Advertisement

ಈ ಸರ್ಕಾರಿ ಶಾಲೆ ಪಾರಂಪರಿಕ ತಾಣ!

03:43 PM Apr 25, 2019 | Team Udayavani |

ಎನ್‌.ಆರ್‌.ಪುರ: 1889ರ ಬ್ರಿಟಿಷರ ಕಾಲದಲ್ಲಿ ತಾಲೂಕು ಕೇಂದ್ರದಲ್ಲಿ ಸ್ಥಾಪಿತವಾಗಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಪಾರಂಪರಿಕ ಸ್ಥಾನ ದೊರೆತಿದೆ.

Advertisement

ಐತಿಹಾಸಿಕ ಸರ್ಕಾರಿ ಶಾಲೆಗೆ 2018-19ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ನೂರು ವರ್ಷ ಪೂರೈಸಿದ 100 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ‘ಪಾರಂಪರಿಕ ಶಾಲೆ’ಗಳು ಎಂದು ಗುರುತಿಸಿ ಸೂಕ್ತ ಸ್ಥಾನಮಾನ ನೀಡಿದೆ. ಅದರ ಜೊತೆಯಲ್ಲಿ ಇಂತಹ ಐತಿಹಾಸಿಕ ಶಾಲೆಗಳನ್ನು ಸಂರಕ್ಷಿಸಲು, ಶಾಲಾ ಕಟ್ಟಡ ದುರಸ್ತಿ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗಾಗಿ ಪ್ರತಿ ಶಾಲೆಗಳಿಗೆ 2.50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ.

ಹಲವರು ಏರಿದ್ದಾರೆ ಉನ್ನತ ಹುದ್ದೆ: ತಾಲೂಕು ಕೇಂದ್ರದಲ್ಲಿ 1889ರ ಬ್ರಿಟಿಷರ ಕಾಲದಲ್ಲಿ ಸ್ಥಾಪಿತವಾಗಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠ ಶಾಲೆ ಇಂದಿಗೂ ಅಧಿಕ ಮಕ್ಕಳ ದಾಖಲಾತಿಗಳೊಂದಿಗೆ ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲದಂತೆ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ಅಲ್ಲದೆ ಈಗ ಈ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಕೂಡ ಪ್ರಾರಂಭಿಸಲಾಗಿದೆ. ಇಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ವಿಮಾನ ಪೈಲೆಟ್ ಆಗಿ, ಹಿರಿಯ ರಾಜಕಾರಿಣಿಯಾಗಿದ್ದಾರೆ. ಮಾಜಿ ಸಚಿವ ಡಿ.ಎನ್‌.ಜೀವರಾಜ್‌ ಕೂಡ ಇದೇ ಶಾಲೆಯಲ್ಲಿಯೇ ಓದಿದ್ದಾರೆ.

ಶಾಲೆಯಲ್ಲಿ ಓದಿದ ಮಾಜಿ ವಿಧಾನ ಪರಿಷತ್‌ ಸದಸ್ಯ ಎಂ. ಶ್ರೀನಿವಾಸ್‌ರವರು ಹುಟ್ಟೂರಿನ ತಾನು ಓದಿದ ಶಾಲೆಯ ಬಗ್ಗೆ ಕಾಳಜಿವಹಿಸಿ ತನ್ನ ನೇತೃತ್ವದಲ್ಲಿ ಹಳೇ ವಿದ್ಯಾರ್ಥಿ ಸಂಘ ಹುಟ್ಟು ಹಾಕಿದರು. ನಂತರ ಅವರ ಅವಧಿಯಲ್ಲಿಯೇ ಈ ಶಾಲೆಗೆ 8.50 ಲಕ್ಷ ರೂ. ಅನುದಾನ ತಂದು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾದರು. ಈ ಅನುದಾನದಲ್ಲಿಯೇ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡಿ ಶತಮಾನೋತ್ಸವ ಸಮಾರಂಭವನ್ನೂ ಅದ್ಧೂರಿಯಾಗಿ ಆಚರಿಸಲಾಯಿತು.

ಶಾಲೆ ಆಯ್ಕೆ ಊರಿಗೆ ಹೆಮ್ಮೆ
ಈ ಪಾರಂಪರಿಕ ಶಾಲೆಗಳಿಗೆ ಆಯ್ಕೆಯಾದ ಚಿಕ್ಕಮಗಳೂರು ಜಿಲ್ಲೆಯ ಎರಡು ಶಾಲೆಗಳಲ್ಲಿ ಎನ್‌.ಆರ್‌.ಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯೂ ಒಂದಗಿರುವುದು ಊರಿಗೆ ಹೆಮ್ಮೆ ಎನಿಸುತ್ತಿದೆ ಎನ್ನುತ್ತಾರೆ ಈ ಶಾಲೆಯಲ್ಲಿ ಓದಿ ಪೈಲೆಟ್ ಆಗಿ, ನಿವವೃತ್ತಿ ಹೊಂದಿರುವ ಶಾಲೆಯ ಹಳೆ ವಿದ್ಯಾರ್ಥಿ ನಿವೃತ್ತ ವಿಂಗ್‌ ಕಮಾಂಡರ್‌ ಜೇಮ್ಸ್‌ ಟಿ.ವರ್ಗೀಸ್‌.

Advertisement

ಈ ತಾಲೂಕಿಗೂ ಮೈಸೂರು ರಾಜರಿಗೂ ಅವಿನಾಭಾವ ಸಂಬಂಧವಿದೆ. ಎಡೆಹಳ್ಳಿ ಎಂಬ ಈ ಊರಿಗೆ ಬರಗಾಲ ಬಂದೊದಗಿದಾಗ ಆಗಿನ ಮೈಸೂರು ರಾಜರಾಗಿದ್ದ ಕಂಠೀರವ ನರಸಿಂಹರಾಜ ಒಡೆಯರು ಈ ತಾಲೂಕಿಗೆ ಭೇಟಿಯನ್ನಿತ್ತು, ಸಾರ್ವಜನಿಕರಿಗ ಉಪಯೋಗಕ್ಕಾಗಿ ಗ್ರಂಥಾಲಯ ಕಟ್ಟಡವನ್ನೂ ಉದ್ಘಾಟಿಸಿದ ದಾಖಲೆಗಳಿವೆ. ಇಂದಿಗೂ ಈ ಐತಿಹಾಸಿಕ ಗ್ರಂಥಾಲಯ ಪ.ಪಂ. ಮುಂಭಾಗದಲ್ಲಿದೆ.

ಮೈಸೂರು ರಾಜರ ಪಾದಾರ್ಪಣೆಯ ನಂತರ ತಾಲೂಕಿನಲ್ಲಿ ಉತ್ತಮ ಮಳೆ, ಬೆಳೆಯಾಯಿತು. ನಂತರ ಎಡೆಹಳ್ಳಿಗೆ ನರಸಿಂಹರಾಜಪುರ ಎಂದು ನಾಮಕರಣ ಮಾಡಲಾಯಿತು ಎನ್ನುತ್ತಾರೆ ಮೈಸೂರು ಮಹಾರಾಜರ ಸಹಪಾಠಿ ಎಂ.ಎನ್‌. ಮರುಳಪ್ಪನವರು.

ಈ ಸರ್ಕಾರಿ ಶಾಲೆಯಲ್ಲಿಯೇ ನಾನು ಓದಿದ್ದು, ಈ ಶಾಲೆ ಹಲವಾರು ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಟ್ಟಿದೆ. ನಾವು ಓದಿದ ಈ ಶಾಲೆಗೆ ಪಾರಂಪರಿಕ ಶಾಲೆಯ ಸ್ಥಾನಮಾನ ದೊರೆತಿರುವುದು ಸಂತಸ ತಂದಿದೆ. ಈ ಶಾಲೆಯ ಅಭಿವೃದ್ಧಿಗೆ ನಾನು ಸಹಕಾರ ನೀಡುತ್ತೇನೆ. ಈ ಶಾಲೆಯಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ಸೈನಿಕರಾಗಿದ್ದಾರೆ, ಪತ್ರಕರ್ತರಾಗಿದ್ದಾರೆ, ರಾಜಕರಾಣಿಗಳಾಗಿದ್ದಾರೆ, ವಿಜ್ಞಾನಿಗಳೂ ಆಗಿದ್ದಾರೆ ಒಟ್ಟಾರೆಯಾಗಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಪಾಠ ಶಾಲೆಗೆ ಪಾರಂಪರಿಕ ಶಾಲೆಯ ಸ್ಥಾನ ದೊರೆತಿರುವುದು ಊರಿಗೆ ಹೆಮ್ಮೆಯ ವಿಷಯವಾಗಿದೆ.
•ಎಂ. ಶ್ರೀನಿವಾಸ್‌, ಮಾಜಿ ಎಂಎಲ್ಸಿ

130 ವರ್ಷಗಳ ವಸಂತ‌ ಕಂಡ ಈ ಶಾಲೆ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಆಗಿದೆ. ಹಳೆಯ ಕಟ್ಟಡವನ್ನು ಯಥಾವತ್ತಾಗಿ ಸಂರಕ್ಷಿಸಲು ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ನಾಗರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಶಾಂತ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next