Advertisement

ಕಾನೂನು ಮೇಲಾಟ : ಅತಂತ್ರ ಸ್ಥಿತಿಯಲ್ಲಿ ಪ್ರಯಾಣಿಕರು

03:15 AM Jun 09, 2018 | Team Udayavani |

ಬೈಂದೂರು: ಒಂದೂವರೆ‌ ವರ್ಷದಿಂದ ಇಲ್ಲಿನ ಗ್ರಾಮೀಣ ಭಾಗದಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್‌ ಸೇವೆ ಕಾನೂನು ಮೇಲಾಟದಲ್ಲಿ ಹಠಾತ್‌ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸೇರಿದಂತೆ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಜನರು ಪ್ರತಿಭಟನೆ ನಿರತರಾಗಿದ್ದರೂ ಬಸ್‌ ಸೇವೆ ಪುನರಾರಂಭ ಗೊಂಡಿಲ್ಲ.

Advertisement

ಮೂರು ಸಾವಿರ ವಿದ್ಯಾರ್ಥಿಗಳು
ಬೈಂದೂರು ಪ್ರಥಮ ದರ್ಜೆ ಕಾಲೇಜಿನ 641, ಪ.ಪೂ. ಕಾಲೇಜಿನ ಸುಮಾರು 1500, ಶಿರೂರು ಪ.ಪೂ. ಕಾಲೇಜಿನ 350ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಸ್‌ಗಳನ್ನೇ ಅವಲಂಬಿಸಿದ್ದರು. ಈಗ ಇವರು ಇತರ ಬಾಡಿಗೆ ವಾಹನಗಳಿಗೆ ಮೊರೆ ಹೋಗುವಂತಾಗಿದೆ. ಜತೆಗೆ ದಿನಕ್ಕೆ 20-30 ರೂಗಳಿಗೂ ಮಿಕ್ಕಿ ವ್ಯಯಿಸಬೇಕಾಗಿದೆ. ಬಸ್‌ ಇಲ್ಲದೆಡೆ ಹೆತ್ತವರೇ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ.

ಒಂದು ಕಣ್ಣಿಗೆ ಸುಣ್ಣ…
ಸಾರಿಗೆ ಇಲಾಖೆಯ ಇಬ್ಬಗೆ ನೀತಿಯಿಂದ ಗ್ರಾಮೀಣ ಜನರು ಕಷ್ಟ ಪಡುವಂತಾಗಿದೆ. ರಾಜ್ಯ ಜಂಟಿ ಸಾರಿಗೆ ಆಯುಕ್ತರ ಮಾಹಿತಿ ಪ್ರಕಾರ ಪಿಎಸ್‌ಟಿಪಿಸಿ/2 ಡಿಕೆ 83.84, ಪಿಎಸ್‌ಟಿಪಿಸಿ 7/ಡಿಕೆ 93.94, ಪಿಎಸ್‌ಟಿಪಿಸಿ 199/98.99,ಪಿಎಸ್‌ಟಿಪಿಸಿ 01/ಯುಡಿಪಿ 99 ಸೇರಿದಂತೆ ನಾಲ್ಕು ಅಧಿಕೃತ ಪರವಾನಿಗೆಗಳನ್ನು ಖಾಸಗಿಯವರಿಗೆ ಕುಂದಾಪುರದಿಂದ ಭಟ್ಕಳಕ್ಕೆ ನೀಡಲಾಗಿದೆ. ಆದರೆ ಇಲ್ಲಿ 10ಕ್ಕೂ ಹೆಚ್ಚು ಅನಧಿಕೃತ ಬಸ್‌ಗಳು ಸಂಚರಿಸುತ್ತಿವೆ. ಸಾರಿಗೆ ಇಲಾಖೆ ಇದುವರೆಗೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಟೀಕೆ.

ಈ ಬಗ್ಗೆ ಪ್ರತಿಕ್ರಿಯಿಸಿದ KSRTC ಅಧಿಕಾರಿಗಳು, ಸಾರಿಗೆ ಇಲಾಖೆ ನೀಡಿದ ಪರವಾನಿಗೆ ಪುನರ್‌ ಪರಿಶೀಲಿಸಲು ಕೆ.ಎಸ್‌.ಟಿ.ಎ.ಟಿ. ಆದೇಶಿಸಿದೆ. ಆದರೆ ಪ್ರಕರಣ ಲೋಕಾಯುಕ್ತ ಕೋರ್ಟ್‌ನಲ್ಲಿದ್ದು ಸಂಚಾರಕ್ಕೆ ತಡೆ ನೀಡಿರುವುದರಿಂದ ಸಮರ್ಪಕ ಮಾಹಿತಿ ನೀಡಬೇಕಿದೆ ಎಂದರು. 

ಬಸ್‌ ನಿಲುಗಡೆಗೆ ಕಾರಣಗಳೇನು?
ಬೈಂದೂರಿನ ಹಿಂದಿನ ಶಾಸಕರು KSRTC ನಿಗಮದ ಅಧ್ಯಕ್ಷರೂ ಆಗಿದ್ದರಿಂದ ಗ್ರಾಮೀಣ ಭಾಗಗಳಿಗೆ ನಾಲ್ಕು ನರ್ಮ್ ಬಸ್‌ ಸೇವೆ ಒದಗಿಸಿದ್ದರು. ಇದಕ್ಕೆ RTO ಅಧಿಕೃತ ಅನುಮತಿ ನೀಡಿರದಿದ್ದರೂ, KSRTC ಅಧಿಕಾರಿಗಳು ತರಾತುರಿಯಲ್ಲಿ ಜಿಲ್ಲಾ ಸಾರಿಗೆ ಇಲಾಖೆಗೆ ಮನವಿ ನೀಡಿ ಬಸ್‌ ಸಂಚಾರ ಆರಂಭಿಸಿದ್ದರು. ಇದರ ವಿರುದ್ಧ ಖಾಸಗಿ ಬಸ್‌ ಮಾಲಕರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಈ ಸಂಬಂಧ ಜೂ. 19ರೊಳಗೆ ಅಫಿದವಿತ್‌ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿವಾದ ಹಿನ್ನೆಲೆಯಲ್ಲಿ ಬಸ್‌ ಸಂಚಾರ ಹಠಾತ್‌ ತಡೆ ಬಿದ್ದಿದೆ. ಆದರೆ  RTO ಅಧಿಕಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಅನುಮತಿ ನೀಡಿದರೆ ಈ ಸಮಸ್ಯೆ ಇತ್ಯರ್ಥವಾಗುತ್ತದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

Advertisement

ಎಲ್ಲೆಲ್ಲಿ ಸಮಸ್ಯೆ ?
ಬೈಂದೂರು ತಾಲೂಕಿನ ಗ್ರಾಮೀಣ ಭಾಗಗಳಿಗೆ ಬಸ್‌ ಗಳು ಸಂಚರಿಸುತ್ತಿದ್ದು, ವಿಶೇಷವಾಗಿ ವಿದ್ಯಾರ್ಥಿಗಳು ಇದರ ನೆರವನ್ನು ಪಡೆದುಕೊಳ್ಳುತ್ತಿದ್ದರು. ಬೈಂದೂರು ಜಂಕ್ಷನ್‌ನಿಂದ ಗಂಗನಾಡು 10 ಕಿ.ಮೀ ಅಂತರ ಮಧ್ದೋಡಿ 8 ಕಿ.ಮೀ, ಗೋಳಿಬೇರು 12 ಕಿ.ಮೀ, ತೂದಳ್ಳಿ ಶಿರೂರಿನಿಂದ 9 ಕಿ.ಮೀ ಅಂತರದಲ್ಲಿದೆ. ಬಸ್‌ ಗಳು ಊರಿನ ಮುಖ್ಯ ರಸ್ತೆಗೆ ಬಂದರೂ ವಿದ್ಯಾರ್ಥಿಗಳು ಈ ಬಸ್‌ ಹಿಡಿಯಬೇಕಾದರೆ ಒಂದೆರೆಡು ಕಿ.ಮೀ ಕಾಡು ದಾರಿಯಲ್ಲಿ ನಡೆಯಲೇಬೇಕು ಎಂಬಂತಿದೆ. ವಿದ್ಯಾರ್ಥಿಗಳಿಗೆ ಬೈಂದೂರು, ಭಟ್ಕಳ ಹಾಗೂ ಕುಂದಾಪುರ ಸಂಪರ್ಕಿಸಲು ಈ ಬಸ್‌ ಗಳೇ ಮೂಲ ಸೌಕರ್ಯಗಳಾಗಿದ್ದವು. ಆದರೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದಿರುವುದರಿಂದ ಪರಿತಪಿಸುವಂತಾಗಿದೆ. ಕೆಲವು ವಿದ್ಯಾರ್ಥಿಗಳಂತೂ ವಿಧಿಯಿಲ್ಲದೇ ವಿದ್ಯೆಯನ್ನೇ ಮೊಟಕುಗೊಳಿಸುವಂಥ ಸ್ಥಿತಿಯೂ ಉದ್ಭವಿಸಿದೆ.

ಅಧಿಕಾರಿಗಳ ಸಮಸ್ಯೆ
ಉಡುಪಿ ಜಿಲ್ಲೆಯಲ್ಲಿ ಒಟ್ಟು 66 ಸರಕಾರಿ ಬಸ್‌ಗಳಿಗೆ ಪರವಾನಿಗೆ ನೀಡಲಾಗಿದೆ. ಅವುಗಳಲ್ಲಿ ಕೇವಲ 30 ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿವೆ. ನಾವು ಪರವಾನಿಗೆ ನೀಡುವ ನೀಡುವಾಗ ಬಸ್‌ ಸಂಖ್ಯೆ ನಮೂದಿಸಿಯೇ ನೀಡುತ್ತೇವೆ. ಆದರೆ KSRTC ಅಧಿಕಾರಿಗಳು ಹೊಸ ಬಸ್‌ ಗಳಿಗೆ ಪರವಾನಿಗೆ ಕೇಳಿಲ್ಲ, ಹಳೆಯ ಪರವಾನಿಗೆಯಲ್ಲೇ ಓಡಿಸಿ ಸಾರ್ವಜನಿಕರಿಗೆ ಗೊಂದಲು ಉಂಟುಮಾಡುತ್ತಿದ್ದಾರೆ. ಈಗಲೂ ಅನುಮತಿ ಕೇಳಿದರೆ ನಾವು ನೀಡುತ್ತೇವೆ. ಕುಂದಾಪುರ – ಭಟ್ಕಳ ಅನಧಿಕೃತ ಖಾಸಗಿ ಬಸ್‌ ಓಡಾಡುವ ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ.
– ವರ್ಣೇಕರ್‌, ಸಾರಿಗೆ ಅಧಿಕಾರಿ, ಉಡುಪಿ

ಮಾರ್ಗಗಳು 
– ಬೈಂದೂರು – ಗಂಗನಾಡು , ಬೈಂದೂರು – ದೊಂಬೆ
– ಬೈಂದೂರು – ಮಧ್ದೋಡಿ – ಗೋಳಿಬೇರು – ತೂದಳ್ಳಿ – ಶಿರೂರು

— ಅರುಣ ಕುಮಾರ್‌ ಶಿರೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next