Advertisement

ಬೆಂಗಳೂರು: ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಕರೆದಿದ್ದ ಅಧಿವೇಶನದಲ್ಲಿ ಎರಡನೇ ದಿನವೂ ಕೆಲವು ಶಾಸಕರು ಗೈರು ಹಾಜರಾಗಿದ್ದು, ಪ್ರಮಾಣ ವಚನ ಸ್ವೀಕರಿಸದ ಶಾಸಕರಿಗೆ ಸ್ಪೀಕರ್‌ ಚುನಾವಣೆಯಲ್ಲಿ ಮತ ಹಾಕುವ ಅಧಿಕಾರ ಇರುವುದಿಲ್ಲ ಎಂದು ಹಂಗಾಮಿ ಸ್ಪೀಕರ್‌ ಆರ್‌.ವಿ. ದೇಶಪಾಂಡೆ ಎಚ್ಚರಿಕೆ ನೀಡಿದರು.

Advertisement

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸೋದರ ಎಚ್‌.ಡಿ. ರೇವಣ್ಣ, ಮಾಜಿ ಸಚಿವ ಪ್ರಭು ಚೌಹಾಣ್‌ ಸೇರಿ 16 ಜನರು ಮಧ್ಯಾಹ್ನದ ಕಲಾಪ ಮುಂದೂಡಿಕೆಯಾಗುವವರೆಗೂ ಸದನಕ್ಕೆ ಗೈರಾಗಿದ್ದರು. ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಮತ್ತು ಬೆಳ್ತಂಗಡಿಯ ಹರೀಶ್‌ ಪೂಂಜ ಭಗವಂತನ ಹೆಸರಿನಲ್ಲಿ, ಪ್ರಮಾಣವಚನ ಸ್ವೀಕರಿಸಿದರೆ ಬಿ.ವೈ. ವಿಜಯೇಂದ್ರ ಶಿಕಾರಿಪುರದ ಆರಾಧ್ಯ ದೈವ ಹುಚ್ಚುರಾಯಸ್ವಾಮಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಕಾಂಗ್ರೆಸ್‌ ಪಾಳಯದಿಂದ ಲಕ್ಷ್ಮೀ ಹೆಬ್ಟಾಳ್ಕರ್‌ ಜಗಜ್ಯೋತಿ ಬಸವೇಶ್ವರ, ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸಿ ಆಯ್ಕೆಗೊಂಡ ಮಹೇಶ್‌ ಟೆಂಗಿನಕಾಯಿ ಮಹಾಕೋಟೇಶ್ವರ ಹಾಗೂ ಹೊಸದಾಗಿ ಆಯ್ಕೆಗೊಂಡ ಉಡುಪಿ ಕ್ಷೇತ್ರದ ಯಶಪಾಲ್‌ ಎ. ಸುವರ್ಣ ಉಡುಪಿ ಶ್ರೀಕೃಷ್ಣ, ಅದಮಾರು ಮಠದ ವಿಬುಧೇಶ ತೀರ್ಥ ಸ್ವಾಮೀಜಿ ಹಾಗೂ ಗೋಮಾತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಂಜೆ ಅನಂತರ ಒಂದಿಷ್ಟು ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದು, ಕಾಂಗ್ರೆಸ್‌-2, ಜೆಡಿಎಸ್‌-6, ಬಿಜೆಪಿ-1 ಸೇರಿ 9 ಮಂದಿ ಬಾಕಿ ಇದ್ದಾರೆ. ಅವರಿಗೆ ನಾಳೆಯೂ ಅವಕಾಶ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next