Advertisement

ದ್ವಿಶತಕದತ್ತ ಕೋವಿಡ್ 19 ವೈರಸ್‌ ಸೋಂಕಿತರ ಸಂಖ್ಯೆ

12:19 AM Apr 10, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ವೈರಸ್‌ ಸೋಂಕಿತರ ಸಂಖ್ಯೆ ದ್ವಿಶತಕ ಹೊಸ್ತಿಲಲ್ಲಿದ್ದು, ಸೋಂಕಿತರ ಸಂಖ್ಯೆ 197ಕ್ಕೆ ತಲುಪಿದೆ. ಸೋಂಕಿತರ ಪೈಕಿ ಗದಗದ 80 ವರ್ಷದ ವೃದ್ಧೆಯೊಬ್ಬರು ಬುಧವಾರ ಮಧ್ಯರಾತ್ರಿ ಸಾವಿಗೀಡಾಗಿದ್ದು, ಆ ಮೂಲಕ ರಾಜ್ಯದಲ್ಲಿ ಒಟ್ಟು ಆರು ಮಂದಿ ಕೋವಿಡ್ 19 ಸೋಂಕಿನಿಂದ ಜೀವ ಕಳೆದುಕೊಂಡಂತಾಗಿದೆ.

Advertisement

ಗುರುವಾರ ಒಂದೇ ದಿನ ರಾಜ್ಯದ ವಿವಿಧೆಡೆ 16 ಮಂದಿಯಲ್ಲಿ ಕೋವಿಡ್ 19 ವೈರಸ್‌ ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಬೆಂಗಳೂರಿನ 5, ಬಾಗಲಕೋಟೆ, ಬೆಳಗಾವಿಯಲ್ಲಿ ತಲಾ 3, ಮೈಸೂರಿನಲ್ಲಿ 2 ಮತ್ತು ಮಂಡ್ಯ, ಚಿಕ್ಕಬಳ್ಳಾಪುರ, ಧಾರವಾಡದಲ್ಲಿ ತಲಾ ಒಬ್ಬರಿಗೆ ಸೋಂಕು ತಗಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಸೋಂಕಿತರನ್ನು ಆಯಾ ಜಿಲ್ಲಾ ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕು ದೃಢಪಟ್ಟವವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದವರ ಪತ್ತೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಎಲ್ಲರನ್ನು ಶಂಕಿತರು ಎಂದು ಗುರುತಿಸಿ ಕ್ವಾರಂಟೈನ್‌ ಮಾಡಿ ಕಡ್ಡಾಯವಾಗಿ ಎಲ್ಲರಿಗೂ ಸೋಂಕು ಪರೀಕ್ಷೆ ಮಾಡಲಾಗುವುದು.

ಗದಗದಲ್ಲಿ ವೃದ್ಧೆ ಸಾವು
ಮಂಗಳವಾರವಷ್ಟೇ ಬಾಗಲಕೋಟೆಯ ಸೋಂಕಿತ ವೃದ್ಧರೊಬ್ಬರು ಮೃತಪಟ್ಟಿದ್ದರು. ಬಳಿಕ ಬುಧವಾರ ಮಧ್ಯರಾತ್ರಿ ಗದಗದಲ್ಲಿ ಕೋವಿಡ್ 19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಸಾವಿಗೀಡಾಗಿದ್ದಾರೆ. ಎ. 4ರಂದು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯನ್ನು ಅಲ್ಲಿನ “ಜಿಮ್ಸ…’ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಾವುದೇ ವಿದೇಶ ಪ್ರಯಾಣ ಅಥವಾ ವಿದೇಶದಿಂದ ಬಂದವರ ಸಂಪರ್ಕ ಇರಲಿಲ್ಲವಾದರೂ ಕೋವಿಡ್ 19 ಸೋಂಕು ಶಂಕೆ ಹಿನ್ನೆಲೆ ಪರೀಕ್ಷೆ ನಡೆಸಿದ್ದಾಗ ದೃಢಪಟ್ಟಿತ್ತು. ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕುಟುಂಬಸ್ಥರ ಸಹಿತ ಪ್ರಾಥಮಿಕ ಸಂಪರ್ಕದಲ್ಲಿದ್ದ 35 ಮಂದಿ ಮತ್ತು ವೃದ್ಧೆಗೆ ಚಿಕಿತ್ಸೆ ನೀಡಿದ್ದ 7 ಮಂದಿ ವೈದ್ಯಕೀಯ ಸಿಬಂದಿಯನ್ನೂ ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಯಾರಲ್ಲೂ ಸೋಂಕು ದೃಢಪಟ್ಟಿಲ್ಲ. ಇನ್ನು ವೃದ್ಧೆಗೆ ಸೋಂಕು ತಗಲಿದ್ದರ ಕುರಿತು ಆರೋಗ್ಯ ಇಲಾಖೆ ವೈದ್ಯಕೀಯ ತನಿಖೆ ನಡೆಸುತ್ತಿದೆ.

ಮೂವರು ಮಕ್ಕಳಿಗೆ ಸೋಂಕು
ಬಾಗಲಕೋಟೆಯಲ್ಲಿ ಮಂಗಳವಾರ ಮೃತರಾಗಿದ್ದ ವೃದ್ಧನಿಂದ ಸೋಂಕು ಹರಡಿದ್ದ ನೆರೆಮನೆಯ ವ್ಯಕ್ತಿಯ ಪುತ್ರ, ಆತನ ಮೈದುನನ ಪುತ್ರ ಮತ್ತು ಪುತ್ರಿಗೂ ಸೋಂಕು ಹರಡಿದೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ತಿಂಗಳ ಮಗುವಿನಲ್ಲಿ ಸೋಂಕು ದೃಢಪಟ್ಟಿದ್ದು, ಇಂದಿಗೂ ಚಿಕಿತ್ಸೆ ಪಡೆಯುತ್ತಿದೆ. ಬೆಳಗಾವಿ ಮತ್ತು ಮೈಸೂರಿನಲ್ಲಿ ಸೋಂಕಿತರಿಂದ ಅವರ ತಂದೆಗೆ, ಚಿಕ್ಕಬಳ್ಳಾಪುರದಲ್ಲಿ ಸೋಂಕಿತರ ಸಹೋದರಿಯರಿಗೆ ಸೋಂಕು ತಗಲಿರುವುದು ಖಾತರಿಯಾಗಿದೆ.

Advertisement

9 ದಿನಗಳಲ್ಲಿ 96 ಮಂದಿಗೆ ಸೋಂಕು
ಆರೋಗ್ಯ ತಜ್ಞರು ಅಂದಾಜಿಸಿದಂತೆಯೇ ಎಪ್ರಿಲ್‌ ಮೊದಲ ವಾರ ರಾಜ್ಯದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದೃಢಪಟ್ಟಿವೆ. ಮಾ. 8ರಿಂದ 31ರ ವರೆಗೆ 101 ಮಂದಿಯಲ್ಲಿ ಸೋಂಕು ದೃಢವಾಗಿತ್ತು. ಎಪ್ರಿಲ್‌ ತಿಂಗಳಾರಂಭದಿಂದ ಇಲ್ಲಿಯವರೆಗೂ (9 ದಿನ) 96 ಮಂದಿಗೆ ಸೋಂಕು ತಗಲಿರುವುದು ದೃಢವಾಗಿದೆ. ಅಲ್ಲದೇ ಕಳೆದ 10 ದಿನಗಳಲ್ಲಿಯೇ ಸೋಂಕಿತರ ಸಂಖ್ಯೆ ಮೂರಂಕಿ ದಾಟಿದೆ. ನಿಜಾಮುದ್ದೀನ್‌ ಧಾರ್ಮಿಕ ಸಮಾವೇಶದಲ್ಲಿ ಭಾಗಿಯಾದದವರಲ್ಲಿನ ಸೋಂಕು ಪ್ರಕರಣಗಳು ಮತ್ತು ಮೈಸೂರಿನ ನಂಜನಗೂಡು ಔಷಧ ಕಂಪೆನಿಯ ಸೋಂಕಿತ ಪ್ರಕರಣಗಳಿಂದಾಗಿ ಸೋಂಕಿತರಸಂಖ್ಯೆ  ಈ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗಿದೆ.

ಇಬ್ಬರು ಚೇತರಿಕೆ
ಕೋವಿಡ್ 19 ಸೋಂಕಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ದಾವಣಗೆರೆ ಮತ್ತು ಬೆಂಗಳೂರಿನಲ್ಲಿ ತಲಾ ಒಬ್ಬರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇಲ್ಲಿಯವರೆಗೂ ರಾಜ್ಯದಲ್ಲಿ ಒಟ್ಟು 30 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಸೇರಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

– ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಪರ್ಕದಿಂದ ಅವಲೋಕನದಲ್ಲಿರುವವರು – 23,671. ಈ ಪೈಕಿ ಸೋಂಕಿತನ ಪ್ರಾಥಮಿಕ ಸಂಪರ್ಕಿತರು – 1804, ದ್ವಿತೀಯ ಸಂಪರ್ಕಿತರು- 5,533
– ಆಸ್ಪತ್ರೆಗೆ ಗುರುವಾರ ದಾಖಲಾದ ಕೊರೊನಾ ಶಂಕಿತರು – 95, ಬಿಡುಗಡೆಯಾದವರು – 48, ಈವರೆಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಂಕಿತರು – 384
– ಗುರುವಾರ ನೆಗೆಟಿವ್‌ ಬಂದ ವರದಿಗಳು- 656, ಪಾಸಿಟಿವ್‌ ಬಂದ ವರದಿಗಳು – 16
( ಈವರೆಗೂ ಒಟ್ಟಾರೆ ನೆಗೆಟಿವ್‌ – 7,176, ಪಾಸಿಟಿವ್‌ – 197)
– ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು – 161

ಕುಟುಂಬದ ನಾಲ್ವರಿಗೆ ಪಾಸಿಟಿವ್‌
ಬೆಳಗಾವಿ: ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ-ದಿನಕ್ಕೆ ಹೆಚ್ಚುತ್ತಿದ್ದು, ಒಂದೇ ಕುಟುಂಬದ ನಾಲ್ವರಿಗೆ ಸೋಂಕು ತಗಲುವ ಮೂಲಕ ಜಿಲ್ಲೆಯಲ್ಲಿ ಕೋವಿಡ್‌-19 ಪಾಸಿಟಿವ್‌ ಸಂಖ್ಯೆ 10ಕ್ಕೇರಿದಂತಾಗಿದೆ.

ದಿಲ್ಲಿಯ ನಿಜಾಮುದ್ದಿನ್‌ ತಬ್ಲೀಘಿ ಜಮಾತ್‌ ಮರ್ಕಜ್‌ನಿಂದ ಬೆಳಗಾವಿಗೆ ಬಂದಿದ್ದ ಹಿರೇಬಾಗೇವಾಡಿಯ ವ್ಯಕ್ತಿಯ ತಂದೆ, ತಾಯಿ ಮತ್ತು ಸಹೋದರನಿಗೂ ಈ ಸೋಂಕು ದೃಢಪಟ್ಟಿದೆ. ಗುರುವಾರ ಬೆಳಗ್ಗೆ ತಂದೆಗೆ ಮತ್ತು ಸಂಜೆ ಹೊತ್ತಿಗೆ ತಾಯಿ-ಸಹೋದರನಿಗೂ ಸೋಂಕು ತಗಲಿರುವುದು ಖಚಿತವಾಯಿತು. ಹೀಗಾಗಿ ಜಿಲ್ಲೆಯ ಜನತೆ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಸೋಂಕಿತನಾಗಿರುವ ವ್ಯಕ್ತಿ ಜಿಲ್ಲೆಯ ಮೊದಲ ಪಾಸಿಟಿವ್‌ ಆಗಿದ್ದ. ಈತ ದಿಲ್ಲಿಯಿಂದ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದನು. 50 ವರ್ಷದ ಈತನ ತಂದೆ, 40 ವರ್ಷದ ತಾಯಿ ಮತ್ತು 22 ವರ್ಷದ ಸಹೋದರನಲ್ಲಿ ಸೋಂಕು ಪತ್ತೆಯಾಗಿದೆ. 3 ಪಾಸಿಟಿವ್‌ ವರದಿ ಹೊರಬಂದು ವಾರದೊಳಗೆ ಕೋವಿಡ್ 19 ಭಾದಿತರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ.

ಸಂಪರ್ಕದಲ್ಲಿ ಯಾರ್ಯಾರು?
ಹಿರೇಬಾಗೇವಾಡಿಯ ಸೋಂಕು ತಗಲಿದ ಒಂದೇ ಕುಟುಂಬದ ನಾಲ್ವರು ಎಲ್ಲಿಗೆ, ಯಾರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಳೆದ ಶುಕ್ರವಾರವಷ್ಟೇ ಇವರ ಮನೆಯ ವ್ಯಕ್ತಿಗೆ ಸೋಂಕು ದೃಢವಾಗಿತ್ತು. ಈಗ ಮನೆಯ ನಾಲ್ವರಿಗೆ ತಗಲಿದ್ದರಿಂದ ಇವರ ಸಂಪರ್ಕದಲ್ಲಿದ್ದ ಜನರ ಹುಡುಕಾಟದಲ್ಲಿ ಜಿಲ್ಲಾಡಳಿತ ತೊಡಗಿದೆ. ತಂದೆ ಮತ್ತು ಪುತ್ರ ಈರುಳ್ಳಿ ಹಾಗೂ ಆಲೂಗಡ್ಡೆ ವ್ಯಾಪಾರಿಯಾಗಿದ್ದು, ಇವರ ಸಂಪರ್ಕದಲ್ಲಿದ್ದ ಜನರ ಶೋಧ ನಡೆದಿದೆ. ಮಸೀದಿಗೆ ಪ್ರಾರ್ಥನೆಗೆ ತೆರಳಿದ್ದು, ಇವರಿಂದ ಈರುಳ್ಳಿ ಖರೀದಿಸಿದವರು ಯಾರು? ಎಂಬುದರ ಬಗ್ಗೆ ಮಾಹಿತಿಯಲ್ಲಿ ತೊಡಗಿದೆ.

ಹಿರೇಬಾಗೇವಾಡಿ ಸ್ತಬ್ಧ
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಒಟ್ಟು ನಾಲ್ವರಿಗೆ ಕೋವಿಡ್ 19 ಸೋಂಕು ದೃಢವಾಗಿದ್ದರಿಂದ ಗ್ರಾಮ ಸಂಪೂರ್ಣ ಸ್ತಬ್ಧವಾಗಿದೆ. ಈಗಾಗಲೇ ಗ್ರಾಮದ ಓಣಿಗಳಲ್ಲಿ ಜನರು ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಓಣಿಗಳಿಗೆ ಬೇಲಿ ಹಾಕಿಕೊಂಡಿದ್ದಾರೆ. ಜಿಲ್ಲಾಡಳಿತ ನಿಗದಿಪಡಿಸಿದ ಸಮಯದಲ್ಲಿ ಮಾತ್ರ ಜನರು ಹೊರಗೆ ಬಂದು ದಿನಸಿ ಸಾಮಗ್ರಿ, ತರಕಾರಿ ಖರೀದಿಸುತ್ತಿದ್ದಾರೆ. ಸೋಂಕಿತರ ಓಣಿಯಲ್ಲಿ ಯಾರೂ ತಿರುಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next