ಬೆಂಗಳೂರು: ನೃಪತುಂಗ ರಸ್ತೆ ಮೂಲಕ ಹಾದುಹೋಗುವವರಿಗೆ ಸೋಮವಾರದಿಂದ ಈ ಮಾರ್ಗದ ಪ್ರಯಾಣ ಪ್ರಯಾಸದಾಯಕ ಆಗಲಿದೆ. ಯಾಕೆಂದರೆ ಟೆಂಡರ್ ಶ್ಯೂರ್ ಯೋಜನೆ ಹಿನ್ನೆಲೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಸುಮಾರು ಎರಡು ತಿಂಗಳ ಕಾಲ ನೃಪತುಂಗ ರಸ್ತೆಯಲ್ಲಿ ವಾಹನಸಂಚಾರವೇ ಭಾಗಶಃ ಸ್ಥಗಿತಗೊಳ್ಳಲಿದೆ.
14 ಮೀಟರ್ ವಿಸ್ತೀರ್ಣದ ಈ ರಸ್ತೆಯಲ್ಲಿ ಮೊದಲ ಹಂತದಲ್ಲಿ 7 ಮೀಟರ್ ರಸ್ತೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಉಳಿದರ್ಧ ರಸ್ತೆಯಲ್ಲಿ ಕೇವಲ ಸರ್ಕಾರಿ ಬಸ್‌ಗಳು ಹಾಗೂ ಆ ಮಾರ್ಗದಲ್ಲೇ ಇರುವ ಕಚೇರಿಗಳಿಗೆ ತೆರಳುವ ವಾಹನಗಳಿಗೆ ಮಾತ್ರ ಅವಕಾಶ ಇರಲಿದೆ.
ಉಳಿದ ವಾಹನಗಳಿಗೆ ಕಬ್ಬನ್ ಉದ್ಯಾನದ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ರಸ್ತೆಗೆ ಸುಮಾರು 30 ವರ್ಷಗಳವರೆಗೆ ಹಾಳಾಗದಂತೆ ಕಾಂಕ್ರಿಟ್ ಮೇಲುಹೊದಿಕೆ ಹಾಕುವ ಕಾರಣ ಸಾರ್ವಜನಿಕರು, ಈ ಅಲ್ಪಾವಧಿ ಸಮಸ್ಯೆ ಸಹಿಸಿಕೊಂಡು ಸಹಕರಿಸಬೇಕು ಎಂದು ಅವರು ಮನವಿ ಮಾಡುತ್ತಾರೆ.
ಆದರೆ, ಈ ರಸ್ತೆಯಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತಿದ್ದು, ಅವುಗಳೆಲ್ಲ ಕಬ್ಬನ್ ಉದ್ಯಾನದ ಮೂಲಕ ಹಾದುಹೋಗಲು ಅವಕಾಶ ಮಾಡಿಕೊಟ್ಟರೆ ಉದ್ಯಾನದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗಬಹುದು. ಆದ್ದರಿಂದ ಲಘುವಾಹನಗಳಿಗೆ ಮಾತ್ರ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಭಾರಿ ವಾಹನಗಳು ಕೂಡ ಬಹುತೇಕ ಇದೇ ನೃಪತುಂಗ ರಸ್ತೆಯಲ್ಲಿ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.
ಸಂಚಾರ ವ್ಯವಸ್ಥೆ ಹೇಗೆ?
ಕೆ.ಆರ್. ವೃತ್ತದಿಂದ ನೇರವಾಗಿ ಕಬ್ಬನ್ ಪಾರ್ಕ್ ಪ್ರವೇಶಿಸಲಿರುವ ವಾಹನಗಳು ಸೆಂಚುರಿ ಕ್ಲಬ್, ಕೇಂದ್ರ ಗ್ರಂಥಾಲಯ ಕಚೇರಿ ಮೂಲಕ ಹಡ್ಸನ್ ವೃತ್ತವನ್ನು ಸೇರಲಿದೆ. ಸದ್ಯ ಈ ರಸ್ತೆಯಲ್ಲಿ ಹಡ್ಸನ್ ವೃತ್ತದಿಂದ ಹೈಕೋರ್ಟ್ ಕಡೆಗೆ ಏಕಮುಖ ಸಂಚಾರವಿದೆ. ಸೋಮವಾರದಿಂದ ಈ ಏಕಮುಖ ಸಂಚಾರದ ದಿಕ್ಕು ಬದಲಾಗಲಿದೆ. ಹಡ್ಸನ್ ವೃತ್ತದ ಕಡೆಯಿಂದ ಕಬ್ಬನ್ ಪಾರ್ಕ್ ಪ್ರವೇಶಿಸಲು ವಾಹನಗಳಿಗೆ ಅವಕಾಶ ಇರುವುದಿಲ್ಲ. ಕೇಂದ್ರ ಗ್ರಂಥಾಲಯ ಕಚೇರಿ ಮುಂಭಾಗದಲ್ಲಿ ವಕೀಲರಿಗೆ ಒದಗಿಸಲಾಗಿರುವ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆಯನ್ನು ಸೋಮವಾರದಿಂದ ಬನ್ನಪ್ಪ ಪಾರ್ಕ್‌ಗೆ ಸ್ಥಳಾಂತರ ಮಾಡಲಾಗುತ್ತದೆ.