ಪಿರಿಯಾಪಟ್ಟಣ: ತಾಲೂಕು ಆಡಳಿತ ಭವನದ ಶಿರಸ್ತೇದಾರ್ ಕಚೇರಿಯಲ್ಲಿ ಗಲಾಟೆ ಮಾಡಿದ ಕಾರಣಕ್ಕೆ ಗ್ರಾಪಂ ಸದಸ್ಯರೊಬ್ಬರ ವಿರುದ್ಧ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆಯಿತು.
ಪಟ್ಟಣದ ತಾಲೂಕು ಆಡಳಿತದ ಭವನದಲ್ಲಿ ಶಿರಸ್ತೇದಾರ್ ಎನ್.ನಂದಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮುತ್ತಿನಮುಳಸೋಗೆ ಗ್ರಾಮದ ಎಂ.ಬಿ.ಶಿವಕುಮಾರ್ ಹಾಗೂ ಆತನ ಬೆಂಬಲಿಗರು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಕಡತದ ಬಗ್ಗೆ ವಿಚಾರಿಸಿ ಮಾಹಿತಿ ಕೇಳಿದ್ದಾರೆ. ಈ ವೇಳೆ ಇವರಿಗೆ ವಿನಾಕಾರಣ ಮಾತನಾಡಿ ಕರ್ತವ್ಯಕ್ಕೆ ಅಡಿಪಡಿಸಿದ್ದಲ್ಲದೆ ಟೇಬಲ್ ಮೇಲಿದ್ದ ಕಡತಗಳನ್ನು ಬಿಸಾಡಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ ಎಂದು ಆರೋಪಿಸಿ ಸರಕಾರಿ ನೌಕರರ ಸಂಘದ ಸದಸ್ಯರು ಮತ್ತು ತಾಲೂಕು ಆಡಳಿತ ಭವನದ ನೌಕರರು ಭವನದ ಎದುರು ಪ್ರತಿಭಟಿಸಿದರು.
ಈ ಬಗ್ಗೆ ಶಿರಸ್ತೇದಾರ್ ಎನ್.ನಂದಕುಮಾರ್, ನೌಕರರ ಸಂಘಕ್ಕೆ ದೂರು ನೀಡಿದ್ದಾರೆ. ಎಂ.ಬಿ.ಶಿವಕುಮಾರ್ ಹಾಗೂ ಆತನ ಸಂಗಡಿಗರನ್ನು ಕೂಡಲೇ ಬಂಧಿಸಬೇಕು ಮತ್ತು ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್‌ಕುಮಾರ್ ಮತ್ತು ಖಜಾಂಜಿ ಅಣ್ಣೇಗೌಡ, ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ. ತಹಶೀಲ್ದಾರ್ ಕೆ.ಚಂದ್ರಮೌಳಿಗೆ ಮನವಿ ಪತ್ರ ನೀಡಿ, ವ್ಯಕ್ತಿಯನ್ನು ಬಂಧಿಸುವವರೆಗೂ ಕಪ್ಪುಪಟ್ಟಿಧರಿಸಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ತಾಲೂಕು ಆಡಳಿತ ಭವನದ ಎದುರು ಗ್ರಾಪಂ ಸದಸ್ಯ ಎಂ.ಬಿ.ಶಿವಕುಮಾರ್ ಅಸಭ್ಯವರ್ತನೆ ಖಂಡಿಸಿ ನೌಕರರ ಸಂಘದ ಸದಸ್ಯರು ಪ್ರತಿಭಟಿಸಿದರು. ಈ ವೇಳೆ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಕೆ.ಪ್ರಕಾಶ, ಉಪತಹಶೀಲ್ದಾರ್ ಟ್ರೀಜಾ, ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಇತರರಿದ್ದರು.
ತಮ್ಮ ಜಮೀನಿನಲ್ಲಿ ಸರ್ವೆ ನಡೆಸಿರುವ ಸಂಬಂಧ ಮಾಹಿತಿ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿ 3 ತಿಂಗಳು ಕಳೆದರೂ ಯಾವುದೇ ಮಾಹಿತಿ ನೀಡದ ಕಾರಣ ಕಚೇರಿಯಲ್ಲಿ ಭೇಟಿ ಮಾಡಿ ಪ್ರಶ್ನೆಮಾಡಿದ್ದೇನೆ ಹೊರತು ಯಾವುದೆ ನಿಂದನೆಯಾಗಲಿ ಮಾಡಲಿಲ್ಲ ಎಂದು ಗ್ರಾಪಂ ಸದಸ್ಯ ಎಂ.ಬಿ.ಶಿವಕುಮಾರ್ ತಿಳಿಸಿದ್ಧಾರೆ.