Advertisement

“ಅಡಚಣೆ’ಬದಿಗೊತ್ತಿ ನೋಡಲು ಅಡ್ಡಿಯಿಲ್ಲ

09:07 AM Mar 25, 2019 | Team Udayavani |

ಅದು ಊರಿನಿಂದ ಹೊರಗೆ, ಬಹುದೂರದಲ್ಲಿರುವ ಸುಂದರ ಸ್ವತ್ಛ ವಾತಾವರಣದ ಪರಿಸರ. ಹಚ್ಚ ಹಸಿರಿನ ನಡುವೆ ಕಂಗೊಳಿಸುವ ಪ್ರಕೃತಿಯ ನಡುವೆ, ಅಷ್ಟೇ ಸುಂದರವಾಗಿರುವ ಹೋಮ್‌ ಸ್ಟೇ. ಅಂದಹಾಗೆ, ಅದರ ಹೆಸರು “ವೈಕುಂಠ’ ಹೋಮ್‌ ಸ್ಟೇ. ಸನ್ನಿವೇಶವೊಂದರಲ್ಲಿ, ಬೇರೆ ಬೇರೆ ಗುರಿ, ಬೇರೆ ಬೇರೆ ದಾರಿಯಲ್ಲಿ ಹೋಗುತ್ತಿರುವ ಒಂಬತ್ತು ಮಂದಿ ಆಕಸ್ಮಿಕವಾಗಿ, ಒಂದು ರಾತ್ರಿ ಅಲ್ಲಿ ಕಳೆಯಲು ಬರುತ್ತಾರೆ.

Advertisement

ಇನ್ನೇನು ಇರುಳು ದಟ್ಟವಾಗಿ ಆವರಿಸುತ್ತಿದ್ದೆ ಎನ್ನುವಾಗಲೇ, ಅಲ್ಲಿ ಉಳಿಯಲು ಬಂದಿರುವ ಒಬ್ಬೊಬ್ಬರೇ ನಿಗೂಢವಾಗಿ ಕೊಲೆಯಾಗಲು ಶುರುವಾಗುತ್ತಾರೆ. ಈ ಕೊಲೆಗಳಿಂದ ಉಳಿದವರು ಎಚ್ಚೆತ್ತುಕೊಳ್ಳುತ್ತಾರಾ.., ಹೀಗೆ ಒಬ್ಬರ ಹಿಂದೊಬ್ಬರು ಯಾಕಾಗಿ ಕೊಲೆಯಾಗುತ್ತಾರೆ..? ವೈಕುಂಠ ರೆಸಾರ್ಟ್‌ನಿಂದ ನೇರವಾಗಿ ವೈಕುಂಠಕ್ಕೆ ಯಾತ್ರೆ ಬೆಳೆಸುವವರೆಷ್ಟು? ವೈಕುಂಠ ರೆಸಾರ್ಟ್‌ನಲ್ಲಿ ಕೊನೆಗೆ ಬದುಕುಳಿಯುವವರೆಷ್ಟು?

ಈ ನಿಗೂಢ ಸರಣಿ ಕೊಲೆಗೆ ಕಾರಣವೇನು ಎನ್ನುವುದೇ “ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಕಥೆ. ಈ ಎಲ್ಲಾ ಕೊಲೆಗಳ ಹಿಂದಿನ ಕಾರಣಗಳೇನು, ಮುಂದಿನ ಪರಿಣಾಮಗಳೇನು ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್‌. ಅದು ಹೇಗೆ ಎಂಬ ಕುತೂಹಲವಿದ್ದರೆ ಚಿತ್ರ ನೋಡಬೇಕು.

ಕಳೆದ ಎರಡು-ಮೂರು ತಿಂಗಳಿನಿಂದ ಸಾಲು ಸಾಲು ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರಗಳು ತೆರೆಗೆ ಬರುತ್ತಿದ್ದು, ಆ ಚಿತ್ರಗಳ ಸಾಲಿಗೆ ಈ ವಾರ ಬಿಡುಗಡೆಯಾಗಿರುವ “ಅಡಚಣೆಗಾಗಿ ಕ್ಷಮಿಸಿ’ ಹೊಸ ಸೇರ್ಪಡೆ ಎನ್ನಬಹುದು. ಈ ಚಿತ್ರದ ಕಥೆಯಲ್ಲಿ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ.

ಅಪರಿಚಿತ ಸ್ಥಳ, ಅಲ್ಲೊಂದಷ್ಟು ಸಂಕಷ್ಟ, ಅಲ್ಲಿಂದ ಹೇಗೆ ಪಾರಾಗುವ ಬಗೆ, ಅದರ ಹಿಂದಿನ ಮರ್ಮ ಹೀಗೆ ಈಗಾಗಲೇ ಅಸಂಖ್ಯಾತ ಚಿತ್ರಗಳಲ್ಲಿ ಕಂಡಿರುವ ಸಾಮಾನ್ಯ ಸಿದ್ಧ ಸಂಗತಿಗಳು ಈ ಚಿತ್ರದಲ್ಲೂ ಮುಂದುವರೆದಿದೆ. ಚಿತ್ರಕಥೆಯಲ್ಲಿ ಒಂದಷ್ಟು ವೈಜ್ಞಾನಿಕ ಅಂಶಗಳ ಮೂಲಕ ನಡೆಯುವ ಘಟನೆಗಳಿಗೆ ತಾರ್ಕಿಕ ಸಮರ್ಥನೆ ನೀಡಲು ಹೊರಟಿದ್ದರೂ, ಅದು ಅಷ್ಟೊಂದು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ಮುಟ್ಟುವುದಿಲ್ಲ.

Advertisement

ಆರಂಭದಲ್ಲಿ ಚಿತ್ರಕಥೆ ಒಂದಷ್ಟು ಕುತೂಹಲ ಮೂಡಿಸಿದರೂ ಅಲ್ಲಲ್ಲಿ ಬರುವ ಕೆಲ “ಅಡಚಣೆ’ಗಳಿಂದ ಆ ಕುತೂಹಲ ಅಷ್ಟಾಗಿ ಉಳಿಯುವುದಿಲ್ಲ. ಚಿತ್ರಕಥೆ, ಸಂಭಾಷಣೆ, ನಿರೂಪಣೆ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ಹರಿಸಬಹುದಿತ್ತು. ಹಾಗೆ ಸ್ವಲ್ಪ ರಿಸ್ಕ್ ತೆಗೆದುಕೊಂಡಿದ್ದರೆ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗಿ ಬರುತ್ತಿತ್ತು.

ಇನ್ನು ಚಿತ್ರದ ಬಹುತೇಕ ಕಲಾವಿದರದ್ದು ಪರವಾಗಿಲ್ಲ ಎನ್ನುವ ಅಭಿನಯ. ಕೆಲವು ಪಾತ್ರಗಳು ಚಿತ್ರದ ಕಥೆಗೆ ಪೂರಕವಾಗಿದ್ದಕ್ಕಿಂತ ಮಾರಕವಾಗಿದ್ದೆ ಹೆಚ್ಚು. ಉಳಿದಂತೆ ಚಿತ್ರದ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಂಕಲನ ಕಾರ್ಯ ಅಚ್ಚುಕಟ್ಟಾಗಿ ಮೂಡಿಬಂದಿದೆ. ಚಿತ್ರದಲ್ಲಿ ಬರುವ ಕೆಲವೊಂದು “ಅಡಚಣೆ’ಗಳನ್ನು ಪ್ರೇಕ್ಷಕ ಪ್ರಭುಗಳು “ಕ್ಷಮಿಸಿ’ದರೆ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.

ಚಿತ್ರ: ಅಡಚಣೆಗಾಗಿ ಕ್ಷಮಿಸಿ
ನಿರ್ದೇಶನ: ಭರತ್‌ ಎಸ್‌. ನಾವುಂದ
ನಿರ್ಮಾಣ: ಸದ್ಗುಣ ಮೂರ್ತಿ
ತಾರಾಗಣ: ಪ್ರದೀಪ್‌ ವರ್ಮ, ಶಿವಮಂಜು, ಕೆ.ಎಸ್‌ ಶ್ರೀಧರ್‌, ಶ್ರೀನಿವಾಸ ಪ್ರಭು, ಅರ್ಪಿತಾ ಗೌಡ, ಮೇಘ, ವಿದ್ಯಾ ಕುಲಕರ್ಣಿ ಇತರರು.

* ಜಿ.ಎಸ್‌ ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next