ್ವಯರು ಮಾತ್ರ. 7ನೇ ಕ್ರಮಾಂಕದಲ್ಲಿ ಆಡಲಿಳಿದ ಧನಂಜಯ ಡಿ ಸಿಲ್ವ 84 ರನ್‌ ಹೊಡೆದರೆ (66 ಎಸೆತ, 8 ಬೌಂಡರಿ, 3 ಸಿಕ್ಸರ್‌), ಅಖೀಲ ಧನಂಜಯ 37 ರನ್‌ ಮಾಡಿದರು. ಎನ್‌ಗಿಡಿ 4, ಫೆಲುಕ್ವಾಯೊ 3 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-7 ವಿಕೆಟಿಗೆ 363 (ಹೆಂಡ್ರಿಕ್ಸ್‌ 102, ಡ್ಯುಮಿನಿ 92, ಆಮ್ಲ 59, ಮಿಲ್ಲರ್‌ 51, ತಿಸರ ಪೆರೆರ 75ಕ್ಕೆ 4). ಶ್ರೀಲಂಕಾ-45.2 ಓವರ್‌ಗಳಲ್ಲಿ 285 (ಧನಂಜಯ ಡಿ ಸಿಲ್ವ 84, ಅಖೀಲ ಧನಂಜಯ 37, ಎನ್‌ಗಿಡಿ 57ಕ್ಕೆ 4, ಫೆಲುಕ್ವಾಯೊ 74ಕ್ಕೆ 3, ಶಂಸಿ 62ಕ್ಕೆ 2). ಪಂದ್ಯಶ್ರೇಷ್ಠ: ರೀಝ ಹೆಂಡ್ರಿಕ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next