Advertisement

ರೈಲಿನಲ್ಲಿ ಅಡಿಕೆ ಸಾಗಾಟಕ್ಕೆ ಸಾಂಕೇತಿಕ ಚಾಲನೆ

11:21 PM Sep 23, 2020 | mahesh |

ಪುತ್ತೂರು: ರೈಲುಗಳ ಮೂಲಕ ರೈತರು ಸಂಚರಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಪೂರಕ ಎಂಬಂತೆ ಕೃಷಿಕರ ಉತ್ಪನ್ನಗಳನ್ನು ಪುತ್ತೂರಿ ನಿಂದ ಗುಜರಾತ್‌ಗೆ ರೈಲಿನ ಮೂಲಕ ಸಾಗಾಟ ಮಾಡುವ ಪ್ರಯತ್ನ ಆರಂಭಗೊಂಡಿದೆ. ಈ ಮೂಲಕ ರೈತರ ರೈಲು ಪಯಣದ ಕನಸು ಈಡೇರಿದೆ ಎಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಹೇಳಿದರು.

Advertisement

ಕೊಂಕಣ ರೈಲ್ವೇ ಮೂಲಕ ಗುಜರಾತ್‌ಗೆ ಅಡಿಕೆ ಸಾಗಾಟಕ್ಕೆ ಬುಧವಾರ ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿ ಬಳಿಕ ಅವರು ಮಾತನಾಡಿ ದರು. ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ರೈತರು ಬೆಳೆಯುವ ಕೃಷಿ ಉತ್ಪನ್ನ ವನ್ನು ರೈಲಿನಲ್ಲಿ ಸಾಗಿಸುವ ಮೂಲಕ ರೈತರಿಗೆ ಅನುಕೂಲವಾಗಲಿದೆ. ರಾಜ್ಯದ ಎಲ್ಲ ಕಡೆಗಳಲ್ಲಿ ಈ ಕಾರ್ಯ ಆರಂಭವಾಗಬೇಕು. ಕ್ಯಾಂಪ್ಕೋ ಸಂಸ್ಥೆ ಇದಕ್ಕೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.

ಅ. 3ಕ್ಕೆ ಅಧಿಕೃತ ಚಾಲನೆ
ಎಪಿಎಂಸಿ ಅಧ್ಯಕ್ಷ ದಿನೇಶ ಮೆದು ಮಾತನಾಡಿ, ಹಳ್ಳಿ-ಹಳ್ಳಿಗಳಲ್ಲಿರುವ ರೈತರು ಬೆಳೆಯುವ ಕೃಷಿ ಉತ್ಪನ್ನಗಳು ರೈಲುಗಳ ಮೂಲಕ ದೂರದ ಗುಜರಾತನ್ನು ಕಡಿಮೆ ವೆಚ್ಚದಲ್ಲಿ ತಲುಪಬೇಕು, ಉತ್ತಮ ಧಾರಣೆ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರಕ್ಕೆ ಪುತ್ತೂರು ಶಾಸಕರ ನೇತೃತ್ವದಲ್ಲಿ 2-3 ಸಭೆಗಳನ್ನು ರೈಲ್ವೇ ಅಧಿಕಾರಿಗಳು, ಎಂಜಿನಿಯರ್‌ಗಳ ಮೂಲಕ ನಡೆಸಲಾಗಿತ್ತು. ಇದೀಗ ಶ್ರಮ ಸಾಕಾರಗೊಂಡಿದೆ. ಸೆ. 26ರ ತನಕ ಪ್ರಾಯೋಗಿವಾಗಿ ಅಡಿಕೆ ಸಾಗಾಟ ಮಾಡಲಾಗುವುದು. ಅ. 3ಕ್ಕೆ ಈ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುವುದು ಎಂದರು.

ಕೊಂಕಣ ರೈಲ್ವೇ ಎಂಜಿನಿಯರ್‌ಗಳಾದ ಡಿ.ವಿ. ಸುರೇಶ್‌ ಗೌಡ, ವಿನಯ ಕುಮಾರ್‌, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಸದಸ್ಯರಾದ ಬೂಡಿಯಾರ್‌ ರಾಧಾಕೃಷ್ಣ ರೈ, ತ್ರಿವೇಣಿ ಪೆರೊÌàಡಿ, ಎಚ್‌. ಅಬ್ದುಲ್‌ ಶುಕೂರ್‌, ನಾಮ ನಿರ್ದೇಶಿತ ಸದಸ್ಯ ಬಾಲಕೃಷ್ಣ ಜೋಯಿಸ್‌, ಕೃಷ್ಣ ಕುಮಾರ್‌, ಕಾರ್ಯದರ್ಶಿ ರಾಮಚಂದ್ರ, ವರ್ತಕರ ಸಂಘದ ಗೌರವ ಅಧ್ಯಕ್ಷ ಶಶಾಂಕ್‌ ಕೊಟೇಚಾ, ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು, ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.

ಎಪಿಎಂಸಿ ಪ್ರಾಂಗಣದಲ್ಲಿರುವ ನಾಗ ಸನ್ನಿಧಿಯಲ್ಲಿ ಪೂಜಾ ವಿಧಿವಿಧಾನ ನೆರವೇರಿಸಿ ಬಳಿಕ ತೆಂಗಿನಕಾಯಿ ಒಡೆದು ಅಡಿಕೆ ಸಾಗಾಟದ ಲಾರಿಗೆ ಚಾಲನೆ ನೀಡಲಾಯಿತು. ಖಾಸಿಂ ಹಾಜಿ ಮತ್ತು ಸಿನಾನ್‌ ಅವರ ಟ್ರಾನ್ಸ್‌ ಪೋರ್ಟ್‌ ಮೂಲಕ ಸಾಗಾಟ ನಡೆಯಿತು. ಸದಸ್ಯ ಬಾಲಕೃಷ್ಣ ಬಾಣಜಾಲು ವಂದಿಸಿದರು. ಉಪಾಧ್ಯಕ್ಷ ಎನ್‌.ಎಸ್‌. ಮಂಜುನಾಥ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next