ಬೆಂಗಳೂರು : ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ)ಗಳ ಮೀಸಲಾತಿ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪಿನಿಂದ ಉಂಟಾಗಿರುವ ಗೊಂದಲ ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಯ ಮೀಸಲಾತಿಗೆ ಅಡ್ಡಿಯಾಗಿದೆ.
ಚುನಾವಣೆ ನಡೆದು ಮೂರು ತಿಂಗಳಾದರೂ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನಿಗದಿಯಾಗಿಲ್ಲ. ನಿಗದಿಪಡಿಸಲು ನಗರಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳುತ್ತಿರುವಾಗಲೇ ಸುಪ್ರೀಂ ಕೋರ್ಟ್ ಆದೇಶದ ಚರ್ಚೆ ಮುನ್ನೆಲೆಗೆ ಬಂದಿರುವುದರಿಂದ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ನಿಗದಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಸುಪ್ರೀಂನ ಇದೇ ಆದೇಶದ ಪರಿಣಾಮವಾಗಿ ತಾ.ಪಂ., ಜಿ.ಪಂ. ಚುನಾವಣೆಗಳಿಗೂ ಗ್ರಹಣ ಹಿಡಿದಿದೆ. ಈಗ ಮೀಸಲಾತಿ ಗೊಂದಲ ನಿವಾರಣೆಗೆ ಆಯೋಗ ರಚಿಸಲು ಸರಕಾರ ತೀರ್ಮಾನಿಸಿದೆ. ಹೀಗಾಗಿ ಮೀಸಲಾತಿ ಗೊಂದಲಕ್ಕೆ ಸದ್ಯಕ್ಕಂತೂ ತೆರೆ ಬೀಳುವ ಲಕ್ಷಣ ಇಲ್ಲ. ಅದೇ ರೀತಿ 58 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಗೂ ಶೀಘ್ರ ಮುಕ್ತಿ ಸಿಗುವ ಸಾಧ್ಯತೆಗಳಿಲ್ಲ. ತಾ.ಪಂ., ಜಿ.ಪಂ.ಗಳಂತೆ ಈ 58 ಸಂಸ್ಥೆಗಳಲ್ಲೂ ಆಡಳಿತಾಧಿಕಾರಿಗಳ ಆಡಳಿತವೇ ಮುಂದುವರಿಯಲಿದೆ.
ರಾಜ್ಯದ 5 ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯತ್‌ಗಳ ಸಹಿತ ಒಟ್ಟು 58 ನಗರ ಸ್ಥಳೀಯ ಸಂಸ್ಥೆಗಳಿಗೆ 2021ರ ಡಿ. 27ರಂದು ಚುನಾವಣೆ ನಡೆದಿತ್ತು. ಡಿ. 30ರಂದು ಫಲಿತಾಂಶ ಪ್ರಕಟಗೊಂಡಿತ್ತು. ಮೇಲ್ದರ್ಜೆಗೇರಿದ ನಗರ ಸ್ಥಳೀಯ ಸಂಸ್ಥೆಗಳನ್ನು ಸೇರಿಸಿ ರಾಜ್ಯವನ್ನು ಒಂದು ಘಟಕವನ್ನಾಗಿಸಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಕರ್ನಾಟಕ ಪೌರ ನಿಗಮ ಕಾಯ್ದೆ-1964ರ ಕಲಂ 11ರ ಅನ್ವಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲು ನಿಯಮ ರಚಿಸಲು ಕ್ರಮ ಕೈಗೊಳ್ಳಲಾಗುತ್ತಿತ್ತು. ಈ ಮಧ್ಯೆ ಒಬಿಸಿಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದು, ಇದು ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆಗೆ ಅಡ್ಡಿ ತಂದಿದೆ. ತೀರ್ಪಿನ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸರಕಾರದ ಮೂಲಗಳು ಹೇಳಿವೆ.
ಇದನ್ನೂ ಓದಿ : ಹುಣಸೂರು : ತಂದೆಯಿಂದಲೇ ನಡೆಯಿತಾ 4 ವರ್ಷದ ಮಗನ ಅಪಹರಣ ?
3 ವರ್ಷಗಳಿಂದ ಚುನಾಯಿತ ವ್ಯವಸ್ಥೆ ಇಲ್ಲ
2021ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದ 58 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಹುತೇಕ ಸಂಸ್ಥೆಗಳ ಅವಧಿ 2018ರಲ್ಲಿ ಪೂರ್ಣಗೊಂಡಿತ್ತು. ಅನಂತರ ಹೈಕೋರ್ಟ್ ಆದೇಶದಂತೆ ಚುನಾವಣೆ ನಡೆಸಲಾಯಿತು. ಆದರೆ ಅದಾಗಿ 3 ತಿಂಗಳುಗಳಾದರೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಈ ರೀತಿ 3 ವರ್ಷಗಳಿಂದ ಈ ನಗರ ಸ್ಥಳೀಯ ಸಂಸ್ಥೆಗಳು ಚುನಾಯಿತ ಆಡಳಿತ ವ್ಯವಸ್ಥೆಯಿಂದ ವಂಚಿತವಾಗಿವೆ.