Advertisement

ಜೊಕೋವಿಕ್‌ ಯುಎಸ್‌ ಸಾಮ್ರಾಟ

06:00 AM Sep 11, 2018 | Team Udayavani |

ನ್ಯೂಯಾರ್ಕ್‌: ಸರ್ಬಿಯಾದ ನೊವಾಕ್‌ ಜೊಕೋವಿಕ್‌ 3ನೇ ಬಾರಿಗೆ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಮೇಲೆ ತಮ್ಮ ಹಕ್ಕು ಚಲಾಯಿಸಿದ್ದಾರೆ. ರವಿವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು ಆರ್ಜೆಂಟೀನಾದ ಅಪಾಯಕಾರಿ ಟೆನಿಸಿಗ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ವಿರುದ್ಧ 6-3, 7-6 (7-4), 6-3 ಅಂತರದ ನೇರ ಸೆಟ್‌ಗಳ ಜಯ ಸಾಧಿಸಿದರು.

Advertisement

ವಿಶ್ವದ ಮಾಜಿ ನಂ.1 ಟೆನಿಸಿಗನಾಗಿರುವ ನೊವಾಕ್‌ ಜೊಕೋವಿಕ್‌ ನ್ಯೂಯಾರ್ಕ್‌ನಲ್ಲಿ ಆಡಿದ 8ನೇ ಫೈನಲ್‌ ಇದಾಗಿತ್ತು. ಇದಕ್ಕೂ ಮುನ್ನ ಅವರು 2011 ಹಾಗೂ 2015ರಲ್ಲಿ ಪ್ರಶಸ್ತಿ ಎತ್ತಿದ್ದರು. ಒಟ್ಟಾರೆಯಾಗಿ ಇದು ಜೊಕೋ ಪಾಲಾದ 14ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ. ಇದರೊಂದಿಗೆ ಅವರು ಅಮೆರಿಕದ ಪೀಟ್‌ ಸಾಂಪ್ರಸ್‌ ದಾಖಲೆಯನ್ನು ಸರಿದೂಗಿಸಿದರು.

ಸದ್ಯ ಜೊಕೋವಿಕ್‌ ಸಮಕಾಲೀನ ಟೆನಿಸಿಗರಾದ ರಫೆಲ್‌ ನಡಾಲ್‌ ಅವರಿಗಿಂತ 3, ರೋಜರ್‌ ಫೆಡರರ್‌ ಅವರಿಗಿಂತ 6 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಹಿನ್ನಡೆಯಲ್ಲಿದ್ದಾರೆ. ಕಳೆದ ವರ್ಷ ಗಾಯಾಳಾಗಿ ಯುಎಸ್‌ ಓಪನ್‌ ಕೂಟದಿಂದ ದೂರ ಸರಿದಿದ್ದ ಜೊಕೋವಿಕ್‌, ಈ ವರ್ಷ ಸತತ 2 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಇದಕ್ಕೂ ಮುನ್ನ ವಿಂಬಲ್ಡನ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು.

ವಿಶ್ವದ ನಂ.3 ಆಟಗಾರನಾಗಿರುವ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಪಾಲಿಗೆ ಇದು ಕೇವಲ 2ನೇ ಗ್ರ್ಯಾನ್‌ಸ್ಲಾಮ್‌ ಆಗಿತ್ತು. ಇದಕ್ಕೂ ಮುನ್ನ 2009ರಲ್ಲಿ ನ್ಯೂಯಾರ್ಕ್‌ ಓಪನ್‌ನಲ್ಲೇ ಮೊದಲ ಸಲ ಪ್ರಶಸ್ತಿ ಸುತ್ತಿಗೆ ಏರಿದ್ದ ಅವರು ಚಾಂಪಿಯನ್‌ ಆಗಿ ಮೂಡಿಬಂದಿದ್ದರು.
 
ಪ್ರತಿಕೂಲ ಹವಾಮಾನದಲ್ಲಿ ಫೈನಲ್‌
ನ್ಯೂಯಾರ್ಕ್‌ನಲ್ಲಿ ಸುರಿದ ಭಾರೀ ಮಳೆ ಯಿಂದಾಗಿ ಫೈನಲ್‌ ಪಂದ್ಯಕ್ಕೆ ಪ್ರತಿಕೂಲ ಹವಾಮಾನದ ಭೀತಿ ಎದುರಾಗಿತ್ತು. ಹೀಗಾಗಿ “ಆರ್ಥರ್‌ ಆ್ಯಶ್‌ ಸ್ಟೇಡಿಯಂ’ನ ಮೇಲ್ಛಾವಣಿ ಯನ್ನು ಮುಚ್ಚಿ ಆಟ ಆರಂಭಿಸಲಾಯಿತು.
 
ಮೊದಲ ಹಾಗೂ ತೃತೀಯ ಸೆಟ್‌ನಲ್ಲಿ ಜೊಕೋವಿಕ್‌ ಸಂಪೂರ್ಣ ಮೇಲುಗೈ ಸಾಧಿಸಿದರು. ಮೊದಲ ಹಾಗೂ 3ನೇ ಸೆಟ್‌ ವೇಳೆ ಕಂಡುಬಂದ 24 ಶಾಟ್‌ಗಳ ಸುದೀರ್ಘ‌ ರ್ಯಾಲಿ ಫೈನಲ್‌ ಹಣಾಹಣಿಯ ವಿಶೇಷವಾಗಿತ್ತು. ಆಗ ಡೆಲ್‌ ಪೊಟ್ರೊ ತಮ್ಮ ಫೋರ್‌ಹ್ಯಾಂಡ್‌ ಶಾಟ್‌ ಒಂದನ್ನು ನೆಟ್‌ಗೆ ಅಪ್ಪಳಿಸುವುದರೊಂದಿಗೆ ಮೊದಲ ಸೆಟ್‌ ಕಳೆದುಕೊಂಡರು. ಆದರೆ ದ್ವಿತೀಯ ಸೆಟ್‌ನಲ್ಲಿ ಡೆಲ್‌ ಪೊಟ್ರೊ ತಿರುಗಿ ಬೀಳುವ ಸೂಚನೆ ನೀಡಿದರು. ಜೊಕೋ 3-1 ಅಂಕಗಳಿಂದ ಮುನ್ನುಗ್ಗುತ್ತಿರುವಾಗಲೇ ಡೆಲ್‌ ಪೊಟ್ರೊ ಸತತ 2 ಅಂಕ ಗಿಟ್ಟಿಸಿ 3-3 ಸಮಬಲಕ್ಕೆ ತಂದರು. ಹೋರಾಟ ತೀವ್ರಗೊಂಡಿತು. ಸೆಟ್‌ ಟೈ-ಬ್ರೇಕರ್‌ಗೆ ವಿಸ್ತರಿಸಲ್ಪಟ್ಟಿತು. 95 ನಿಮಿಷಗಳ ಈ ಸೆಟ್‌ ಸರ್ಬಿಯನ್‌ ಟೆನಿಸಿಗನಿಗೇ ಒಲಿಯಿತು.

ಆಗ 1949ರ ಬಳಿಕ, ಮೊದಲೆರಡು ಸೆಟ್‌ ಸೋತು ಯುಎಸ್‌ ಓಪನ್‌ ಪ್ರಶಸ್ತಿ ಎತ್ತುವ ದೂರದ ಸಾಧ್ಯತೆಯೊಂದು ಡೆಲ್‌ ಪೊಟ್ರೊ ಮುಂದಿತ್ತು. ಅಂದು ಪ್ಯಾಂಕೊ ಗೊನಾಲೆಸ್‌ ಈ ಸಾಧನೆ ಮಾಡಿದ್ದರು. ಆದರಿಲ್ಲಿ ಜೊಕೋ ಅಬ್ಬರದ ಮುಂದೆ ಆರ್ಜೆಂಟೀನಾ ಟೆನಿಸಿಗನ ಆಟ ಸಾಗಲಿಲ್ಲ. 24 ಶಾಟ್‌ಗಳ ಮತ್ತೂಂದು ಸುದೀರ್ಘ‌ ರ್ಯಾಲಿಗೆ ಸಾಕ್ಷಿಯಾದ ಅಂತಿಮ ಸೆಟ್‌ನಲ್ಲೂ ಜೊಕೋವಿಕ್‌ ಜಯ ಸಾಧಿಸಿ “ನ್ಯೂಯಾರ್ಕ್‌ ಕಿಂಗ್‌’ ಆಗಿ ಹೊರಹೊಮ್ಮಿದರು.

Advertisement

50 ಪ್ರಶಸ್ತಿ ಹಂಚಿಕೊಂಡ ನಾಲ್ವರು
ಈ ಫ‌ಲಿತಾಂಶದೊಂದಿಗೆ ಗ್ರ್ಯಾನ್‌ಸ್ಲಾಮ್‌ ಮುಖಾಮುಖೀಯಲ್ಲಿ ಡೆಲ್‌ ಪೊಟ್ರೊ ವಿರುದ್ಧ ಆಡಿದ ಎಲ್ಲ 5 ಪಂದ್ಯಗಳಲ್ಲೂ ಜೊಕೋವಿಕ್‌ ಜಯ ಸಾಧಿಸಿದಂತಾಯಿತು. ಒಟ್ಟಾರೆಯಾಗಿ 15ನೇ ಗೆಲುವು. ಇವರಿಬ್ಬರು ಗ್ರ್ಯಾನ್‌ಸ್ಲಾಮ್‌ ಫೈನಲ್‌ನಲ್ಲಿ ಎದುರಾದದ್ದು ಇದೇ ಮೊದಲು. ಹಾಗೆಯೇ ಕಳೆದ 55 ಗ್ರ್ಯಾನ್‌ಸ್ಲಾಮ್‌ಗಳಲ್ಲಿ 50 ಪ್ರಶಸ್ತಿಗಳನ್ನು “ಬಿಗ್‌ ಫೋರ್‌’ ಖ್ಯಾತಿಯ ಫೆಡರರ್‌, ನಡಾಲ್‌, ಜೊಕೋವಿಕ್‌ ಮತ್ತು ಆ್ಯಂಡಿ ಮರ್ರೆ ಅವರೇ ಗೆದ್ದಂತಾಯಿತು!

ಪೀಟ್‌ ಸಾಂಪ್ರಸ್‌ ಟೆನಿಸ್‌ ಲೆಜೆಂಡ್‌. ನನ್ನ ಬಾಲ್ಯದ ಐಡಲ್‌. ನಾನು ಮೊದಲ ಸಲ ಸಾಂಪ್ರಸ್‌ ಆಟವನ್ನೇ ಟಿವಿಯಲ್ಲಿ ನೋಡಿದ್ದು. ಬಹುಶಃ ಅದು ಅವರ ಮೊದಲ ಅಥವಾ ಎರಡನೇ ವಿಂಬಲ್ಡನ್‌ ಕೂಟವಿರಬೇಕು. ನನ್ನ ಟೆನಿಸ್‌ ಆಟಕ್ಕೆ ಸಾಂಪ್ರಸ್‌ ಅವರೇ ಸ್ಫೂರ್ತಿಯಾದರು. ಈಗ ಅವರ ಗ್ರ್ಯಾನ್‌ಸ್ಲಾಮ್‌ ದಾಖಲೆಯನ್ನು ಸರಿದೂಗಿಸಿದ ಅಪೂರ್ವ ಕ್ಷಣ ನನ್ನದಾಗಿದೆ. ಹೀಗಾಗಿ ನನಗೀಗ ಡಬಲ್‌ ಸಂಭ್ರಮ.
– ನೊವಾಕ್‌ ಜೊಕೋವಿಕ್‌

Advertisement

Udayavani is now on Telegram. Click here to join our channel and stay updated with the latest news.

Next