Advertisement

ಗೈರಾದ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರಿಗೆ ನೋಟಿಸ್‌

12:27 PM Sep 29, 2018 | Team Udayavani |

ಬೆಂಗಳೂರು: ಬಿಬಿಎಂಪಿ ಮೇಯರ್‌, ಉಪಮೇಯರ್‌ ಚುನಾವಣೆಗೆ ಗೈರು ಹಾಜರಾದ ಹಿರಿಯ ಶಾಸಕ ರೋಷನ್‌ ಬೇಗ್‌ ಹಾಗೂ ಇಬ್ಬರು ಬಿಬಿಎಂಪಿ ಸದಸ್ಯರಿಗೆ ಕಾರಣ ಕೇಳಿ ಕಾಂಗ್ರೆಸ್‌ ನೋಟಿಸ್‌ ನೀಡಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೂಚನೆ ಮೇರೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ, ಮೂವರಿಗೂ ಪ್ರತ್ಯೇಕ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ರೋಷನ್‌ಬೇಗ್‌ ಅವರಿಗೆ ನೀಡಿರುವ ನೋಟಿಸ್‌ನಲ್ಲಿ, ಪಕ್ಷದ ಹಿರಿಯ ಶಾಸಕರಾಗಿ ಶಾಸಕಾಂಗ ಪಕ್ಷದ ನಾಯಕರ ಗಮನಕ್ಕೆ ತಾರದೇ ವಿದೇಶ ಪ್ರವಾಸ ಕೈಗೊಂಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿತ್ವದಲ್ಲಿರುವುದರಿಂದ ಪಕ್ಷ ಹಾಗೂ ಸರ್ಕಾರ ಪ್ರತಿಯೊಂದು ಚನಾವಣೆಯನ್ನೂ ಗಂಭೀರವಾಗಿ ಪರಿಗಣಿಸಿದ್ದು,

ಮೈತ್ರಿ ಸರ್ಕಾರ ಬಂದ ಮೇಲೆ ನಡೆದ ಬಿಬಿಎಂಪಿ ಮೇಯರ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವ ಕುರಿತು ಹಲವಾರು ಬಾರಿ ಪಕ್ಷದಿಂದ ನಿರ್ದೇಶನ ನೀಡಿದ್ದರೂ ವಿದೇಶ ಪ್ರವಾಸ ತೆರಳಿ ಗೈರು ಹಾಜರಾಗುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದೀರಿ. ಈ ಹಿನ್ನೆಲೆಯಲ್ಲಿ ತಕ್ಷಣ ಸ್ಪಷ್ಟೀಕರಣ ನೀಡಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. 

ಅದೇ ರೀತಿ ಎಚ್‌ಎಂಟಿ ವಾರ್ಡ್‌ ಸದಸ್ಯೆ ಆಶಾ ಸುರೇಶ್‌ ಹಾಗೂ ಪಿಣ್ಯ ಕೈಗಾರಿಕಾ ಪ್ರದೇಶ ವಾರ್ಡ್‌ನ ಸದಸ್ಯೆ ಲಲಿತಾ ತಿಮ್ಮನಂಜಯ್ಯ ಕೂಡ ಚುನಾವಣೆಗೆ ಗೈರು ಹಾಜರಾಗಿದ್ದರಿಂದ ಅವರಿಗೂ ನೋಟಿಸ್‌ ನೀಡಿ, ಒಂದು ವಾರದಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಪಕ್ಷ ನೋಟಿಸ್‌ ನೀಡಿದ ತಕ್ಷಣ ಕೆಪಿಸಿಸಿ ಕಚೇರಿಗೆ ಆಗಮಿಸಿದ ಎಚ್‌ಎಂಟಿ ವಾರ್ಡ್‌ ಸದಸ್ಯೆ ಆಶಾ ಸುರೇಶ್‌ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎದುರು ಅಳಲು ತೋಡಿಕೊಂಡಿದ್ದಾರೆ. ಪಕ್ಷದ ನಾಯಕರು ಸಾಕಷ್ಟು ಕಿರುಕುಳ ನೀಡಿದ್ದಾರೆ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ವಿರುದ್ಧ ಪರೋಕ್ಷ ಆರೋಪ ಮಾಡಿದ್ದಾರೆ.

Advertisement

ಆದರೆ, ಪಕ್ಷ ಸೂಚನೆ ನೀಡಿದ್ದರೂ ಚುನಾವಣೆಯಿಂದ ದೂರ ಉಳಿದಿರುವುದಕ್ಕೆ ದಿನೇಶ್‌ ಗುಂಡೂರಾವ್‌ ಆಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಬೇಸತ್ತು ಆಶಾ ಸುರೇಶ್‌ ಕಣ್ಣೀರು ಹಾಕುತ್ತಲೇ ಕೆಪಿಸಿಸಿಯಿಂದ ತೆರಳಿದ್ದಾರೆ. 

ಮತ ಹಾಕದ ಸದಸ್ಯೆ – ಜೆಡಿಎಸ್‌ ನೋಟಿಸ್‌: ಈ ಮಧ್ಯೆ, ಕೆಂಪೇಗೌಡ ಪೌರ ಸಭಾಂಗಣದಲ್ಲಿ ಹಾಜರಿದ್ದರೂ ಉಪ ಮೇಯರ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಮತ ಹಾಕದ ಲಗ್ಗೆರೆ ವಾರ್ಡ್‌ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಅವರಿಗೆ ನೋಟಿಸ್‌ ನೀಡಲು ಜೆಡಿಎಸ್‌ ತೀರ್ಮಾನಿಸಿದೆ.

ಪಕ್ಷದ ಟಿಕೆಟ್‌ ನೀಡಿ ಪಾಲಿಕೆ ಸದಸ್ಯರನ್ನಾಗಿ ಮಾಡಿ ಸ್ಥಾಯಿ ಸಮಿತಿ ಅಧ್ಯಕ್ಷಗಿರಿ ಸೇರಿ ಹಲವಾರು ಸ್ಥಾನಮಾನ ನೀಡಿದ್ದರೂ ವಿಪ್‌ ಉಲ್ಲಂ ಸಿರುವುದು ಪಕ್ಷ ಹಾಗೂ ನಾಯಕರಿಗೆ ಮಾಡಿರುವ ಅಪಮಾನ. ಹೀಗಾಗಿ, ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗುವುದು ಹಾಗೂ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಸದಸ್ಯತ್ವ ರದ್ದಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಪ್ರಕಾಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next