Advertisement

ಸ್ವ್ಯಾಬ್ ಟೆಸ್ಟ್‌ ನಡೆಸಲು ಎನ್‌ಎಸ್‌ಎಸ್‌ ತಂಡ ಸಿದ್ಧ

10:14 AM Aug 04, 2020 | mahesh |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಶಂಕಿತರ ಸ್ವ್ಯಾಬ್ ಟೆಸ್ಟ್‌ ನಡೆಸಲು (ಗಂಟಲ ದ್ರವ ಪರೀಕ್ಷೆ) ವಿವಿಧ ಕಾಲೇಜು ವಿದ್ಯಾರ್ಥಿಗಳ ತಂಡ ಸಜ್ಜಾಗಿದೆ. ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಈಗಾಗಲೇ ಕೋವಿಡ್ ತಡೆ ಕಾರ್ಯದಲ್ಲಿ ಕಾಲೇಜು ಹಾಗೂ ಸರ್ಕಾರದ ಸೂಚನೆಯಂತೆ ತೊಡಗಿಸಿಕೊಳ್ಳುತ್ತಿದ್ದಾರೆ. ಬಿ.ಎ, ಬಿ.ಕಾಂ, ಬಿಬಿಎಂ, ಬಿಸಿಎ, ಬಿಎಸ್ಸಿ, ಬಿಬಿಎ ಮೊದಲಾದ ಪದವಿ ಹಾಗೂ ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂಬಿಎ ಮೊದಲಾದ ಸ್ನಾತ ಕೋತ್ತರ ಕೋರ್ಸ್‌ಗಳ ವಿದ್ಯಾರ್ಥಿಗಳು ಕೋವಿಡ್ ತಡೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿದ್ದಾರೆ.

Advertisement

ಕಾಲೇಜು ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್‌) ಕೋಶದ ಮೂಲಕ ಕಾಲೇಜುಗಳ ಎನ್‌ಎಸ್‌ಎಸ್‌ ಸಂಯೋಜಕರ ಸಹ ಯೋಗದೊಂದಿಗೆ ಎನ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿರುವ ವಿದ್ಯಾರ್ಥಿಗಳನ್ನು ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆಗಾಗಿ ತೊಡಗಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಸೂಚನೆಯಂತೆ ಈ ಕಾರ್ಯ ನಡೆಯುತ್ತಿದೆ. ರಾಜ್ಯ ಸರ್ಕಾರವೂ ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಹಾಗೂ ಆರ್‌ಟಿಪಿಸಿಆರ್‌ ಹಾಗೂ ಇತರೆ ಪರೀಕ್ಷಾ ವಿಧಾನಗಳನ್ನು ಅಳವಡಿಸಿ ಕೊಂಡು ಸರಾಸರಿ ದಿನಕ್ಕೆ 30 ಸಾವಿರಕ್ಕೂ ಅಧಿಕ ಜನರನ್ನು ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಶಂಕಿತರ ಸ್ವ್ಯಾಬ್‌ ಟೆಸ್ಟ್‌ ಪಡೆಯಲು ಸಿಬ್ಬಂದಿ ಕೊರತೆ ಎದುರಾಗದಂತೆ ವಿದ್ಯಾರ್ಥಿಗಳ ನಿಯೋಜನೆ ಮಾಡಲಾಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ಖಚಿತಪಡಿಸಿದರು.

ಕೋವಿಡ್ ತಡೆ ಕಾರ್ಯಕ್ಕಾಗಿ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ತಂಡ ರಚಿಸಲಾಗಿದೆ. ಆ ತಂಡದ ಸುಮಾರು 300 ವಿದ್ಯಾರ್ಥಿಗಳಿಗೆ ತಿಂಗಳ ತರಬೇತಿ ನೀಡಲಾಗಿದೆ. ಕೋವಿಡ್ ತಡೆ ಕಾರ್ಯದಲ್ಲಿ ಭಾಗವಹಿಸುತ್ತಿರುವುದರಿಂದ ಒತ್ತಡ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ವಾéಬ್‌ ಪರೀಕ್ಷೆಗೆ ಸಂಬಂಧಿಸಿದಂತೆ ಲ್ಯಾಬ್‌ನಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು, ವೈಯಕ್ತಿಕ ಜಾಗೃತಿ ಇತ್ಯಾದಿ ಎಲ್ಲ ಅಂಶಗಳನ್ನು ವೈದ್ಯರೇ ತರಬೇತಿಯಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿ ಗಣನಾಥ ಶೆಟ್ಟಿ ಎಕ್ಕಾರ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿರುವ ವ್ಯಾಪ್ತಿಯಲ್ಲೇ ಕಾರ್ಯ: ಎನ್‌ಎಸ್‌ಎಸ್‌ ಸ್ವಯಂ ಸೇವಕರಿಗೆ ಈಗಾಗಲೇ ತರಬೇತಿ ಮುಗಿದಿದೆ. ಆರಂಭದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಬೆಂಗಳೂರಿನಲ್ಲಿ 300 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಅದರಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳಾದರೂ ಬರಲಿದ್ದಾರೆ. ಅವರ ವಾರ್ಡ್‌ ಅಥವಾ ಸಮೀಪದ ವಾರ್ಡ್‌ನಲ್ಲಿರುವ ಲ್ಯಾಬ್‌ಗಳಿಗೆ ನಿಯೋಜನೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ನಿಯೋಜನೆ ಕಾರ್ಯವನ್ನು ಬಿಬಿಎಂಪಿಯಿಂದಲೇ ಆಗಲಿದೆ. ಈ ವಿದ್ಯಾರ್ಥಿಗಳ ಆರೋಗ್ಯ ಮತ್ತು ಅವರ ಕುಟುಂಬದ ಆರೋಗ್ಯದ ಬಗ್ಗೆ ಬಿಬಿಎಂಪಿ ಕಾಳಜಿ ವಹಿಸಲಿದೆ ಎಂದು ವಿವರ ನೀಡಿದರು.

ಜಿಲ್ಲೆಗಳಿಗೂ ಸೂಚನೆ: ಸದ್ಯ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಸ್ಯಾಬ್‌ ಟೆಸ್ಟ್‌ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿಯೂ ಸ್ವಯಂಸೇವಕರ ಅವ ಶ್ಯಕತೆ ಬರ ಬಹುದು. ಹೀಗಾಗಿ ಎಲ್ಲ ವಿವಿ ಗಳ ಸಂಯೋಜಕರಿಗೆ ಹಾಗೂ ಜಿಲ್ಲಾಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಇದಕ್ಕಾಗಿ ಪ್ರತ್ಯೇಕ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಆಗಸ್ಟ್ ‌ಅಂತ್ಯದವರೆಗೂ ಶಾಲೆ ತೆರೆಯುವಂತಿಲ್ಲ
ಬೆಂಗಳೂರು: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಅಗತ್ಯ ಮುಂಜಾಗೃತಾ ಕ್ರಮವಾಗಿ ಆ.31ರವರೆಗೂ ಶಾಲೆಗಳನ್ನು ತೆರೆಯಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲ ಶಾಲಾ, ಕಾಲೇಜು, ವಿವಿಧ ಶಿಕ್ಷಣ ಸಂಸ್ಥೆ ಹಾಗೂ ತರಬೇತಿ ಸಂಸ್ಥೆಗಳು ಆ.31ರವರೆಗೂ ತೆರೆಯುವಂತಿಲ್ಲ. ಹೀಗಾಗಿ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಅಲ್ಲಿಯವರೆಗೆ ಮುಚ್ಚಬೇಕು ಎಂದು ನಿರ್ದೇಶನ ನೀಡಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆಸುವುದು ಅಥವಾ ಬೇರೆ ಯಾವುದೇ ವಿಷಯಕ್ಕಾಗಿ ಶಾಲೆಗಳಲ್ಲಿ ಮಕ್ಕಳನ್ನು ಗುಂಪುಗೂಡುವಂತೆ ಮಾಡುವುದು ಸರಿಯಲ್ಲ. ಪುಸ್ತಕ ವಿತರಣೆ ಅಥವಾ ದಾಖಲಾತಿಗೆ ಪಾಲಕರು ಅಥವಾ ಪೋಷಕರನ್ನು ಕರೆಸಿ ಮುಂದುವರಿಸಬೇಕು. ಈ ಸಂಬಂಧ ಜಿಲ್ಲಾ ಉಪನಿರ್ದೇಶಕರು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾಡಳಿತ ಮಂಡಳಿಗಳು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.

ಸ್ವಯಂ ಸೇವಕರ ಸಾಮಾಜಿಕ ಕಾಳಜಿ, ಎಲ್ಲರಿಗೂ ಪ್ರೇರಣೆಯಾಗಲಿದೆ. ಲ್ಯಾಬ್‌ ಟೆಸ್ಟ್‌ಗೆ ಸಂಬಂಧಿಸಿದಂತೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಕೊರೊನಾ ತಡೆಗಟ್ಟಲು ಎನ್‌ಎಸ್‌ಎಸ್‌ ಘಟಕದಿಂದ ಅನೇಕ ರೀತಿಯ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ.
ಡಾ.ವಸಂತ ಶೆಟ್ಟಿ, ಎನ್‌ಎಸ್‌ಎಸ್‌ ಅಧಿಕಾರಿ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next