ಲಂಡನ್: ನ್ಯೂಜಿಲ್ಯಾಂಡಿನ ಎಡಗೈ ಆರಂಭಕಾರ ಡೇವನ್ ಕಾನ್ವೆ ಇತಿಹಾಸ ಪ್ರಸಿದ್ಧ ಲಾರ್ಡ್ಸ್ ಅಂಗಳದಲ್ಲಿ ಸ್ಮರಣೀಯ ಬ್ಯಾಟಿಂಗ್ ಸಾಧನೆಗೈದಿದ್ದಾರೆ. ಲಾರ್ಡ್ಸ್‌ನಲ್ಲಿ ಪದಾರ್ಪಣೆಗೈದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಟೆಸ್ಟ್ ಪಂದ್ಯದ ದ್ವಿತೀಯ ದಿನ ನ್ಯೂಜಿಲ್ಯಾಂಡ್ 378ಕ್ಕೆ ಆಲೌಟ್ ಆಯಿತು. ಇದರಲ್ಲಿ ಕಾನ್ವೆ ಕೊಡುಗೆ ಭರ್ಜರಿ 200 ರನ್ (347 ಎಸೆತ, 22 ಬೌಂಡರಿ, 1 ಸಿಕ್ಸರ್). ದ್ವಿಶತಕ ಪೂರ್ತಿಗೊಳಿಸಿದ ಕೂಡಲೇ ಅವರು ರನೌಟ್ ಆಗಿ ನಿರ್ಗಮಿಸಿದರು. ರಾಬಿನ್ಸನ್ 4, ವುಡ್ 3, ಆ್ಯಂಡರ್ಸನ್ 2 ವಿಕೆಟ್ ಕಿತ್ತರು.
ಗಂಗೂಲಿ ದಾಖಲೆ ಪತನ: ಕಾನ್ವೆ ಈ ಅಮೋಘ ಸಾಧನೆಯ ವೇಳೆ ಸೌರವ್ ಗಂಗೂಲಿ ಅವರ ದಾಖಲೆ ಮುರಿದರು. ಗಂಗೂಲಿ 1996ರ ಚೊಚ್ಚಲ ಟೆಸ್ಟ್ ಪಂದ್ಯದ ವೇಳೆ ಲಾರ್ಡ್ಸ್‌ನಲ್ಲಿ 131 ರನ್ ಹೊಡೆದಿದ್ದರು. ಇವರಿಬ್ಬರೂ ಎಡಗೈ ಆರಂಭಿಕ ರೆಂಬುದು ವಿಶೇಷ. ಅಷ್ಟೇ ಅಲ್ಲ, ಇಬ್ಬರ ಜನ್ಮ ದಿನಾಂಕವೂ ಒಂದೇ (ಜುಲೈ 8).
ಡೇವನ್ ಕಾನ್ವೆ ಲಾರ್ಡ್ಸ್‌ನಲ್ಲಿ ಟೆಸ್ಟ್ ಪದಾರ್ಪಣೆಗೈದು ಶತಕ ಬಾರಿಸಿದ ವಿಶªದ 6ನೇ ಹಾಗೂ ನ್ಯೂಜಿಲ್ಯಾಂಡಿನ ಮೊದಲ ಕ್ರಿಕೆಟಿಗ. ಚೊಚ್ಚಲ ಟೆಸ್ಟ್‌ನಲ್ಲೇ ದ್ವಿಶತಕ ಹೊಡೆದ ವಿಶ್ವದ 6ನೇ ಹಾಗೂ ನ್ಯೂಜಿಲ್ಯಾಂಡಿನ 2ನೇ ಬ್ಯಾಟ್ಸ್‌ಮನ್. ಮ್ಯಾಥ್ಯೂ ಸಿಂಕ್ಲೇರ್ ಮೊದಲಿಗ. ಅವರು ವೆಸ್ಟ್ ಇಂಡೀಸ್ ಎದುರಿನ 1999ರ ವೆಲ್ಲಿಂಗ್ಟನ್ ಪಂದ್ಯದಲ್ಲಿ 214 ರನ್ ಹೊಡೆದಿದ್ದರು.
ಜವಾಬು ನೀಡಲಾರಂಭಿಸಿದ ಇಂಗ್ಲೆಂಡ್ ಆರಂಭಿಕ ಕುಸಿತಕ್ಕೆ ಸಿಲುಕಿದ್ದು, ಚಹಾ ವಿರಾಮದ ವೇಳೆ 2 ವಿಕೆಟಿಗೆ 25 ರನ್ ಮಾಡಿದೆ.