ಹೊಸದಿಲ್ಲಿ: ಮತದಾರರ ಪಟ್ಟಿ ಮತ್ತು ಆಧಾರ್ ಅನ್ನು ಸ್ವಯಂ ಪ್ರೇರಿತವಾಗಿ ಲಿಂಕ್ ಮಾಡುವ ಬಗ್ಗೆ ಕೇಂದ್ರ ಸರಕಾರ ಶುಕ್ರವಾರ ಪ್ರಕಟನೆಯನ್ನು ಹೊರಡಿಸಿದೆ.
ಇದರ ಜತೆಗೆ 18 ವರ್ಷ ಪೂರ್ತಿಗೊಂಡ ಮತದಾರರು ವರ್ಷಕ್ಕೆ ನಾಲ್ಕು ಬಾರಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಸಿಗಲಿದೆ. ಈ ನಿಟ್ಟಿನಲ್ಲಿ ಒಟ್ಟು ನಾಲ್ಕು ಪ್ರಕಟನೆಯನ್ನು ಹೊರಡಿಸಲಾಗಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನ ಸರಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ಅವರು ಬರೆದು ಕೊಂಡಿದ್ದಾರೆ. ಚುನಾವಣ ಆಯೋಗದ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ಸಂಸತ್‌ನಲ್ಲಿ ಅಂಗೀಕಾರಗೊಂಡಿದ್ದ ಚುನಾವಣ ಕಾಯ್ದೆಗಳು (ತಿದ್ದುಪಡಿ) 2021ರ ಅನ್ವಯ ಈ ಪ್ರಕಟನೆ ಹೊರಡಿಸಲಾಗಿದೆ.
ನಿರಾಕರಿಸಲು ಅವಕಾಶವಿಲ್ಲ: ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ದೃಢಪಡಿಸುವ ನಿಟ್ಟಿನಲ್ಲಿ ಬಯಸುವ ಮತದಾರರು ಆಧಾರ್ ಸಂಖ್ಯೆಯನ್ನು ಅಧಿಕಾರಿಗಳಿಗೆ ನೀಡಲು ತಿದ್ದುಪಡಿ ಕಾಯ್ದೆಯ ಅನ್ವಯ ಅವಕಾಶ ನೀಡಲಾಗಿದೆ. ಆಧಾರ್ ಸಂಖ್ಯೆ ನೀಡಲಾಗಿಲ್ಲ ಎಂಬ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಲು, ಹೆಸರು ಅಳಿಸಿ ಹಾಕಲು ಅವಕಾಶ ಇಲ್ಲ ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ.
4 ಬಾರಿ: ಸದ್ಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ವರ್ಷಕ್ಕೆ ಒಂದೇ ಬಾರಿ ಅವಕಾಶ ಇದೆ. ಇನ್ನು ಜ. 1, ಎ. 1, ಜು. 1, ಮತ್ತು ಅ. 1ರಂದು 18 ವರ್ಷ ಪೂರ್ತಿಗೊಳ್ಳುವವರಿಗೆ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಲಿಂಗ ಸಮಾನತೆ: ಲಿಂಗ ಸಮಾನತೆ ಎತ್ತಿಹಿಡಿಯುವ ನಿಟ್ಟಿನಲ್ಲಿ ಚುನಾವಣ ಕರ್ತವ್ಯದಲ್ಲಿ ತೆರಳುವವರಿಗೆ (ಸರ್ವಿಸ್ ವೋಟರ್) ಪುರುಷ ಅಥವಾ ಮಹಿಳೆ ಎಂದು ಗುರುತಿಸುವುದರಿಂದಲೂ ವಿನಾಯಿತಿಯನ್ನು ನೀಡಲಾಗಿದೆ. ಯೋಧರ ಪತ್ನಿಯರಿಗೂ ಸರ್ವಿಸ್ ವೋಟರ್ ಎಂಬ ಮಾನ್ಯತೆಯನ್ನೂ ನೀಡಲಾಗಿದೆ.