Advertisement

ಪುಟಾಣಿ ಮಕ್ಕಳ ಗ್ರಂಥಾಲಯ ಬಳಕೆಗಾಗಿ “ಓದುವ ಬೆಳಕು’

10:36 PM Apr 09, 2022 | Team Udayavani |

ಬೆಂಗಳೂರು: ಮಕ್ಕಳಲ್ಲಿ ಓದುವ ಹವ್ಯಾಸ ಮೂಡಿಸಲು, ಓದುವ ಚಟುವಟಿಕೆಗಳನ್ನು ರೂಪಿಸಿ ಅವರ ಮುಂದಿನ ಕಲಿಕೆ ಸುಗಮಗೊಳಿಸಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಗ್ರಂಥಾಲಯ ಇಲಾಖೆ ಜತೆಗೂಡಿ “ಓದುವ ಬೆಳಕು’ ಕಾರ್ಯಕ್ರಮ ರೂಪಿಸಿದೆ.

Advertisement

ಮೂರನೇ ತರಗತಿಯ ಹಂತದಲ್ಲೆ ವಿದ್ಯಾರ್ಥಿಗಳು ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದಿ ಅರ್ಥೈಸಿಕೊಳ್ಳುವುದು ಮತ್ತು ಕೌಶಲ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವುದು ಇದರ ಉದ್ದೇಶವಾಗಿದೆ. ಓದುವ ಬೆಳೆಕು ಕಾರ್ಯಕ್ರಮಕ್ಕೆ ಈಗಾಗಲೇ ಗ್ರಾಮ ಪಂಚಾಯತ್‌ಗಳಲ್ಲಿ ಸ್ಥಾಪಿಸಲಾಗಿರುವ ಗ್ರಂಥಾಲಯಗಳನ್ನು ಮಕ್ಕಳು ಮತ್ತು ಶಾಲಾ ಶಿಕ್ಷಕರು ಬಳಸಿಕೊಳ್ಳುವಂತೆ ಗ್ರಾಮೀಣ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸೂಚಿಸಿದೆ. ಈ ಸಂಬಂಧ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಜತೆಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ ಅಧ್ಯಕ್ಷರು ಮತ್ತು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ.

ಕಲಿಕೆಗೆ ನಾಂದಿಯಾಗುವ ಆಶಯ
1ರಿಂದ 12ನೇ ತರಗತಿ ವಿದ್ಯಾರ್ಥಿಗಳಲ್ಲಿ ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿ ಸಮುದಾಯದಲ್ಲಿ ಬೆಳೆಸುವುದು ಕೂಡ ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿಯಾಗಿದೆ. ಜತೆಗೆ ಶಾಲಾ ವಿದ್ಯಾರ್ಥಿಗಳು ಗ್ರಾಮ ಪಂಚಾಯತ್‌ ಹಾಗೂ ನಗರ ವ್ಯಾಪ್ತಿಯಲ್ಲಿರುವ ನಗರ ಕೇಂದ್ರ ಗ್ರಂಥಾಲಯಗಳಿಗೆ ಭೇಟಿ ನೀಡಿ ಕಥಾ ಪುಸ್ತಕಗಳು, ಪುರವಣಿಗಳು, ನಿಯತಕಾಲಿಕೆಗಳು, ವಾರ್ತಾ ಪತ್ರಿಕೆಗಳು, ವಾರ ಪತ್ರಿಕೆಗಳನ್ನು ಓದಿ ಅರ್ಥೈಯಿಸಿಕೊಂಡು ಮುಂದಿನ ಕಲಿಕೆಗೆ ನಾಂದಿಯಾಗಲಿ ಎನ್ನುವ ಆಶಯ ಇದರಲ್ಲಿ ಸೇರಿದೆ ಎಂದು ಪಂಚಾಯತ್‌ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಶೇ. 100 ಗುರಿ
ಈ ಕಾರ್ಯ ಸಾಧನೆಗಾಗಿ ಗುರಿ ಹೊಂದಲಾಗಿದೆ. 2026-27ರ ಒಳಗೆ 3ನೇ ತರಗತಿಯ ಶೇ. 100ರಷ್ಟು ವಿದ್ಯಾರ್ಥಿಗಳು ಅರ್ಥೈಸಿಕೊಂಡು ಓದುವ ಕೌಶಲವನ್ನು ಹೊಂದುವಂತೆ ಮಾಡುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ವಿದ್ಯಾರ್ಥಿಗಳೊಂದಿಗೆ ಶಾಲೆಗಳು, ಶಿಕ್ಷಕರು ಹಾಗೂ ಸಮುದಾಯ ಕೂಡ ಕೈ ಜೋಡಿಸಿ ಗುರಿ ಮಟ್ಟಲು ಶ್ರಮಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಶಿಕ್ಷಕರ ಭೇಟಿ ಕಡ್ಡಾಯ
ಶಾಲಾ ಮಕ್ಕಳು ವಾರದಲ್ಲಿ ಒಮ್ಮೆ ಕಡ್ಡಾಯವಾಗಿ ಗ್ರಂಥಾಲಯಕ್ಕೆ ಶಾಲಾ ಶಿಕ್ಷಕರೊಂದಿಗೆ ಭೇಟಿ ನೀಡುವುದು ಕೂಡ ಇದರಲ್ಲಿ ಸೇರಿದೆ. ಜತೆಗೆ 1ರಿಂದ 5ನೇ ತರಗತಿ ವಿದ್ಯಾರ್ಥಿಗಳನ್ನು ಹಿರಿಯ ತರಗತಿ ವಿದ್ಯಾರ್ಥಿಗಳೊಡನೆ ಒಗ್ಗೂಡಿಸಿ ಜಂಟಿ ಓದುವಿಕೆಯಲ್ಲಿ ತೊಡಗಿಸಿಕೊಳ್ಳುವುದು. ಹಾಗೂ 4ರಿಂದ 6ರ ವಯೋಮಾನದ ಮಕ್ಕಳು ಸಹ ಗ್ರಂಥಾಲಯಗಳಿಗೆ ಭೇಟಿ ನೀಡಲು ಪ್ರೇರೇಪಿಸಿ ಅವರಿಗೆ ಪುಸ್ತಕಗಳನ್ನು ಓದುವ ಹಾಗೂ ಅವುಗಳನ್ನು ಬಳಸುವ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Advertisement

ಮಕ್ಕಳಲ್ಲಿ ಪುಟ್ಟವಯಸ್ಸಿನಲ್ಲೆ ಓದಿನ ಅಭಿರುಚಿ ಬೆಳೆಸುವುದರ ಜತೆಗೆ ಅರ್ಥೈಸಿಕೊಂಡು ಓದುವುದಕ್ಕೆ ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ರೂಪಿತ ಈ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಜ್ಞಾನದ ಅಭಿರುಚಿ ಬಿತ್ತಲಿದೆ.
– ಡಾ| ಸತೀಶ ಕುಮಾರ್‌ ಹೊಸಮನಿ, ನಿರ್ದೇಶಕರು ಗ್ರಂಥಾಲಯ ಇಲಾಖೆ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next