ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದವರಿಗೆ ನೋಟಿಸ್ ಜಾರಿಗೊಳಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಥಣಿಸಂದ್ರದ ನಂದಗೋಕುಲ ಬಡಾವಣೆ ಸೇರಿ ವಿವಿಧ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ಜಾರಿಗೊಳಿಸಿ, ತೆರವಿಗೆ ಕ್ರಮ ಕೈಗೊಳ್ಳುವಂತೆ ಹಾಗೂ ಮುಂದೆ ಮಳೆಯಾದರೆ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ತ್ವರಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ನಂದಗೋಕುಲ ಬಡಾವಣೆಯಲ್ಲಿ ಮಳೆಯಿಂದಾಗಿ 50ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಇದರಿಂದ ಮನೆಯಲ್ಲಿದ್ದ ಎಲ್ಲ ವಸ್ತುಗಳು ಹಾಳಾಗಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಜಾರ್ಜ್, ಬಡಾವಣೆಯಲ್ಲಿ ಮಳೆಯಿಂದಾಗಿ ಹಲವಾರು ಮನೆಗಳು ಜಲಾವೃತಗೊಂಡು ಜನ ತೊಂದರೆ ಅನುಭವಿಸಿದ್ದಾರೆ. ಅವರಿಗೆ ಪರಿಹಾರ ನೀಡುವ ಉದ್ದೇಶದಿಂದ, ನಿವಾಸಿಗಳಿಗೆ ಆಗಿರುವ ನಷ್ಟದ ಮಾಹಿತಿ ಸಂಗ್ರಹಿಸುವಂತೆ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಗಿದ್ದು, ಎಷ್ಟು ಪರಿಹಾರ ನೀಡಬೇಕು ಎಂಬುದನ್ನು ಬಳಿಕ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ನಂತರ ಥಣಿಸಂದ್ರ ರಾಜಕಾಲುವೆ, ಕಲ್ಯಾಣ ನಗರದ ಮಧ್ಯಮಿಕ ಮಳೆ ನೀರುಗಾಲುವೆ, ಹೆಣ್ಣೂರಿನ ಬಳಿಯ ರಾಜಕಾಲುವೆ ಪರಿಶೀಲಿಸಿದ ಸಚಿವರು ಕಾಲುವೆ ಒತ್ತುವರಿ ಹಾಗೂ ಟ್ಯಾನರಿ ರಸ್ತೆಯಲ್ಲಿರುವ 5 ಎಕರೆ ತ್ಯಾಜ್ಯ ವಿಲೇವಾರಿ ಘಟಕ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಅಲ್ಲದೆ, ಜಾಗವನ್ನು ಬಿಎಂಆರ್‌ಸಿಎಲ್‌ಗೆ ನೀಡುವ ಮೊದಲು ಸ್ವತ್ಛಗೊಳಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಹೇಳಿದರು. ಪರಿಶೀಲನೆಯ ವೇಳೆ ಮೇಯರ್ ಜಿ.ಪದ್ಮಾವತಿ, ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸೇರಿ ಸ್ಥಳೀಯ ಪಾಲಿಕೆ ಸದಸ್ಯರು ಹಾಜರಿದ್ದರು.