Advertisement

ಎನ್‌ಪಿಆರ್‌: ನಿಮಗೆ ತಿಳಿದಿರಲೇಬೇಕಾದ ಮಾಹಿತಿ

11:16 AM Dec 26, 2019 | mahesh |

ಕೇಂದ್ರ ಕ್ಯಾಬಿನೆಟ್‌ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಎನ್‌ಪಿಆರ್‌(ನ್ಯಾಷನಲ್‌ ಪಾಪುಲೇಷನ್‌ ರೆಜಿಸ್ಟರ್‌)ಯನ್ನು ಪರಿಷ್ಕರಿಸಲು ಅನುದಾನ ಮಂಜೂರು ಮಾಡಿದೆ. ಮುಂದಿನ ವರ್ಷದ ಎಪ್ರಿಲ್‌ನಿಂದ ಸೆಪ್ಟೆಂಬರ್‌ ತಿಂಗಳವರೆಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಎನ್‌ಪಿಆರ್‌ ಎನ್ನುವುದು ದೇಶದ “ಸಾಮಾನ್ಯ ನಿವಾಸಿಗಳ’ ಪಟ್ಟಿ. ಈ ಕುರಿತ ದತ್ತಾಂಶಗಳನ್ನು ಮನೆ ಮನೆ ಸಮೀಕ್ಷೆ ಮೂಲಕ 2015ರಲ್ಲಿ ಪರಿಷ್ಕರಿಸಲಾಗಿತ್ತು. ಈ ದತ್ತಾಂಶದ ಡಿಜಿಟಲ್‌ ದಾಖಲೀಕರಣವೂ ಪೂರ್ಣಗೊಂಡಿದೆ. ಈಗ 2021ರ ಜನಗಣತಿಯ ಜತೆ ಜತೆಗೇ ಅಸ್ಸಾಂ ಅನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್‌ಪಿಆರ್‌ ಕೂಡ ನಡೆಯಲಿದೆ. ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆ ಆಗಿರುವುದರಿಂದ, ಅಲ್ಲಿ ಎನ್‌ಪಿಆರ್‌ ಕೈಗೊಳ್ಳಲಾಗುತ್ತಿಲ್ಲ.

Advertisement

ಏನಿದು ಎನ್‌ಪಿಆರ್‌?
ಎನ್‌ಪಿಆರ್‌ ಎನ್ನುವುದು ಸ್ಥಳೀಯ ಮಟ್ಟದಲ್ಲಿ (ಗ್ರಾಮ-ಉಪಪಟ್ಟಣ), ಜಿಲ್ಲೆಗಳು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತಯಾರಾಗುವ ದೇಶದ ನಿವಾಸಿಗಳ ನೋಂದಣಿ ಪಟ್ಟಿಯಾಗಿದೆ. ಇದು 1955ರ ನಾಗರಿಕ ಕಾಯ್ದೆ ಮತ್ತು ಪೌರತ್ವ(ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ) ಕಾಯ್ದೆ 2003ರ ಅಡಿಯಲ್ಲಿ ಬರುತ್ತದೆ. ದೇಶದ ಸಾಮಾನ್ಯ ನಿವಾಸಿಗಳು ಎನ್‌ಪಿಆರ್‌ನಲ್ಲಿ ನೋಂದಣಿಯಾಗುವುದು ಕಡ್ಡಾಯ.

ಸಾಮಾನ್ಯ ನಿವಾಸಿಗಳೆಂದರೆ ಯಾರು?
ಇಲ್ಲಿ ಸಾಮಾನ್ಯ ನಿವಾಸಿಗಳು ಎಂಬ ಪದಕ್ಕೆ ನಿರ್ದಿಷ್ಟ ಅರ್ಥವಿದೆ. ಒಬ್ಬ ವ್ಯಕ್ತಿ ಒಂದು ಸ್ಥಳದಲ್ಲಿ ಆರು ತಿಂಗಳು ಅಥವಾ ಅದಕ್ಕಿಂತ ಅಧಿಕ ಸಮಯ ವಾಸವಾಗಿದ್ದರೆ, ಇಲ್ಲವೆ, ಮುಂದಿನ ಆರು ತಿಂಗಳು ಅಥವಾ ಅದಕ್ಕಿಂತ ಅಧಿಕ ಸಮಯ ವಾಸಿಸಲು ನಿರ್ಧರಿಸಿದ್ದರೆ ಆತನನ್ನು ಯೂಷುವಲ್‌ ರೆಸಿಡೆಂಟ್‌(ಸಾಮಾನ್ಯ ನಿವಾಸಿ) ಎನ್ನಲಾಗುತ್ತದೆ.

ಎನ್‌ಪಿಆರ್‌ನ ಉದ್ದೇಶವೇನು?
ದೇಶದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯ ಸಮಗ್ರ ಡೇಟಾಬೇಸ್‌(ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿದ ದತ್ತಾಂಶ) ಸೃಷ್ಟಿಸುವ ಉದ್ದೇಶ ಇದರ ಹಿಂದೆ ಇದೆ.

ಜನಗಣತಿಗೂ ಎನ್‌ಪಿಆರ್‌ಗೂ ಇರುವ ವ್ಯತ್ಯಾಸವೇನು?
ಇವೆರಡರ ನಡುವೆ ಬಹಳ ಅಂತರವಿದೆ. ಜನಗಣತಿಯಲ್ಲಿನ ಮಾಹಿತಿಯ ಸಂಗ್ರಹವು
ವಿಸ್ತೃತವಾಗಿ ಇರುತ್ತದೆ. 2011ರ ಜನಗಣತಿಯಲ್ಲಿ ಒಟ್ಟು 29 ಅಂಶಗಳಿಗೆ ಉತ್ತರಿಸಬೇಕಿತ್ತು. ವ್ಯಕ್ತಿಯ ವಯಸ್ಸು, ಲಿಂಗ, ಮದುವೆ ಆಗಿದೆಯೋ ಇಲ್ಲವೋ, ಮಕ್ಕಳು, ಉದ್ಯೋಗ,
ಜನ್ಮಸ್ಥಳ, ಅಂಗವೈಕಲ್ಯ, ಮಾತೃಭಾಷೆ, ಧರ್ಮ, ಎಸ್‌ಸಿ/ಎಸ್‌ಟಿಗೆ ಸೇರಿದ್ದಾರೆಯೇ
ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಅದಕ್ಕೆ ಪೂರಕ ದಾಖಲೆ ತೋರಿಸಬೇಕಾಗುತ್ತದೆ. ಇನ್ನೊಂದೆಡೆ ಎನ್‌ಪಿಆರ್‌ನಲ್ಲಿ ಈ ಎಲ್ಲಾ ಅಂಶಗಳನ್ನು ಕೇಳಲಾಗುವುದಿಲ್ಲ. ಒಬ್ಬ ವ್ಯಕ್ತಿ ಒಂದು ಸ್ಥಳದಲ್ಲಿ ಆರು ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಸಮಯದಿಂದ ಇದ್ದಾನೆೆಯೇ, ಮುಂದೆ ಆರು ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿ ಇರಲು ಇಚ್ಛಿಸುತ್ತಿದ್ದಾನೆಯೇ ಎನ್ನುವ ವಿವರವನ್ನಷ್ಟೇ ಪಡೆಯಲಾಗುತ್ತದೆ. ಅದೂ ಮೌಖೀಕವಾಗಿ. “ನೀವು ಏನು ಹೇಳುತ್ತೀರೋ ಅದನ್ನೆ ಬರೆದುಕೊಳ್ಳಲಾಗುತ್ತದೆ. ಬಯೋಮೆಟ್ರಿಕ್‌ ಅಥವಾ ಯಾವುದೇ ದಾಖಲೆಯನ್ನೂ ಒದಗಿಸುವ ಅಗತ್ಯ ಇರುವುದಿಲ್ಲ ‘ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

Advertisement

ಎನ್‌ಪಿಆರ್‌ ಮತ್ತು ಸೆನ್ಸಸ್‌ ಏಕೆ ಬೇಕು?
ದೇಶದಲ್ಲಿ ಎಷ್ಟು ನಾಗರಿಕರಿದ್ದಾರೆ, ಸಾಮಾನ್ಯ ನಿವಾಸಿಗಳಿದ್ದಾರೆ ಎನ್ನುವ ದತ್ತಾಂಶವಿದ್ದರೆ, ಅದಕ್ಕೆ ಪೂರಕವಾಗಿ ಸರಕಾರಗಳಿಗೆ ಆರ್ಥಿಕ ನೀತಿಗಳನ್ನು, ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಇವೆರಡೂ ದತ್ತಾಂಶಗಳಿಂದ ದೇಶವಾಸಿಗಳಲ್ಲಿನ ಒಳ ಚಲನೆ, ಜನನ-ಮರಣ ಪ್ರಮಾಣದಲ್ಲಿನ ಏರಿಳಿತದಂಥ ವಿವರಗಳು ಸಿಗುತ್ತವೆ.

ಎನ್‌ಪಿಆರ್‌ಗಿಂತಲೂ ಜನಗಣತಿಯ ಮಾಹಿತಿ ಹೆಚ್ಚು ಉಪಯುಕ್ತವಾದದ್ದು. ಪ್ರತಿ ಹತ್ತುವರ್ಷಕ್ಕೊಮ್ಮೆ ಜನಗಣತಿ ನಡೆಯುವುದರಿಂದಾಗಿ, ಒಂದು ದಶಕದಲ್ಲಿ ದೇಶದ ಪ್ರಗತಿ ಹೇಗಿದೆ, ಸರ್ಕಾರದ ಯೋಜನೆಗಳು ಫ‌ಲಾನುಭವಿಗಳಿಗೆ ತಲುಪುತ್ತಿವೆಯೇ, ಇಲ್ಲವೇ ಎನ್ನುವುದರಿಂದ ಹಿಡಿದು, ಭವಿಷ್ಯಕ್ಕೂ ಯೋಜನೆ ರೂಪಿಸಲು ಜನಗಣತಿ ಸಹಾಯಕ.

ಜನಗಣತಿಯು ಆರ್ಥಿಕ ಚಟುವಟಿಕೆ, ಸಾಕ್ಷರತೆ, ಶಿಕ್ಷಣ, ವಾಸ, ಮೂಲಸೌಲಭ್ಯಗಳು, ನಗರೀಕರಣ, ಜನನ ಮತ್ತು ಮರಣ ಪ್ರಮಾಣ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ವಿವರವಾದ ಮಾಹಿತಿ ಒಳಗೊಂಡಿರುತ್ತದೆ. ಇದಷ್ಟೇ ಅಲ್ಲದೇ ಮಾಹಿತಿ ಸಂಗ್ರಾಹಕರು ಕೃಷಿ ಕಾರ್ಮಿಕರ ಬಗ್ಗೆ, ಉದ್ಯಮಗಳಲ್ಲಿ, ವ್ಯವಹಾರಗಳಲ್ಲಿನ ಕೆಲಸಗಾರರು, ಅವರಲ್ಲಿ ಮಹಿಳೆಯಪುರುಷರೆಷ್ಟು ಎನ್ನುವ ಸಂಗತಿಗಳನ್ನೆಲ್ಲ ಸಂಗ್ರಹಿಸುತ್ತಾರೆ. ಲಿಂಗ ಮತ್ತು ಸಾಕ್ಷರತೆಯ ಪ್ರಮಾಣ, ಪಟ್ಟಣಗಳು-ಸ್ಲಂಗಳು ಮತ್ತು ಅವುಗಳಲ್ಲಿನ ಜನಸಂಖ್ಯೆಯ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರ ಜತೆಜತೆಯಲ್ಲೇ ಕುಡಿಯುವ ನೀರು, ವಿದ್ಯುತ್ಛಕ್ತಿ, ಕೃಷಿ ವಿಧಾನಗಳು ಇತ್ಯಾದಿ ವಿಚಾರಗಳ ಬಗ್ಗೆಯೂ ಜನಗಣತಿಯಲ್ಲಿ ಮಾಹಿತಿ ಸಂಗ್ರಹವಾಗುತ್ತದೆ.

ಏನೆಲ್ಲ ಮಾಹಿತಿ ಒದಗಿಸಬೇಕು
ಯುಪಿಎ ಸರಕಾರದ ಅವಧಿಯಲ್ಲಿ, 2010ರಲ್ಲಿ ನಡೆದ ಎನ್‌ಪಿಆರ್‌ನಲ್ಲಿ 15 ಅಂಶಗಳ ಆಧಾರದ ಮೇಲೆ ರಾಷ್ಟ್ರೀಯ ಸಾಮಾನ್ಯ ನಿವಾಸಿ ದತ್ತಾಂಶವನ್ನು ಕಲೆಹಾಕಲಾಗಿತ್ತು. ಈ ಬಾರಿ 21 ಅಂಶಗಳ ಆಧಾರದಲ್ಲಿ ಮಾಹಿತಿ ಕಲೆಹಾಕಲಾಗುತ್ತದೆ. ಈ 21 ಅಂಶಗಳಲ್ಲಿ “ಅಪ್ಪ-ಅಮ್ಮನ ಜನನ ಸ್ಥಳ ಹಾಗೂ ಜನ್ಮದಿನಾಂಕ’ ಹಾಗೂ “ಈ ಹಿಂದೆ ವಾಸವಾಗಿದ್ದ ಸ್ಥಳದ’ ಬಗ್ಗೆ ಮೌಖೀಕವಾಗಿ ಮಾಹಿತಿ ಕಲೆಹಾಕಲಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ, 2010ರ ಎನ್‌ಪಿಆರ್‌ನಲ್ಲಿ ಅಪ್ಪ-ಅಮ್ಮನ ಜನ್ಮಸ್ಥಳ ಹಿಂದೆ ವಾಸವಾಗಿದ್ದ ಸ್ಥಳದ ಬಗ್ಗೆ ಮಾಹಿತಿ ಕಲೆಹಾಕಿರಲಿಲ್ಲ.

ಎನ್‌ಪಿಆರ್‌ ಎನ್ನುವುದು ಸಾಮಾನ್ಯ ನಿವಾಸಿಗಳ ದಾಖಲೆಯೇ ಹೊರತು, ಪೌರತ್ವ ದಾಖಲೆ ಅಲ್ಲ.
ದಾಖಲೆಗಳನ್ನು ಸಲ್ಲಿಸಬೇಕೇ? : ಇಲ್ಲ
ಎನ್‌ಪಿಆರ್‌ಗೂ ಪೌರತ್ವ ಕಾಯ್ದೆಗೂ ಸಂಬಂಧ ಇದೆಯೇ?: ಇಲ್ಲ

ಯಾವಾಗ ಆರಂಭ?
2020ರ ಏಪ್ರಿಲ್‌ ಮತ್ತು ಸೆಪ್ಟೆಂಬರ್‌ ತಿಂಗಳ ನಡುವೆ

ಹಿಂದೆ ಯಾವಾಗ ನಡೆದಿತ್ತು?
2011ರ ಜನಗಣತಿಗಾಗಿ 2010ರಲ್ಲಿ ಮನೆಮನೆ ಸಮೀಕ್ಷೆ ನಡೆಯುತ್ತಿದ್ದಾಗ ಎನ್‌ಪಿಆರ್‌ ಮಾಹಿತಿ ಸಂಗ್ರಹಿಸಲಾಗಿತ್ತು. 2015ರಲ್ಲಿ ಈ ದಾಖಲೆಗಳನ್ನು ಪರಿಷ್ಕರಿಸಿ, ಡಿಜಿಟಲೀಕರಣಗೊಳಿಸಲಾಯಿತು.

ಎನ್‌ಪಿಆರ್‌ ಪರಿಷ್ಕರಣಕ್ಕೆ ಕೇಂದ್ರ ಕ್ಯಾಬಿನೆಟ್‌ 3941.35 ಕೋಟಿ ಹಾಗೂ 2021ರ ಜನಗಣತಿಗೆ 8754.23 ಕೋಟಿ ರೂಪಾಯಿ ವಿನಿಯೋಗಕ್ಕೆ ಅನುಮತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next